ಕೋವಿಡ್ ಪರೀಕ್ಷೆಯನ್ನು ಜನರಿಗೆ ಎಟಕುವಂತೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಐಐಟಿ-ಖರಗಪುರದ ವಿಜ್ಞಾನಿಗಳು ಕಡಿಮೆ ಬೆಲೆಯ ಕಿಟ್ ಅಭಿವೃದ್ಧಿ ಪಡಿಸಿದ್ದಾರೆ. ಕೋವಿರಾಪ್ ಎಂಬ ಹೆಸರಿನ ಈ ಕಿಟ್, ಆರ್‌ಟಿ-ಪಿಸಿಆರ್ ತಪಾಸಣೆಯಷ್ಟೇ ನಿಖರ ಫಲಿತಾಂಶ ನೀಡಲಿದ್ದು, ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆಇದೆ. ಕಿಟ್ ಬೆಲೆ ೧೦ ಸಾವಿರ ರೂ. ಇದ್ದು, ಬಳಸಲು ಪ್ರಯೋಗಾಲಯ ಮತ್ತು ಪರಿಣತ ಸಿಬ್ಬಂದಿ ಬೇಕಿಲ್ಲ. ಆರ್‌ಟಿ-ಪಿಸಿಆರ್‌ನಂತೆ ಗಂಟಲ ದ್ರವದ ಮಾದರಿ ಬಳಸಿಕೊಂಡೇ ಈ ಕಿಟ್ ತಪಾಸಣೆ ನಡೆಸುತ್ತದೆ. ಕಿಟ್‌ನ್ನು ಸಣ್ಣ ಟೇಬಲ್ ಮೇಲೆ ಇರಿಸಿ, ಬಳಸಬಹುದು. ಒಂದು ತಾಸಿನಲ್ಲಿ ಫಲಿತಾಂಶ ಲಭ್ಯವಾಗುತ್ತದೆ. ಪ್ರತಿ ತಪಾಸಣೆಗೆ ೫೦೦ ರೂ. ವೆಚ್ಚವಾಗಲಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ. ಗಂಟಲ ದ್ರವದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವೈರಾಣುಗಳು ಇದ್ದಾಗಲೂ, ಕಿಟ್ ಅದನ್ನು ಗುರುತಿಸಿದೆ ಎಂದು ವಿಜ್ಞಾನಿ ಅರಿಂಧA ಮಂಡಲ್ ಮಾಹಿತಿ ನೀಡಿದ್ದಾರೆ. ಕಿಟ್ ವಿನ್ಯಾಸಕ್ಕಾಗಿ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದು ಐಐಟಿ-ಖರಗಪುರದ ವಿಜ್ಞಾನಿಗಳು ಹೇಳಿದ್ದಾರೆ.