“ಸ್ವಾಮಿತ್ವ’ ಯೋಜನೆಯಡಿ ಮೊದಲ ಹಂತದಲ್ಲಿ 16 ಜಿಲ್ಲೆಗಳ 16,600 ಗ್ರಾಮಗಳಲ್ಲಿ ಆಸ್ತಿ ಹಕ್ಕು ಕಾರ್ಡ್ ವಿತರಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಮಾರಾಟ ಮತ್ತು ಖರೀದಿಯನ್ನು ಸುಲಭಗೊಳಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಗ್ರಾಮ ಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರ ಹಕ್ಕು ದಾಖಲೆಗಳನ್ನು ಒದಗಿಸಲಾಗುತ್ತದೆ. ರಾಮನಗರ, ಮೈಸೂರು, ಹಾಸನ, ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೩ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಕಾರ್ಡ್ ವಿತರಿಸಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ, ವಿಜಯಪುರ, ದಕ್ಷಿಣಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉತ್ತರಕನ್ನಡ ಮತ್ತು ಯಾದಗಿರಿ ಜಿಲ್ಲೆಗಳ 16,600 ಗ್ರಾಮಗಳಲ್ಲಿ 2021ರ ಮಾರ್ಚ್ ಅಂತ್ಯದೊಳಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಉಳಿದ 14 ಜಿಲ್ಲೆಗಳಲ್ಲಿ 2021 ರ ಏಪ್ರಿಲ್‌ನಲ್ಲಿ ಕಾರ್ಡ್ ವಿತರಣೆ ಆರಂಭಿಸಲಾಗುತ್ತದೆ. ಅಕ್ಟೋಬರ್ 2 ನೇ ವಾರದಲ್ಲಿ ರಾಜ್ಯದ 16 ಜಿಲ್ಲೆಗಳ ಎಲ್ಲ ಗ್ರಾಮಗಳಲ್ಲಿ ‘ಸ್ವಾಮಿತ್ವ’ ಯೋಜನೆ ಕುರಿತು ಗ್ರಾಮಸಭೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿಯ ಮಾಲೀಕರ ಸಮ್ಮುಖದಲ್ಲಿ ಆಸ್ತಿಗಳನ್ನು ಪರಿಶೀಲಿಸಿ, ಗುರುತು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆಸ್ತಿಗಳನ್ನು ಗುರುತಿಸಲು 12 ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಆಸ್ತಿ ಮಾಲೀಕರಿಗೆ ಪಿಡಿಒ ಮತ್ತು ಭೂಮಾಪಕರ ಸಹಿ ಇರುವ ನಕ್ಷೆ ಸಹಿತ ಆಸ್ತಿ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ನೆರವಾಗಲಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ಸಂಪನ್ಮೂಲ ಒದಗಿ ಬರಲಿದ್ದು, ಸ್ಥಳೀಯ ಮೂಲಸೌಕರ್ಯಗಳನ್ನು ಒದಗಿಸಬಹುದು. ಇದರಿಂದ ಗ್ರಾಮಪಂಚಾಯಿತಿಗಳ ಸಬಲೀಕರಣ ಸಾಧ್ಯ ಎಂದು ಈಶ್ವರಪ್ಪ ಹೇಳಿದರು.
Courtesyg: Google (photo)