ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಟಾಕಿ ನಿಷೇಧಿಸುವಂತೆ ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ), ತೀರ್ಪನ್ನು ಕಾಯ್ದಿರಿಸಿದೆ. ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಆದರ್ಶಕುಮಾರ್ ಗೋಯಲ್ ನೇತೃತ್ವದ ಹಸಿರು ಪೀಠ, ನ.೯ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ವಾಯುಮಾಲಿನ್ಯದಿಂದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಪಟಾಕಿ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಲಿದೆ ಎಂದು ನ್ಯಾಯಮಂಡಳಿ ನೇಮಿಸಿರುವ ಆಮಿಕಸ್ ಕ್ಯೂರಿ ತಂಡ ಹೇಳಿರುವುದರಿಂದ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಬಹುದು. ಪಟಾಕಿ ಬಳಸುವವರಿಗೆ 10.000 ರೂ.ದಂಡ ವಿಧಿಸಬೇಕು ಎಂದು ಹಿರಿಯ ವಕೀಲ ರಾಜ್ ಪಂಜ್ವಾನಿ ತಿಳಿಸಿದರು. ದಿಲ್ಲಿ, ಹರಿಯಾಣ, ಉತ್ತರಪ್ರದೇಶಗಳಲ್ಲಿ ಪಟಾಕಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಕೆಯಾದ ಮೇಲ್ಮನವಿಯ ವಿಚಾರಣೆ ನಡೆಸಿರುವ ಪೀಠ, ವಾಯುಮಾಲಿನ್ಯ ಅಧಿಕ ಪ್ರಮಾಣದಲ್ಲಿರುವ 18 ರಾಜ್ಯಗಳಿಗೂ ಬುಧವಾರ ನೋಟಿಸ್ ನೀಡಿತ್ತು. ಬೆಂಗಳೂರು, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ ಹಾಗೂ ದಾವಣಗೆರೆ ನಗರಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ತಿಳಿಸಿದೆ.