ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 6 ರಿಂದ 18ವರ್ಷದೊಳಗಿನ ಮಕ್ಕಳಿಗೋಸ್ಕರ ಓದುವ ಬೆಳಕು ಯೋಜನೆಯನ್ನು ಜಾರಿಗೊಳಿಸಲಿದೆ. ನ.14 ರಂದು ಎಲ್ಲ ಪಂಚಾಯ್ತಿಗಳಲ್ಲೂ ಯೋಜನೆ ಜಾರಿಯಾಗಲಿದೆ.ಪಂಚಾಯ್ತಿ ವ್ಯಾಪ್ತಿಯ ಕನಿಷ್ಠ 20 ಮಕ್ಕಳ ಹೆಸರನ್ನು ಸಮೀಪದ ಗ್ರಂಥಾಲಯಕ್ಕೆ ನೋಂದಾಯಿಸಲು ಪಿಡಿಒಗಳಿಗೆ ಸೂಚಿಸಿದೆ. ಡಿ.15ರ ಒಳಗೆ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಬೇಕು. ಸದಸ್ಯತ್ವ ಶುಲ್ಕವನ್ನು ಪಂಚಾಯ್ತಿಗಳು ಸೆಸ್‌ನಿಂದ ಭರಿಸಬೇಕಿದೆ. ಈ ಮೊದಲು ಪಂಚಾಯ್ತಿಗಳಲ್ಲಿ ನವೆಂಬರ್ ಮಾಸದಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ನ. 14ರಿಂದ ಜ.24, 2021ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನ.7ರಂದು ಅಭಿಯಾನ ಕುರಿತ ತರಬೇತಿ ಕಾರ್ಯಕ್ರಮ ಯುಟ್ಯೂಬ್‌ನಲ್ಲಿ ಪ್ರಸಾರವಾಗಲಿದ್ದು, ಪ್ರತಿ ಪಂಚಾಯ್ತಿಯಿAದ ಇಬ್ಬರು ಮಕ್ಕಳು ಪಾಲ್ಗೊಳ್ಳಲಿದ್ದಾರೆ. 10 ವಾರ ಎಲ್ಲ ಪಂಚಾಯ್ತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳು ನಡೆಯಲಿದ್ದು, ಪೂರ್ವಸಿದ್ಧತೆಗೋಸ್ಕರ ಪಂಚಾಯತ್ ರಾಜ್ ಕಾಯ್ದೆ ಅಡಿ ರಚನೆಯಾಗಿರುವ ಎಲ್ಲ ಸಮಿತಿಗಳ ಪ್ರಮುಖರು ಮತ್ತು ಭಾಗೀದಾರರ ಸಭೆಯನ್ನು ನ.10ರ ಒಳಗೆ ನಡೆಸಬೇಕು ಎಂದು ಇಲಾಖೆ ಸೂಚಿಸಿದೆ. ಎಲ್ಲ ಗ್ರಾಮಪಂಚಾಯ್ತಿಗಳೂ ನ.10ರ ಒಳಗೆ ಫೇಸ್‌ಬುಕ್ ಪುಟ ತೆರೆಯಬೇಕು. ಅದರಲ್ಲಿ ಆರೋಗ್ಯ, ಪೌಷ್ಟಿಕತೆ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಕ್ಕಳೇ ಬರೆಯಲು ಮಾರ್ಗದರ್ಶನ ನೀಡಬೇಕು. ಪಂಚಾಯ್ತಿಯ ವಾರ್ಡ್ವಾರು ಮಾಹಿತಿ ಇರಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಜಿಲ್ಲಾ ಪಂಚಾಯ್ತಿ ಸಿಇಒಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಬಾಲಮಿತ್ರ ನೇಮಕ: ಪಂಚಾಯ್ತಿ ಶಿಕ್ಷಣ ಕಾರ್ಯಪಡೆಯ ಸದಸ್ಯರೊಬ್ಬರನ್ನು ಪಂಚಾಯಿತಿ ಬಾಲಮಿತ್ರ ಎಂದು ನೇಮಿಸಲಿದ್ದು, ಇವರು ಮಕ್ಕಳಿಂದ ಪತ್ರ ಬರೆಸುವುದು, ಅಭಿಯಾನದ ಭಾಗಿದಾರರು ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಅಭಿಯಾನದಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ಆಧರಿಸಿ ಕ್ರಿಯಾಯೋಜನೆಯನ್ನು ತಯಾರಿಸಲು ಪಂಚಾಯ್ತಿಗೆ ನೆರವಾಗಲಿದ್ದಾರೆ.
ದೂರು ಪೆಟ್ಟಿಗೆ: ಮಕ್ಕಳು ಮತ್ತು ಪೋಷಕರು ಮಕ್ಕಳ ಸಮಸ್ಯೆಗಳ ಕುರಿತು ಪತ್ರ ಬರೆದು ಹಾಕಲು ಪ್ರತಿ ಗ್ರಾಮಗಳ ಶಾಲೆ, ವಸತಿ ನಿಲಯ, ಅಂಗನವಾಡಿ, ನ್ಯಾಯ ಬೆಲೆ ಅಂಗಡಿ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತಿತರ ಕಡೆ ಮಕ್ಕಳ ದನಿ ಪೆಟ್ಟಿಗೆ ಅಳವಡಿಸಲಾಗುತ್ತದೆ. ಮಕ್ಕಳ ಸಹಾಯವಾಣಿ ಸಂಖ್ಯೆ 1098ಯನ್ನು ಅಳವಡಿಸಲಾಗುವುದು. ಓದುವ ಬೆಳಕು ಅಭಿಯಾನದಲ್ಲಿ ಮಕ್ಕಳ ಜನನ ನೋಂದಣಿ, ಜನನ ಪ್ರಮಾಣ ಪತ್ರಗಳ ಸಮರ್ಪಕ ವಿತರಣೆ, ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳು ಕೂಡ ನಡೆಯಲಿವೆ.
Courtesyg: Google (photo)