ಒಂದು ದೇಶ ಒಂದು ಪಡಿತರ ಚೀಟಿ ಸುಧಾರಣೆಯನ್ನು ಅಳವಡಿಸಿಕೊಂಡಿರುವ ಒಂಬತ್ತು ರಾಜ್ಯಗಳಿಗೆ 23,523 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕ ಹೆಚ್ಚುವರಿಯಾಗಿ 4,509 ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ಪಡಿತರ ಸುಧಾರಣೆಯನ್ನು ಪೂರ್ಣಗೊಳಿಸಿವೆ. ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಡಿ.೩೧ರೊಳಗೆ ಸುಧಾರಣೆಗಳನ್ನು ಪೂರ್ಣಗೊಳಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಮಾತ್ರವಲ್ಲದೆ, ಸುಲಲಿತ ವಾಣಿಜ್ಯ ವಹಿವಾಟು, ಇಂಧನ ವಲಯ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಧಾರಣೆಗಳ ಮೂಲಕವೂ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ.
ಕೋವಿಡ್‌ನಿಂದಾದ ಆರ್ಥಿಕ ಹಿನ್ನಡೆಯನ್ನು ನಿರ್ವಹಿಸಲು ರಾಜ್ಯಗಳು ಜಿಎಸ್‌ಡಿಪಿಯ ಶೇ.೨ ರಷ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದಾಗಿದೆ. ಆದರೆ, ಸಾಲದಿಂದ ರಾಜ್ಯಗಳು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂದು ನಾಗರಿಕ ಸೇವೆಗಳಲ್ಲಿ ಸುಧಾರಣೆ ತಂದ ರಾಜ್ಯಗಳು ಮಾತ್ರ ಸಾಲ ಮಾಡಬಹುದು ಎಂಬ ನಿಯಮ ವಿಧಿಸಲಾಗಿದೆ.
Courtesyg: Google (photo)