ಸೋಪು, ಪೇಸ್ಟ್ನಲ್ಲಿ ಹಾನಿಕರ ರಾಸಾಯನಿಕ

ಸೋಪು ಮತ್ತು ಪೇಸ್ಟ್ನಲ್ಲಿ ಬಳಸುವ ಟ್ರೈಕ್ಲೋಸಾನ್ ಮನುಷ್ಯನ ನರಮಂಡಲದ ಮೇಲೆ ವಿಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ಐಐಟಿಯ ವಿಜ್ಞಾನಿಗಳು ಹೇಳಿದ್ದಾರೆ.  ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಅನಾಮಿಕಾ ಭಾರ್ಗವ ತಂಡದ ನೇತೃತ್ವ ವಹಿಸಿದ್ದರು. ಸೋಪು, ಪೇಸ್ಟ್ ಮತ್ತು ಡಿಆಡರೆಂಟ್‌ಗಳಲ್ಲಿ ಬಳಸಲ್ಪಡುವ ಸಸ್ಯಜನ್ಯ ವಸ್ತುಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಟ್ಟಾಗ ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳವಣಿಗೆ ಆಗುತ್ತವೆ. ಇದನ್ನು ತಡೆಯಲು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟ್ರೈಕ್ಲೋಸಾನ್ ಎಂಬ ರಾಸಾಯನಿಕ ಬಳಸಲಾಗುತ್ತದೆ.

ಮನೆಗಳಲ್ಲಿ ಸಾಕುವ ಜೆಬ್ರಾ ಫಿಶ್‌ನ ಮೇಲೆ ಟ್ರೈಕ್ಲೋಸಿನ್‌ನ ಪರಿಣಾಮಗಳನ್ನು ಪರಿಶೀಲಿಸಲಾಗಿದ್ದು, ಮೀನಿನ ಮೇಲೆ ಆಗುವ ಪರಿಣಾಮಗಳನ್ನು ಮನುಷ್ಯನಿಗೆ ಅನ್ವಯಿಸಬಹುದು ಎಂದು ಅನಾಮಿಕಾ  ತಿಳಿಸಿದ್ದಾರೆ. ಈ ವರದಿ ಕಿಮೋಸ್ಫೇರ್ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. 1960ರಲ್ಲಿ ವೈದ್ಯಕೀಯ ಉಪಕರಣ ಮತ್ತು ಬಟ್ಟೆಗಳಲ್ಲಿ ಮಾತ್ರ ಟ್ರೈಕ್ಲೋಸಾನ್ ಬಳಸಲಾಗುತ್ತಿತ್ತು. ಆದರೆ, ಈಗ ಅದು ಸರ್ವವ್ಯಾಪಿಯಾಗಿದ್ದು, ಸೋಪು, ಹಲ್ಲುಜ್ಜುವ ಪೇಸ್ಟ್, ಡಿಆಡರೆಂಟ್ ಮತ್ತಿತರ ವಸ್ತುಗಳಲ್ಲಿ  ಬಳಕೆಯಾಗುತ್ತಿದೆ.ಇವುಗಳಲ್ಲಿ ಟ್ರೈಕ್ಲೋಸಾನ್‌ನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಲು ಅನುಮತಿ ಇದೆ. ಆದರೆ, ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವುದರಿಂದಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನ ತಂಡವು ವಿವರಿಸಿದೆ.

ಕಡಿಮೆ ಪ್ರಮಾಣದಲ್ಲಿ ಪ್ರತಿದಿನ, ದೀರ್ಘಾವಧಿವರೆಗೆ ಬಳಸಿದರೆ ನರಗಳ ಮಧ್ಯೆ ಸಂದೇಶ ರವಾನೆಗೆ ನೆರವಾಗುವ ನ್ಯೂರಾನ್‌ಗೆ ಹಾನಿಯಾಗುತ್ತದೆ. ಕಾಲಕ್ರಮೇಣ ಮಿದುಳಿನ ವಿವಿಧ ಭಾಗಗಳ ನಡುವೆ  ಸಂವಹನವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ಇದೇ ಕಾರಣದಿಂದ ಅಮೆರಿಕದಲ್ಲಿ ಬಹಳ ಹಿಂದೆ  ಟ್ರೈಕ್ಲೋಸಾನ್ ಬಳಕೆ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಅಧ್ಯಯನ ತಂಡ ಹೇಳಿದೆ. ಆದರೆ, ಟ್ರೈಕ್ಲೋಸಾನ್ ಬಳಕೆಗೆ ಭಾರತದಲ್ಲಿ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಅದರ ಬಳಕೆ  ಬಗ್ಗೆ ಎಚ್ಚರವಿರಬೇಕು. ಟ್ರೈಕ್ಲೋಸಾನ್‌ನ್ನು ನಿಷೇಧಿಸಬೇಕು ಇಲ್ಲವೇ ಕನಿಷ್ಠ ನಿರ್ಬಂಧ ಹೇರಬೇಕು ಎಂದು ಅಧ್ಯಯನ ತಂಡವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top