ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಡಿಸೆಂಬರ್ ೨೦೨೧ರ ಅಂತ್ಯದ ವೇಳೆಗೆ ಶೇ.೧೦೦ರಷ್ಟು ಘನ ತ್ಯಾಜ್ಯವನ್ನು ಮನೆಗಳ ಹಂತದಲ್ಲೇ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಮಾಡುವ ಗುರಿ ಹೊಂದಿರುವ ನೀತಿಗಳಿಗೆ ಸಮ್ಮತಿ ನೀಡಲಾಗಿದೆ. ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ನೀತಿ-೨೦೨೦ ಮತ್ತು ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯತಂತ್ರ- ೨೦೨೦ಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಜೈವಿಕವಾಗಿ ಕರಗಬಹುದಾದ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಿಸುವ ಗುರಿಯನ್ನು ಈ ನೀತಿ ಹೊಂದಿದೆ. ಅಲ್ಲದೆ, ಭೂಮಿಯಲ್ಲಿ ಹೂಳುವ ಘನ ತ್ಯಾಜ್ಯದ ಪ್ರಮಾಣವನ್ನು ೨೦೨೫ರ ವೇಳೆಗೆ ಶೇ.೩೦ಕ್ಕೆ ಕಡಿಮೆಗೊಳಿಸುವುದು, ಬಿಬಿಎಂಪಿ ಮಾದರಿಯಲ್ಲಿ ಘನ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ವಿಲೇವಾರಿ ಮಾಡುವುದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ಬಳಸುವ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡುವ ಪ್ರಸ್ತಾವ ನೀತಿಯಲ್ಲಿದೆ.