ನಂಜುಂಡಯ್ಯ ಸುಬ್ಬರಾವ್.
-ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್
ಮೇಲುಕೋಟೆ-571431
ಖಾದಿ ಚಡ್ಡಿ, ಮೇಲೊಂದು ಖಾದಿ ಅಂಗಿ, ಬಗಲಲ್ಲಿ ಖಾದಿ ಚೀಲ, ಒಂದು ಸಾಧಾರಣ ಚಪ್ಪಲಿ.ಈ ದಿರಿಸಿನಲ್ಲೇ 75 ವರ್ಷ ಕಾಲ ದೇಶವನ್ನು ಸುತ್ತಿರುವ ಸೇಲಂ ನಂಜುಂಡಯ್ಯ ಸುಬ್ಬರಾವ್, 91ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.20 ವರ್ಷ ವಯಸ್ಸಿನಲ್ಲಿ ಮನೆಯಿಂದ ಹೊರ ನಡೆದ ಇವರು ಮತ್ತೆ ಮನೆಗೆ ಮರಳಿದ್ದು 90 ನೇ ವಯಸ್ಸಿನಲ್ಲಿ. ಸುಬ್ಬರಾಯರ ಹೆಸರಿನಲ್ಲಿ ಸೇಲಂ ಎನ್ನುವ ಹೆಸರು ಇದ್ದರೂ, ಅವರು ಅಚ್ಚ ಕನ್ನಡಿಗರು. 1942ರ ಸೆಪ್ಟೆಂಬರ್ 9 ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭ.ಗೋಡೆಯ ಮೇಲೆ ಭಾರತ ಬಿಟ್ಟು ತೊಲಗಿ ಎಂದು ಬರೆಯುತ್ತಿದ್ದ ಹದಿಮೂರು ವರ್ಷದ ಬಾಲಕ, ಪೊಲೀಸರ ಕೈಗೆ ಸಿಕ್ಕಿ ಬಿದ್ದ.ಸಣ್ಣ ವಯಸ್ಸು ಆದ್ದರಿಂದ, ಪೊಲೀಸರು ಬೆದರಿಸಿ ಓಡಿಸಿದರು.ಚಳವಳಿ ರಂಗಕ್ಕೆ ಹೀಗೆ ಕಾಲಿರಿಸಿದ ಸುಬ್ಬರಾವ್, ಇಡೀ ಬದುಕನ್ನು ಚಳವಳಿಯಲ್ಲೇ ಕಳೆದರು.೧೯೪೮ರಲ್ಲಿ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸೇವಾ ದಳದ ಶಿಬಿರದಲ್ಲಿ ಭಾಗವಹಿಸಿದ್ದ ಸುಬ್ಬರಾವ್ ಅವರನ್ನು ಕಂಡ ಡಾ.ಎನ್.ಎಸ್.ಹರ್ಡಿಕರ ಅವರಿಗೆ, ಭರವಸೆಯ ಯುವಕ ಅನಿಸಿತು. ಓದು ಮುಗಿದ ಮೇಲೆ ಒಂದು ವರ್ಷ ನನ್ನೊಂದಿಗೆ ಬಾ ಎಂದರು. 1951ರಲ್ಲಿ ಪದವಿ ಪಡೆದ ಸುಬ್ಬರಾವ್, ಸೇವಾದಳದ ಕಚೇರಿಗೆ ಹೋದರು.ಒಂದು ವರ್ಷ ಎಂದು ಹೋದವರು ಇಡೀ ಬದುಕನ್ನು ಸೇವಾದಳದಲ್ಲೇ ಕಳೆದುಬಿಟ್ಟರು.
