ಸುದ್ದಿ ವಾಹಿನಿಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ ಒಡ್ಡಲು ವ್ಯವಸ್ಥೆ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ತಬ್ಲೀಗ್ ಜಮಾತ್‌ನಿಂದ ಕೋವಿಡ್ ಹರಡಿತು ಎನ್ನುವ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠ, ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಈ ಹಿಂದೆ ಪ್ರಶ್ನಿಸಿದ್ದೆವು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ. ಸುಳ್ಳು ಸುದ್ದಿ ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೇ ಇದ್ದರೆ, ಅಂಥ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇಂಥ ಸುದ್ದಿಗೆ ತಡೆ ಒಡ್ಡುವ ಅಧಿಕಾರ ಸರ್ಕಾರಕ್ಕೆ ಇರುವಾಗ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ(ಎನ್‌ಬಿಎಸ್‌ಎ)ಯಂಥ ಹೊರಗಿನ ಸಂಸ್ಥೆಗೆ ಏಕೆ ನಿಯಂತ್ರಣದ ಜವಾಬ್ದಾರಿ ವಹಿಸಬೇಕು? ಎಂದು ಪೀಠ ಪ್ರಶ್ನಿಸಿತು. ಈ ಕಾಯ್ದೆ ಅಡಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ ಎನ್ನುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಉತ್ತರಕ್ಕೆ ಪ್ರತಿಯಾಗಿ, ಕಾಯ್ದೆ ಅಡಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ. ದೂರುಗಳನ್ನು ಬಗೆಹರಿಸಲು ಈವರೆಗೆ ಏಕೆ ವ್ಯವಸ್ಥೆ ರೂಪಿಸಿಲ್ಲ? ಎಂದು ಪೀಠ ಪ್ರಶ್ನಿಸಿತು. ಮಂಗಳವಾರ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ “ಸುದ್ದಿವಾಹಿನಿಗಳ ಮೇಲೆ ಸಾರಾಸಗಟು ನಿಷೇಧ ಹೇರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ ಇದೆ’ ಎಂದು ಉಲ್ಲೇಖಿಸಿತ್ತು. ಇದಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ತಭ್ಲೀಘಿ ಸಭೆಗೆ ಸಂಬಂಧಿಸಿದಂತೆ ಎಲ್ಲ ದಿನಪತ್ರಿಕೆಗಳು ನಿಖರ ಮತ್ತು ಸತ್ಯವಾದ ವರದಿಗಳನ್ನು ಪ್ರಕಟಿಸಿವೆ ಹಾಗೂ ದಿ ಪ್ರಿಂಟ್ ಮತ್ತು ದಿ ವೈರ್‌ನಂತಹ ಆನ್‌ಲೈನ್ ಸುದ್ದಿ ಪೋರ್ಟಲ್‌ಗಳು ವಸ್ತುನಿಷ್ಠ ವರದಿಗಳು, ವಿಶ್ಲೇಷಣೆಗಳು ಮತ್ತು ಸಂಪಾದಕೀಯಗಳನ್ನು ಪ್ರಕಟಿಸಿವೆ. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚಿಸಿವೆ ಎಂದು ಕೇಂದ್ರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
Courtesyg: Google (photo)