ಸುಳ್ಯ: ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಇದೀಗ ವ್ಯಾಪಕವಾಗಿರುವ ಹಳದಿ ಎಲೆ ರೋಗ ಅಡಿಕೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ದ.ಕ. ಜಿಲ್ಲೆಯಲ್ಲಿ ಸಾವಿರಾರೂ ಎಕರೆ ಅಡಿಕೆ ಕೃಷಿ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯ ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಎಕರೆ ಅಡಿಕೆ ಕೃಷಿ ಈ ರೋಗ ಬಾಧೆಯಿಂದ ತತ್ತರಿಸಿದೆ. ಇದರಿಂದ ಸಾವಿರಾರು ಕೃಷಿಕರು ಕಂಗಾಲಾಗಿದ್ದಾರೆ. 25-30 ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಕಾಣಿಸಿಕೊಂಡ ಈ ಹಳದಿ ಎಲೆ ರೋಗ ಇದೀಗ ಸುಳ್ಯ ತಾಲೂಕಿನ ಹಲವು ಗ್ರಾಮಗಳನ್ನು ಮಾತ್ರವಲ್ಲ ಪಕ್ಕದ ಪುತ್ತೂರು, ಕಡಬ ತಾಲೂಕು, ಕೊಡಗು ಜಿಲ್ಲೆಗೂ ವ್ಯಾಪಿಸಿದೆ. ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಅಮರ ಮೂಡ್ನೂರು ಕಲ್ಮಕ್ಕಾರು ಗ್ರಾಮಗಳಲ್ಲಿ ಸುಮಾರು 5 ಸಾವಿರ ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಅಡಿಕೆ ಕೃಷಿಯಿದೆ. ಇಲ್ಲೆಲ್ಲ ಹಳದಿ ಎಲೆ ರೋಗ ವ್ಯಾಪಕವಾಗಿದೆ. ಇದರಿಂದ ಅಡಿಕೆ ಬೆಳೆಯನ್ನೇ ತನ್ನ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡಿರುವ ಇಲ್ಲಿನ ಕೃಷಿಕರು ಕಂಗಾಲಾಗಿದ್ದಾರೆ. ಬೇರೆ ಅದಾಯ ಮಾರ್ಗವಿಲ್ಲದೆ ಬೀದಿಗೆ ಬೀಳುವಂತಾಗಿದೆ.
ಕೆಲವರು ಹಳದಿ ರೋಗಕ್ಕೆ ತುತ್ತಾಗಿರುವ ಅಡಿಕೆ ಮರಗಳನ್ನು ಕಡಿಯಲು ಆರಂಭಿಸಿದ್ದಾರೆ. ಪ್ರತಿ ವರ್ಷ ಅಡಿಕೆ ಬೆಳಗಾರರ ಬಾಳನ್ನು ಹಿಂಡುತ್ತಿರುವ ಈ ರೋಗ ನಿಯಂತ್ರಣಕ್ಕೆ ನಿರ್ದಿಷ್ಟ ಪರಿಹಾರೋಪಾಯ ಕಂಡು ಹಿಡಿಯುವವರೆಗೂ ಅಡಿಕೆ ಬೆಳೆಯನ್ನು ನಂಬಿ ಬದುಕುವುದು ಹೇಗೆ ಎಂದು ಬೆಳಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ಹಲವು ಪ್ರದೇಶಗಳು, ಸುಳ್ಯದ ಸಂಪಾಜೆ ಮತ್ತು ಚೆಂಬು ಗ್ರಾಮದಲ್ಲಿ ನೂರಾರು ಎಕರೆ ಅಡಿಕೆ ತೋಟ ಸಂಪೂರ್ಣ ನಶಿಸಿ ಹೋಗಿದೆ. ಅರಂತೋಡಿನಲ್ಲಿ ಒಟ್ಟು 650 ಎಕರೆಗೂ ಹೆಚ್ಚು ಮತ್ತು ತೊಡಿಕಾನದಲ್ಲಿ 550 ಎಕರೆಗೂ ಮಿಕ್ಕಿ ಅಡಿಕೆ ತೋಟಗಳಿದ್ದು, ಇವು ಹಳದಿ ಎಲೆ ರೋಗದಿಂದ ಸಂಪೂರ್ಣ ನಾಶವಾಗಿದೆ. ಆಲೆಟ್ಟಿ ಯಲ್ಲಿ 1,700, ಮರ್ಕಂಜದಲ್ಲಿ 720, ಕಲ್ಮಕಾರಿನಲ್ಲಿ 430 ಎಕರೆಗಳಿಗಿಂತಲೂ ಮಿಕ್ಕಿ ಅಡಿಕೆ ತೋಟವಿದ್ದು, ಇದರಲ್ಲಿ ಹಲವು ತೋಟಗಳು ಹಳದಿ ಮಹಾ ಮಾರಿಯ ವಿಷ ವರ್ತುಲದಲ್ಲಿ ಸಿಲುಕಿದೆ. ಅಲ್ಲದೇ ತಾಲೂಕಿನ ಹಲವು ಗ್ರಾಮಗಳಲ್ಲಿ ಅಲ್ಲಲ್ಲಿ ಹಳದಿ ರೋಗ ಹರಡುವ ಲಕ್ಷಣಗಳು ಕಂಡುಬಂದಿದೆ. ಸಿಪಿಸಿಆರ್‌ಐನಿಂದ ವರದಿ: ಕಾಸರಗೋಡಿನ ಸಿಪಿಸಿಆರ್‌ಐ 7 ಕೋಟಿ ರೂ. ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣದ ಬಗ್ಗೆ ಅಧ್ಯಯನ ಆರಂಭಿಸಿದೆ. ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಅಡಿಕೆ ಹಳದಿ ರೋಗ ಬಾಧಿತ ಪ್ರದೇಶಗಳ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 7,048 ಸರ್ವೇ ನಂಬರ್‌ಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ 1,217 ಹೆಕ್ಟೇರ್ ಪ್ರದೇಶ ಅಂದರೆ ಸರಿಸುಮಾರು 14,30,440 ಅಡಿಕೆ ಮರಗಳು ರೋಗ ಬಾಧಿತವಾಗಿದೆ ಎಂದು ವರದಿ ಸಲ್ಲಿಸಲಾಗಿದೆ.