ದೇಶದ ಐಕ್ಯತೆಗೆ ಯುವಕರನ್ನು ತೊಡಗಿಸುವುದು ಅವರಿಗೆ ಆಪ್ತವಾದ ಕೆಲಸ. ದೇಶದ ಎಲ್ಲ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅವರ ದನಿಯಿಂದ ಆಕರ್ಷಿತರಾಗದವರು ಇಲ್ಲವೇ ಇಲ್ಲ ಎನ್ನಬಹುದು. ಹೋರಾಟದ ಮತ್ತು ಐಕ್ಯತೆಯ ಹಾಡುಗಳನ್ನು ಸುಬ್ಬರಾವ್ ಹಾಡಲು ನಿಂತರೆ ಮುಗಿಯಿತು; ಕೇಳುಗರಲ್ಲಿ ದೇಶಪ್ರೇಮ ಉಕ್ಕುತ್ತದೆ. ಬಹುಶ: ಅವರು ಭಾಷಣ ಮಾಡಿದ್ದಕ್ಕಿಂತ ಹಾಡಿದ್ದೇ ಹೆಚ್ಚೇನೋ! ಸುಬ್ಬರಾವ್ ಅವರ ಕಂಠಸಿರಿಗೆ ಆಕರ್ಷಿತರಾಗಿ ಅವರೊಂದಿಗೆ ಅನೇಕ ವಿದಾಯಕ ಕೆಲಸಗಳನ್ನು ಮಾಡಿದ ದೊಡ್ಡ ತಂಡವೊAದು ದೇಶದೆಲ್ಲೆಡೆ ಇದೆ.ಅವರು ನಡೆಸಿರುವ ರಾಷ್ಟ್ರೀಯ ಐಕ್ಯತಾ ಶಿಬಿರಗಳ ಲೆಕ್ಕವೇ ಇಲ್ಲವೇನೋ. 20 ಯುವಕರ ಶಿಬಿರದಿಂದ ಹಿಡಿದು ೨೦೦೦ ಯುವಕರ ಶಿಬಿರಗಳನ್ನು ಸುಬ್ಬರಾವ್ ನಡೆಸಿದ್ದಾರೆ.ದಕ್ಷಿಣ ಹಾಗೂ ಉತ್ತರ ಭಾರತದ ಸಾವಿರಾರು ಯುವಕರನ್ನೂ ಒಂದೇ ಶಿಬಿರದಲ್ಲಿ ಒಟ್ಟುಗೂಡಿಸಿ, ನಾವೆಲ್ಲರೂ ಒಂದು ಎಂಬ ಭಾವವನ್ನು ಅವರಲ್ಲಿ ತುಂಬಿದ್ದಾರೆ. ಈಶಾನ್ಯ ರಾಜ್ಯಗಳ ನೂರಾರು ಯುವಕರನ್ನು ದೇಶದ ಇತರ ರಾಜ್ಯಗಳ ಯುವಕರಿಗೆ ಪರಿಚಯಿಸಿ, ನಾವು ಬೇರೆ ಅಲ್ಲ ಎಂಬ ಅರಿವು ಮೂಡಿಸಿದ್ದಾರೆ.
ಎಪ್ಪತ್ತರ ದಶಕದಲ್ಲಿ ಮಧ್ಯಪ್ರದೇಶದ ಚಂಬಲ್ ಕಣಿವೆ ಡಕಾಯಿತರಿಗೆ ಕುಖ್ಯಾತವಾಗಿತ್ತು.ಡಕಾಯಿತರು ಜನಸಾಮಾನ್ಯರನ್ನು ಕಾಡುತ್ತಿದ್ದರು. ಅವರ ಮನವೊಲಿಸಿ, ಹೆಚ್ಚಿನವರು ಶರಣಾಗತರಾಗುವಂತೆ ಮಾಡಿದ್ದು ಲೋಕನಾಯಕ ಜಯಪ್ರಕಾಶ ನಾರಾಯಣ ಅವರು.ಶರಣಾಗತರ ಪುನರ್ವಸತಿಗೆ ಸುಬ್ಬರಾವ್ ನೇತೃತ್ವದಲ್ಲಿ ಮಧ್ಯಪ್ರದೇಶದ ಜೌರಾದಲ್ಲಿ ಗಾಂಧಿ ಸೇವಾಶ್ರಮವನ್ನು ಸ್ಥಾಪಿಸಲಾಯಿತು.ಡಕಾಯಿತರ ಪುನರ್ವಸತಿ ಕಾರ್ಯದಲ್ಲಿ ಸುಬ್ಬರಾಯರು ಹಲವು ದಶಕಗಳನ್ನು ಕಳೆದರು. ಜಮ್ನಾಲಾಲ್ ಬಜಾಜ್ ಪುರಸ್ಕಾರದಿಂದ ಹಿಡಿದು ಕರ್ನಾಟಕ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯವರೆಗೆ ಹಲವು ಪುರಸ್ಕಾರಗಳು ಅವರಿಗೆ ಸಂದಿದೆ.ಪರಿಚಿತರ ವಲಯದಲ್ಲಿ ಭಾಯೀಜಿ ಎಂದೇ ಹೆಸರಾಗಿರುವ ಈ ಬ್ರಹ್ಮಚಾರಿಗೆ ಇಡೀ ದೇಶವೇ ಮನೆ.