ಹೊನ್ನಾವರ ತಾಲೂಕಿನ ಕಾಸರಕೋಡು ಸೇರಿದಂತೆ ದೇಶದ ಎಂಟು ಕಡಲ ತೀರಗಳಲ್ಲಿ ಪ್ರತಿಷ್ಠಿತ ಬ್ಲೂಫ್ಲ್ಯಾಗ್‌ನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ ಜಾವಡೇಕರ್ ಅನಾವರಣಗೊಳಿಸಿದರು. ಮುಂಬರುವ 3-4 ವರ್ಷಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲು 100 ಕಡಲ ತೀರಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಎಂಟು ಕಡಲತೀರಗಳಲ್ಲಿ ಬ್ಲೂಫ್ಲ್ಯಾಗ್ ಅನಾವರಣಗೊಳಿಸಲಾಗಿದೆ ಎಂದು ವರ್ಚುವಲ್ ಕಾರ್ಯಕ್ರಮದಲ್ಲಿ ಹೇಳಿದರು.
ಕಡಲತೀರದ ಗುಣಮಟ್ಟ ಕಾಪಾಡಲು ಕೈಗೊಂಡ ಕ್ರಮಗಳು ಮತ್ತು ಸುಸ್ಥಿರ ಅಭಿವೃದ್ಧಿ ಉಪಕ್ರಮಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಂದಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಹಾಗೂ ಸಾಗರ ಮಾಲಿನ್ಯ ತಡೆಯಲು ಕಡಲತೀರಗಳ ಸ್ವಚ್ಛತೆ ಜನಾಂದೋಲನ ಆಗಬೇಕಿದೆ ಎಂದರು. ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರಸ್ನೇಹಿ ನಿರ್ಮಾಣ ಸೇರಿದಂತೆ ೩೩ ಷರತ್ತುಗಳನ್ನು ಪಾಲಿಸುವ ಕಡಲ ತೀರಗಳಿಗೆ ಡೆನ್ಮರ‍್ಕ್ನ ಕೋಪನ್‌ಹೇಗನ್‌ನಲ್ಲಿರುವ ಪರಿಸರ ಶಿಕ್ಷಣ ವೇದಿಕೆಯು ಬ್ಲೂಫ್ಲ್ಯಾಗ್ ಮನ್ನಣೆ ನೀಡುತ್ತದೆ. ರಾಜ್ಯದ ಕಾಸರಕೋಡು, ಪಡುಬಿದ್ರಿ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ, ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್ ದ್ವೀಪದ ರಾಧಾನಗರ ಕಡಲತೀರಗಳು ಬ್ಲೂಫ್ಲ್ಯಾಗ್ ಮನ್ನಣೆಗೆ ಪಾತ್ರವಾಗಿವೆ. ಈವರೆಗೆ ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಮಾತ್ರ ಈ ಪ್ರತಿಷ್ಠಿತ ಪ್ರಮಾಣಪತ್ರ ಪಡೆದಿದ್ದವು.
Courtesyg: Google (photo)