ಹೃದಯಾಘಾತದಿಂದ ಹೆಚ್ಚಾಗುತ್ತಿರುವಾ ಅಕಾಲಿಕ ಸಾವುಗಳು ತಪ್ಪಿಸಲು ಆರೋಗ್ಯ ಇಲಾಖೆ, ‘ಆರೋಗ್ಯ ಕವಚ ೧೦೮’ ಆಂಬುಲೆನ್ಸ್ ಸೇವೆಯ ಆರಂಭಿಸಲು ಮುಂದಾಗಿದೆ. ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡ ಒಂದು ಗಂಟೆಯೊಳಗೆ ಚಿಕಿತ್ಸೆ ನೀಡಲು ಯೋಜನೆ ರೂಪಿಸಿಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(ಎನ್‌ಎಚ್‌ಎಂ) ‘ಸ್ಟೆಮಿ’ ಹೃದಯ ಸ್ನಾಯುವಿನ ಸೋಂಕು ನಿವಾರಣೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಸೇವೆ ನೀಡಲಾಗುತ್ತದೆ. ಇಸಿಜಿ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲು ಬೇಕಾದ ಸ್ಟೆಮಿ ಕಿಟ್ ಆಂಬುಲೆನ್ಸ್ಗಳಲ್ಲಿ ಇರಲಿವೆ. ಸಾಂಕ್ರಾಮಿಕವಲ್ಲದ ರೋಗಗಳನ್ನು ಎದುರಿಸುತ್ತಿರುವವರಿಗೆ ಕೋವಿಡ್ ಹೆಚ್ಚಿನ ಅಪಾಯ ಉಂಟು ಮಾಡುತ್ತಿದೆ. ಕೊರೊನಾ ಸೋಂಕಿನಿAದ ಮೃತಪಟ್ಟವರಲ್ಲಿ ಬಹುತೇಕರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳುಳ್ಳವರಾಗಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ವರ್ಷ ಸಾಂಕ್ರಾಮಿಕವಲ್ಲದ ರೋಗ ಕ್ಲಿನಿಕ್ಗಳಲ್ಲಿ(ಎನ್ಸಿಡಿ) ೩೬ ಲಕ್ಷ ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಹಲವರಿಗೆ ಹೃದಯ ಸಮಸ್ಯೆ ಇರುವುದು ಪತ್ತೆಯಾಗಿದೆ. ಹೀಗಾಗಿ, ಹೃದಯಾಘಾತಕ್ಕೆ ಒಳಗಾದವರಿಗೆ ನಿಗದಿತ ಅವಧಿಯೊಳಗೆ ತುರ್ತು ಚಿಕಿತ್ಸೆ ಒದಗಿಸಿ, ಪ್ರಾಣಪಾಯದಿಂದ ಪಾರು ಮಾಡುವ ಉದ್ದೇಶವಾಗಿದೆ. ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿದರೆ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅಲ್ಲಿಯೇ ಇಸಿಜಿ ನಡೆಸಲಿದ್ದಾರೆ. ಅದರ ಫಲಿತಾಂಶವನ್ನು ಆನ್‌ಲೈನ್ ಮೂಲಕ ಹೃದ್ರೋಗ ತಜ್ಞರಿಗೆ ಕಳುಹಿಸಲಾಗುತ್ತದೆ. ಹೃದಯಾಘಾತ ಎಂದಾದರೆ ಹೆಚ್ಚಿನ ಚಿಕಿತ್ಸೆ ಎಲ್ಲಿ ನೀಡಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಒಂದು ಗಂಟೆಯೊಳಗೆ ನಡೆಯಲಿವೆ ಎಂದು ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ. ರಂಗಸ್ವಾಮಿ ವಿವರಿಸಿದರು.
ಮುಂದಿನ ವರ್ಷದಿಂದ ಸೇವೆ ಆರಂಭ
ಕೋವಿಡ್ ಕಾರಣ ‘ಸ್ಟೆಮಿ’ ಯೋಜನೆಯ ಅನುಷ್ಠಾನ ವಿಳಂಬವಾಯಿತು. ಶೀಘ್ರದಲ್ಲಿಯೇ ವೈದ್ಯರು ಹಾಗೂ ಆಂಬುಲೆನ್ಸ್ ಸಿಬ್ಬಂದಿಗೆ ತರಬೇತಿ ಆರಂಭಿಸಲಾಗುತ್ತದೆ. ಜಯದೇವ ಆಸ್ಪತ್ರೆಯ ಮೂರು ಕೇಂದ್ರಗಳನ್ನು ಗುರುತಿಸಿ, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ವಿವಿಧ ಆಸ್ಪತ್ರೆಗಳನ್ನು ಯೋಜನೆಯಡಿ ತರಲಾಗುತ್ತದೆ. ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಹೃದ್ರೋಗ ತಜ್ಞರ ನೆರವು ಪಡೆದುಕೊಳ್ಳಲಾಗುತ್ತದೆ. ಮುಂದಿನ ವರ್ಷದಿಂದ ಈ ಸೇವೆ ಸಿಗಲಿದೆ ಎಂದು ಡಾ. ರಂಗಸ್ವಾಮಿ ತಿಳಿಸಿದರು.