ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ನಿಂದ ರೈಲು ಸೇವೆ ಆರಂಭವಾಗಲಿದೆ. ವಿಮಾನ ನಿಲ್ದಾಣದಲ್ಲಿ ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್ ಮತ್ತಿತರ ಮಾಹಿತಿ ಅಳವಡಿಸಲಾಗಿದೆ. ಬೆಳಗ್ಗೆ ೪.೪೫ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ಮೊದಲ ರೈಲು, 5.50ಕ್ಕೆ ಕೆಐಎಡಿ ತಲುಪಲಿದೆ. ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ರೈಲುಗಳ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಬೆಳಗಿನ ಜಾವ ಮತ್ತು ತಡ ರಾತ್ರಿ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಮೊದಲ ರೈಲಿನ ಸಂಚಾರಕ್ಕೆ ಸಂಸದ ಪಿ.ಸಿ. ಮೋಹನ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ. ವರ್ಮ ಸಾಕ್ಷಿಯಾಗಲಿದ್ದಾರೆ.
ನಗರದಿಂದ ಏರ್‌ಪೋರ್ಟ್ಗೆ ವೋಲ್ವೊ ಬಸ್‌ನಲ್ಲಿ ತೆರಳಲು 270 ರೂ. ಖಾಸಗಿ ಟ್ಯಾಕ್ಸಿಗೆ 600 ರಿಂದ 1,000ರೂ. ನೀಡಬೇಕಿತ್ತು. ಸಂಚಾರ ದಟ್ಟಣೆಯಿಂದ ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಕೆಎಸ್‌ಆರ್‌ನಿಂದ 10 ರೂ. ಕಂಟೋನ್ಮೆಂಟ್‌ನಿಂದ ೧೫ ರೂ.ನಲ್ಲಿ ಹಾಲ್ ಸ್ಟೇಷನ್ ತಲುಪಬಹುದು. ಹಾಲ್‌ಸ್ಟೇಷನ್‌ನಿಂದ ವಿಮಾನ ನಿಲ್ದಾಣಕ್ಕೆ 5ಕಿ.ಮೀ. ದೂರವಿದ್ದು, ಬಿಐಎಎಲ್ ಉಚಿತ ಷಟಲ್ ಬಸ್ ಸೇವೆಯ ವ್ಯವಸ್ಥೆ ಮಾಡಿದೆ. ಸದ್ಯಕ್ಕೆ 50ರಿಂದ 60 ನಿಮಿಷಗಳ ಪ್ರಯಾಣ ಇದಾಗಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು, ಮುಂದಿನ ದಿನಗಳಲ್ಲಿ ನೇರ ತಡೆರಹಿತ ರೈಲುಗಳನ್ನು ಪರಿಚಯಿಸುವ ಚಿಂತನೆ ಇದೆ. ಆಗ ಪ್ರಯಾಣ ಸಮಯವು ಅರ್ಧದಷ್ಟು ಕಡಿಮೆಯಾಗಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾರೆ.
Courtesyg: Google (photo)