ಜನಪ್ರಿಯ ಸಂದೇಶವಾಹಕ ವಾಟ್ಸ್ಆ್ಯಪ್ ಶುಕ್ರವಾರದಿಂದ ಪಾವತಿ ಸೇವೆಗಳನ್ನು ಆರಂಭಿಸಿದೆ. ಇದಕ್ಕೆ ಭಾರತೀಯ ಪಾವತಿ ನಿಗಮ(ಎನ್‌ಪಿಸಿಐ)ದಿಂದ ಅನುಮತಿ ಪಡೆಯಲಾಗಿದೆ. ವಾಟ್ಸ್ಆ್ಯಪ್ 2018 ರಿಂದಲೇ ಯುಪಿಐ ಆಧರಿತ ಪಾವತಿ ವ್ಯವಸ್ಥೆಗೆ ಪರೀಕ್ಷಾರ್ಥವಾಗಿ ಚಾಲನೆ ನೀಡಿತ್ತು. ಸಂದೇಶ ರವಾನೆ ವ್ಯವಸ್ಥೆ ಜೊತೆಯಲ್ಲೇ ಹಣ ರವಾನೆ ಹಾಗೂ ಸ್ವೀಕರಿಸುವ ಸೌಲಭ್ಯ ಕಲ್ಪಿಸಿ, ಹತ್ತು ಲಕ್ಷ ಜನರಿಗೆ ಅವಕಾಶ ನೀಡಿತ್ತು. ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಹಂತ ಹಂತವಾಗಿ ನೀಡಬೇಕು ಎಂದಿರುವ ಎನ್‌ಪಿಸಿಐ, ಆರಂಭದಲ್ಲಿ ಗರಿಷ್ಠ ಎರಡು ಕೋಟಿ ಜನರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದೆ. ವಾಟ್ಸ್ಆ್ಯಪ್ ಹಣದ ವರ್ಗಾವಣೆ-ಸ್ವೀಕರಣೆಗೆ ಖಾತರಿ ನೀಡಿದ್ದು, ಸಂದೇಶ ರವಾನಿಸಿದಷ್ಟೇ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು ಎಂದು ವಾಟ್ಸ್ಆಪ್ ಹೇಳಿದೆ. ಎನ್‌ಪಿಸಿಐಯ ಯುಪಿಐ ಪಾವತಿ ವ್ಯವಸ್ಥೆ ಮೂಲಕ 160ಕ್ಕೂ ಹೆಚ್ಚಿನ ಬ್ಯಾಂಕ್‌ಗಳ ನಡುವೆ ಹಣದ ವರ್ಗಾವಣೆ ಮಾಡಬಹುದು.
ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ 2020ರ ಜೂನ್‌ನಲ್ಲಿ ಬ್ರೆಜಿಲ್‌ನಲ್ಲಿ ವಾಟ್ಸ್ಆ್ಯಪ್‌ಪೇ ಪಾವತಿ ಸೌಲಭ್ಯಕ್ಕೆ ಚಾಲನೆ ನೀಡಿತ್ತು. ನಮ್ಮ ದೇಶದಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 40 ಕೋಟಿಗೂ ಹೆಚ್ಚು. ಪಾವತಿ ಸೇವೆಗಳ ಕ್ಷೇತ್ರದಲ್ಲಿ ಪೇಟಿಎಂ, ಗೂಗಲ್ ಪೇ, ಫೋನ್‌ಪೇ ಮತ್ತಿತರ ಆ್ಯಪ್‌ಗಳ ಜೊತೆ ಸ್ಪರ್ಧೆ ನಡೆಸಬೇಕಾಗುತ್ತದೆ. ವಾಟ್ಸ್ಆ್ಯಪ್ ಬಳಸಿ ಹಣ ರವಾನಿಸಲು ಬ್ಯಾಂಕ್ ಖಾತೆ ಹಾಗೂ ಡೆಬಿಟ್ ಕಾರ್ಡ್ ಇರಬೇಕಾದ್ದು ಕಡ್ಡಾಯವಾಗಿದ್ದು, ಐಸಿಐಸಿಐ, ಎಚ್ಡಿಎಫ್ಸಿ, ಆಕ್ಸಿಸ್, ಎಸ್ಬಿಐ ಮತ್ತು ಜಿಯೊ ಪೇಮೆಂಟ್ಸ್ ಬ್ಯಾಂಕ್ ಜೊತೆಗೆ ಕೈಜೋಡಿಸಿರುವುದಾಗಿ ವಾಟ್ಸ್ಆ್ಯಪ್‌ಹೇಳಿದೆ. ಪಾವತಿ ವ್ಯವಸ್ಥೆ ಬಳಕೆಗೆ ಯಾವುದೇ ಶುಲ್ಕ ಕೊಡಬೇಕಿಲ್ಲ. ಪಾವತಿ ಸೌಲಭ್ಯವು ದೇಶದ ಹತ್ತು ಭಾಷೆಗಳಲ್ಲಿರುವ ವಾಟ್ಸ್ಆ್ಯಪ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.
Courtesyg: Google (photo)