ಕನ್ನಡ ಕಾಯಕ ವರ್ಷ ಆಚರಣೆ ಅಂಗವಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆ-ಸಂಸ್ಥೆಗಳು ಸಂಪೂರ್ಣವಾಗಿ ಕನ್ನಡದಲ್ಲೇ ಕಡತ ನಿರ್ವಹಣೆ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳೂ ಕನ್ನಡದಲ್ಲೇ ಲಭ್ಯವಾಗಬೇಕು. ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಬೇಕು. ಇಲಾಖೆಗಳ ನೀತಿಗಳ ಅಂತಿಮ ಪ್ರತಿಗಳನ್ನು ಕನ್ನಡದಲ್ಲೂ ಪ್ರಕಟಿಸಬೇಕು. ಇ-ಆಡಳಿತದಲ್ಲಿ ಕನ್ನಡದಲ್ಲೇ ಎಸ್ಎಂಎಸ್ ಮತ್ತು ಇ–ಮೇಲ್ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು. ಖಜಾನೆ, ಮಾನವ ಸಂಪನ್ಮೂಲ ನಿರ್ವಹಣೆ, ಟೆಂಡರ್ ತಂತ್ರಾಂಶಗಳು ಮತ್ತು ಸರ್ಕಾರಿ ಆ್ಯಪ್ಗಳನ್ನು ಕನ್ನಡದಲ್ಲೂ ಸಿದ್ಧಪಡಿಸಿ, ಬಳಕೆಗೆ ಒದಗಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆ ಹೇಳಿದೆ.
ಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಕನ್ನಡ ಬಳಕೆ ಮಾಡಬೇಕು. ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸೇವೆ ಪಡೆಯುವಾಗ ಕನ್ನಡಿಗರನ್ನೇ ಪೂರೈಸುವ ಷರತ್ತು ವಿಧಿಸಬೇಕು. ಕಾಯಿದೆ, ಮಸೂದೆ, ಸಚಿವ ಸಂಪುಟದ ಟಿಪ್ಪಣಿ ಮತ್ತು ಅಧಿಸೂಚನೆಗಳನ್ನು ಕನ್ನಡದಲ್ಲೇ ಪ್ರಕಟಿಸಬೇಕು. ಹೆದ್ದಾರಿಗಳು ಮತ್ತು ರಸ್ತೆಯ ಮಾರ್ಗಸೂಚಿ ಫಲಕಗಳು, ಮೈಲುಗಲ್ಲುಗಳ ಫಲಕದಲ್ಲಿ ಕನ್ನಡ ಪ್ರಧಾನವಾಗಿರಬೇಕು. ಜಿಲ್ಲೆಯ ಪ್ರಮುಖ ರಸ್ತೆಗಳು, ವೃತ್ತಗಳಿಗೆ ಸಾಹಿತಿಗಳು, ಹಿರಿಯ ಹೋರಾಟಗಾರರ ಹೆಸರು ಇಡಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂ ಮತ್ತು ಅರೆವೈದ್ಯಕೀಯ ಸಂಸ್ಥೆಗಳು ಕನ್ನಡವನ್ನು ಬಳಕೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.
Courtesyg: Google (photo)