ವಿಶ್ವದ ಅತ್ಯಂತ ದೊಡ್ಡ ಪಕ್ಷಿಯೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 5 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎನ್ನಲಾದ ಈ ಪಕ್ಷಿಯ ಎರಡೂ ರೆಕ್ಕೆಗಳ ಒಟ್ಟು ಉದ್ದ ೨೧ ಅಡಿ ಇದೆ. ಈವರೆಗೆ ವಿಶ್ವದ ಅತ್ಯಂತ ದೊಡ್ಡ ಹಕ್ಕಿ ಎಂದು ಪರಿಗಣಿಸಲ್ಪಟ್ಟಿರುವ ವಾಂಡರಿAಗ್ ಅಲ್ಬಟ್ರಾಸ್ ಇದರ ಮುಂದೆ ಕುಬ್ಜ. ಅಲ್ಬಟ್ರಾಸ್‌ನ ರೆಕ್ಕೆಗಳ ಒಟ್ಟು ಉದ್ದ ಅಂದಾಜು ೯-೧೧.೫ ಅಡಿ. ದೈತ್ಯ ಹಕ್ಕಿಯ ಪಳೆಯುಳಿಕೆ ೧೯೮೦ರಲ್ಲಿ ಅಂಟರ‍್ಕ್ಟಿಕದಲ್ಲಿ ಪತ್ತೆಯಾಗಿತ್ತು. ಪ್ಯಾಲಗರ್ನಿಥಿಡ್ಸ್ ಎಂದು ಗುರುತಿಸಲಾದ ಇವು ಸಮುದ್ರದ ತೀರದಲ್ಲೇ ವಾಸಿಸುತ್ತಿದ್ದವು. ಆರು ಕೋಟಿ ವರ್ಷದ ಹಿಂದೆ ಡೈನೋಸರ್ ಸೇರಿದಂತೆ ಭೂಮಿಯ ಮೇಲಿನ ಸಕಲ ಪ್ರಾಣಿ ಹಾಗೂ ಸಸ್ಯ ಸಂಕುಲ ಸಂಪೂರ್ಣ ನಾಶವಾದ ಬಳಿಕ ಹುಟ್ಟಿಕೊಂಡ ಜೀವರಾಶಿಯಲ್ಲಿ ಪ್ಯಾಲಗರ್ನಿಥಿಡ್ಸ್ನ ಗಾತ್ರ ಭಾರಿಯಾಗಿತ್ತು ಎಂದು ಸೈಂಟಿಫಿಕ್ ರಿಪೋರ್ಟ್ಸ್ ನಿಯತಕಾಲಿಕ ಹೇಳಿದೆ. ಪ್ಯಾಲಗರ್ನಿಥಿಡ್ಸ್ನ ಕೊಕ್ಕು ಗರಗಸದಂತೆ ಹರಿತವಾಗಿ ಇದ್ದು, ಇವು ಮನುಷ್ಯರು ಇಲ್ಲವೇ ಇತರ ಸಸ್ತನಿಗಳ ಹಲ್ಲುಗಳನ್ನು ಹೋಲುವುದಿಲ್ಲ. ಹಲ್ಲುಗಳಿಂದ ಸಮುದ್ರದಲ್ಲಿನ ಮೀನುಗಳನ್ನು ಹಿಡಿಯುತ್ತಿದವು ಎಂದು ಸಂಶೋಧಕರು ತಿಳಿಸಿದ್ದಾರೆ.