ರಾಜ್ಯ ಬಜೆಟ್‌ನಲ್ಲಿ ಅನುದಾನ: ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಅಡಿಕೆ ಹಳದಿ ಎಲೆ ರೋಗ ಸಂಶೋಧನೆಗೆ ಸರಕಾರದಿಂದ 25 ಕೋಟಿ ರೂ. ಅನುದಾನ ಇರಿಸಿದೆ. ಕಾಲಮಿತಿಯೊಳಗೆ ಸಂಶೋಧನೆ ನಡೆಸಿ ಅಡಿಕೆ ಬೆಳೆಗಾರರ ಆರ್ಥಿಕ ಪುನಶ್ಚೇತನಕ್ಕೆ ಸರಕಾರ ಅನುವು ಮಾಡಿಕೂಡಲಿ ಎಂಬುದು ತಾಲೂಕಿನ ಕೃಷಿಕರ ಅಶಯವಾಗಿದೆ.
ಅಡಿಕೆ ಹಳದಿ ಎಲೆ ರೋಗ ಪ್ರದೇಶದಲ್ಲಿ ಪರಿಣಿತ ವಿಜ್ಞಾನಿಗಳ ವಿಶೇಷ ತಂಡವನ್ನು ರಚಿಸಿಕೊಂಡು ಸಂಶೋಧನೆ ನಡೆಸಿ, ಔಷಧ ಕಂಡುಹಿಡಿಯುವತ್ತ ಮೊದಲ ಪ್ರಯತ್ನ ಆಗಬೇಕು. ಆರ್ಥಿಕವಾಗಿ ದುಸ್ಥಿತಿಗೆ ತಲುಪಿರುವ ಅಡಿಕೆ ಕೃಷಿಕರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕವಾಗಿ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ.
ಶಿವಾನಂದ ಕುಕ್ಕುಂಬಳ,
ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆಯ ಸಂಚಾಲಕ, ಸುಳ್ಯ ತಾಲೂಕು
ಪರ್ಯಾಯ ಬೇಡ, ಪರಿಹಾರ ಬೇಕು
ಅಡಿಕೆ ಕೃಷಿ ಹಳದಿ ಎಲೆ ರೋಗ ಭಾದೆಗೆ ತುತ್ತಾಗಿರುವು ದರಿಂದ ರಾಜ್ಯ ಸರಕಾರವು ಪರ್ಯಾಯ ಕೃಷಿಗಳ ಬಗ್ಗೆ ರೈತರು ಗಮನಹರಿಸುವಂತೆ ಹೇಳಿದೆ. ಆದರೆ ಸುಳ್ಯ ತಾಲೂಕಿನ ಶೇ.90ರಷ್ಟು ಸಣ್ಣ, ಅತೀ ಸಣ್ಣ ಕೃಷಿಕರು, ಉದ್ಯಮಿಗಳು, ವ್ಯಾಪಾರಿಗಳು ಅಡಿಕೆಯನ್ನೇ ಅವಲಂಬಿಸಿದ್ದಾರೆ. ಸುಳ್ಯ ಅಂದರೆ ಅಡಿಕೆ ಇದನ್ನು ಬಿಟ್ಟು ಇಲ್ಲಿ ಯೋಚಿಸಲು ಅಸಾಧ್ಯ ಎಂದು ಹೇಳುತ್ತಾರೆ ಸುಳ್ಯ ತಾಲೂಕು ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆಯ ಸಂಚಾಲಕ ಶಿವಾನಂದ ಕುಕ್ಕುಂಬಳ.
ಹಳದಿ ರೋಗದ ಲಕ್ಷಣ
► ಅಡಿಕೆ ಮರದ ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಪೂರ್ತಿ ಎಲೆಯು ಹಳದಿ ಮತ್ತು ಹಸಿರು ಪಟ್ಟಿಯಿಂದ ಮಿಶ್ರಿತವಾಗುವುದು
► ನಂತರದ ಹಂತಗಳಲ್ಲಿ ಎಲೆಗಳು ಒಣಗುವುದು
► ರೋಗ ಬಾಧೆಯ ಮರದ ಅಡಿಕೆಯು ಕಂದು ಬಣ್ಣದಾಗಿದ್ದು, ಸೇವನೆಗೆ ಯೋಗ್ಯವಾಗಿರುವುದಿಲ್ಲ
► ಆಹಾರ ಸೇವನಾ ಬೇರುಗಳ ತುದಿಯು ಗಡುಸಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗುತ್ತವೆ
► 5 ವರ್ಷಗಳ ಬಳಿಕ ಅಡಿಕೆ ಮರವು ಸಂಪೂರ್ಣವಾಗಿ ಒಣಗಿ ಸಾಯುತ್ತವೆ.
ವಾರ್ತಾಭಾರತಿ: ವರದಿ: ಗಿರೀಶ್ ಅಡ್ಪಂಗಾಯ/ ಸಂಶುದ್ದೀನ್ ಎಣ್ಮೂರು