ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹೈನುಗಾರಿಕೆ ಮೌಲ್ಯವರ್ಧನೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಡಿಜಿಟಲೀಕರಣಕ್ಕೆ ಮುಂದಾಗಿದೆ. ಸಾಫ್ಟ್ವೇರ್‌ನ್ನು ಅಭಿವೃದ್ಧಿಪಡಿಸಿದ್ದು, ಹಾಲು ಸಂಗ್ರಹ, ದಾಸ್ತಾನು ಮತ್ತಿತರ ಮಾಹಿತಿಗೆ ಆಯ್ದ ಸಂಘಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ ಪರಿಶೀಲಿಸುತ್ತಿದೆ. ಸಾಫ್ಟ್ವೇರ್‌ನಿಂದ 728 ಸೊಸೈಟಿ ಹಾಗೂ 129ಬಲ್ಕ್ ಮಿಲ್ಕ್ ಕೂಲರ್‌ಗಳಲ್ಲಿ ದಾಸ್ತಾನಿನ ಮಾಹಿತಿ, ಹೈನುಗಾರರು ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಂಶ, ಸಿಎಲ್‌ಆರ್, ಎಸ್‌ಎನ್‌ಎಫ್, ದರ, ಒಟ್ಟು ಮೊತ್ತ ಒಳಗೊಂಡ ಒಂದು ವರ್ಷದ ಮಾಹಿತಿ ತಕ್ಷಣ ಲಭಿಸಲಿದೆ. ಒಕ್ಕೂಟದಲ್ಲಿ ಅಂದಾಜು 1.40 ಲಕ್ಷ ಸದಸ್ಯರಿದ್ದು, ಇವರಲ್ಲಿ 70ರಿಂದ 80 ಸಾವಿರ ಮಂದಿ ಹಾಲು ಹಾಕುತ್ತಿದ್ದಾರೆ. 25 ಸೊಸೈಟಿಗಳ 3 ಸಾವಿರ ಹೈನುಗಾರರು ಸಾಫ್ಟ್ವೇರ್‌ನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ. ಕ್ರಮೇಣ ಎಲ್ಲ ಸದಸ್ಯರೂ ಸಾಫ್ಟ್ವೇರ್ ಬಳಸುವಂತೆ ಮಾಡಿ, ಎಲ್ಲರಿಗೂ ತಕ್ಷಣ ಹಾಗೂ ಎಲ್ಲ ಮಾಹಿತಿ ಏಕಕಾಲಕ್ಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಉದ್ದೇಶ.