ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆ ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ. ತಾನು ಅಭಿವೃದ್ಧಿ ಪಡಿಸಿರುವ ಲಸಿಕೆ ಕೋವಿಡ್ ತಡೆಯುವಲ್ಲಿ ಶೇ. 90ರಷ್ಟು ಪರಿಣಾಮಕಾರಿ ಎನ್ನುವ ಫೈಝರ್ ಕಂಪನಿಯ ಹೇಳಿಕೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಸತತ ಏಳನೇ ವಹಿವಾಟು ಅವಧಿಯಲ್ಲೂ ಏರಿಕೆ ದಾಖಲಿಸಿದ್ದು, ಮಂಗಳವಾರ 680 ಅಂಶ ಜಿಗಿತಗೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 43.277 ಅಂಶ ತಲುಪಿದೆ. ಅದೇ ರೀತಿ, ರಾಷ್ಟ್ರೀಯ ಷೇರುಪೇಟೆ(ಬಿಎಸ್‌ಇ) ಸೂಚ್ಯಂಕ ನಿಫ್ಟಿ170 ಅಂಶ ಅಧಿಕಗೊಂಡು, 12,631 ಅಂಶ ದಾಖಲಿಸಿದೆ. ಬಜಾಜ್ ಫೈನಾನ್ಸ್ನ ಷೇರು ಶೇ. 8.84 ಗರಿಷ್ಠ ಗಳಿಕೆ ಕಂಡಿದ್ದು, ಇಂಡಸ್ ಇಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಒಎನ್‌ಜಿಸಿ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳ ಬೆಲೆಯೂ ಹೆಚ್ಚಿದೆ. ಆದರೆ, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್, ನೆಸ್ಲೆ, ಇನ್ಫೋಸಿಸ್, ಸನ್ ಫಾರ್ಮಾ ಮತ್ತು ಟಿಸಿಎಸ್ ಕಂಪನಿಗಳ ಷೇರುಗಳು ಶೇ.5.73 ರಷ್ಟು ಇಳಿದಿವೆ. ಏಷ್ಯಾ, ಹಾಂಗ್‌ಕಾಂಗ್ , ಸೋಲ್ ಮತ್ತು ಟೋಕಿಯೊದಲ್ಲಿ ಸೂಚ್ಯಂಕಗಳು ಏರಿಕೆ ಕಂಡಿದ್ದು, ಯುರೋಪಿನ ಷೇರುಪೇಟೆಗಳಲ್ಲೂ ಸಕಾರಾತ್ಮಕ ವಹಿವಾಟು ನಡೆಯಿತು. ದಿಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ 10ಗ್ರಾಂಗೆ 662 ರೂ. ಇಳಿಕೆಯಾಗಿದೆ( 49.160 ರೂ.). ಬೆಳ್ಳಿ ಧಾರಣೆ ಕೆ.ಜಿಗೆ 1.431ರೂ. ಕಡಿಮೆಯಾಗಿದ್ದು, 62.217 ರೂ.ನಂತೆ ಮಾರಾಟವಾಗಿದೆ.
Courtesyg: Google (photo)