ದೇಶದಲ್ಲಿ ಅಪಘಾತಗಳಿಂದ ಮೃತ ಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಂಡಿದೆ. ಬಹುತೇಕ ಅಪಘಾತಗಳಲ್ಲಿ ತಲೆಗೆ ಏಟಿನಿಂದ ಸಾವಿಗೀಡಾಗುವವರ ಪರಮಾಣ ಹೆಚ್ಚು. ಚಾಲಕ ಹೆಲ್ಮೆಟ್ ಧರಿಸಿದರೆ, ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ ಚಾಲನೆ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲು ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅ.೫ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ೧೬ ಆರ್‌ಟಿಒಗಳಿಗೆ ಸುತ್ತೋಲೆ ಕಳುಹಿಸಿರುವ ಸಾರಿಗೆ ಇಲಾಖೆ ಆಯುಕ್ತರು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡದ ಜೊತೆಗೆ ಚಾಲನೆ ಪರವಾನಗಿಯನ್ನೂ ಮೂರು ತಿಂಗಳು ಅಮಾನತು ಮಾಡಬೇಕು. ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ. ದಂಡ ಹಾಕಿದರೂ ಬುದ್ಧಿ ಕಲಿಯದ ಸವಾರರು ಮತ್ತೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇಂಥವರ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಿದ್ದ ರಸ್ತೆ ಸುರಕ್ಷತಾ ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.