ಭಾರತೀಯ ಅಂಚೆ ಇಲಾಖೆಯ ನಗರದ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ಗೆ ಚಾಲನೆ ನೀಡಿದೆ. ಇದರಿಂದ ಸ್ಪೀಡ್‌ಪೋಸ್ಟ್ ಹಾಗೂ ನೋಂದಾಯಿತ ಪೋಸ್ಟ್ ಮಾಡಲು ಅಂಚೆ ಕಚೇರಿಗೆ ತೆರಳುವುದು ಹಾಗೂ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ ಎಂದು ಇಲಾಖೆ ತಿಳಿಸಿದೆ. ಕಿಯೋಸ್ಕ್ ಬಳಸಲು ಆ್ಯಪ್ ಕೂಡ ಅಭಿವೃದ್ಧಿ ಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ. ಆ್ಯಪ್‌ನಲ್ಲಿ ವಿಳಾಸ ಭರ್ತಿ ಮಾಡಿದ ಬಳಿಕ ಆರು ಅಂಕಿಗಳ ಸಂಕೇತವೊAದು ಸೃಷ್ಟಿಯಾಗಲಿದೆ. ಕಿಯೋಸ್ಕ್ನಲ್ಲಿ ನೀವು ಕಳಿಸುತ್ತಿರುವುದು ಅಂಚೆಯನ್ನು ಆಧರಿಸಿ, ಸ್ಪೀಡ್‌ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಂತ್ರ ಸೃಷ್ಟಿಸುವ ಬಾರ್‌ಕೋಡ್‌ನ್ನು ಪತ್ರಕ್ಕೆ ಅಂಟಿಸಿ, ಸ್ಕ್ಯಾನ್ ಮಾಡಿದಲ್ಲಿ ಮುಚ್ಚಳ ತೆರೆದುಕೊಳ್ಳುತ್ತದೆ. ಅದರಲ್ಲಿ ಪತ್ರ ಹಾಕಿದ ಬಳಿಕ, ಸ್ಥಳ ಎಷ್ಟು ದೂರವಿದೆ ಹಾಗೂ ತೂಕವನ್ನು ಆಧರಿಸಿ ಪಾವತಿಸಬೇಕಾದ ಮೊತ್ತ ಕಾಣಿಸಿಕೊಳ್ಳುತ್ತದೆ. ಮೊತ್ತವನ್ನು ಗೂಗಲ್‌ಪೇ, ಫೋನ್‌ಪೇ ಮತ್ತಿತರ ಡಿಜಿಟಲ್ ಹಣ ಪಾವತಿ ಸಾಧನಗಳ ಮೂಲಕವೂ ಮಾಡಬಹುದು. ಬಳಿಕ ವ್ಯಕ್ತಿಯ ಮೊಬೈಲ್ ಹಾಗೂ ಇಮೇಲ್ ವಿಳಾಸಕ್ಕೆ ರಶೀದಿ ಬರುತ್ತದೆ.