ದೇಶದ ಸೇವಾ ವಲಯದ ಚಟುವಟಿಕೆಗಳು ಅಕ್ಟೋಬರ್‌ನಲ್ಲಿ ಚೇತರಿಕೆಯ ಹಾದಿಗೆ ಮರಳಿವೆ. ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಿಂದಾಗಿ ಮಾರುಕಟ್ಟೆ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದೆ. ಇದರಿಂದಾಗಿ ಸೇವಾ ವಲಯ ಚೇತರಿಸಿ ಕೊಂಡಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ. ಸೆಪ್ಟೆಂಬರ್‌ನಲ್ಲಿ 49.8ರಷ್ಟು ಇದ್ದ ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಅಕ್ಟೋಬರ್‌ನಲ್ಲಿ 54.1ಕ್ಕೆ ಏರಿಕೆಯಾಗಿದೆ. ಫೆಬ್ರುವರಿ ತಿಂಗಳ ಬಳಿಕ ಸೂಚ್ಯಂಕವು ೫೦ಕ್ಕಿಂತಲೂ ಮೇಲಕ್ಕೆ ಏರಿಕೆ ಕಂಡಿರುವುದು ಇದೇ ಮೊದಲ ಬಾರಿಯಾಗಿದೆ. ತಯಾರಿಕಾ ವಲಯದ ಚೇತರಿಕೆಯು ಆಗಸ್ಟ್ನಲ್ಲಿಯೇ ಆರಂಭವಾಗಿದೆ. ಸೇವಾ ವಲಯವು ಈಗ ಚೇತರಿಕೆ ಹಾದಿಯಲ್ಲಿದೆ ಎಂದು ಐಸಚ್‌ಎಸ್ ಮರ್ಕಿಟ್ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.ಸೇವೆಗಳು ಮತ್ತು ತಯಾರಿಕಾ ವಲಯದ ಒಟ್ಟಾರೆ ಬೆಳವಣಿಗೆ ಸೂಚ್ಯಂಕ ಸೆಪ್ಟೆಂಬರ್‌ನಲ್ಲಿ 54.6ರಷ್ಟು ಇತ್ತು. ಇದು ಅಕ್ಟೋಬರ್‌ನಲ್ಲಿ 58ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದ ಚಟುವಟಿಕೆಗಳಲ್ಲಿನ ಹೆಚ್ಚಳವನ್ನು ಇದು ತೋರಿಸುತ್ತಿದೆ ಎಂದು ಸಂಸ್ಥೆ ಹೇಳಿದೆ.