ನಷ್ಟದಲ್ಲಿ ಷೇರು ಹೊಡಿಕೆದಾರ: ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರು

ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್‌ವಿಬಿ) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ಒಂದು ತಿಂಗಳ ಅವಧಿಗೆ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ ಬ್ಯಾಂಕಿನ ಗ್ರಾಹಕರು ತಾತ್ಕಾಲಿಕವಾಗಿ ತೊಂದರೆಗೆ ಒಳಗಾ ದರೂ, ಹಣ ಸುರಕ್ಷಿತವಾಗಿ ಇರುತ್ತದೆ. ಬ್ಯಾಂಕ್‌ನ ಬಾಂಡ್‌ಗಳನ್ನು ಖರೀದಿ ಮಾಡಿದವರು ಕೂಡ ನಷ್ಟದ ಭೀತಿಯಲ್ಲಿ ಇರಬೇಕಾಗಿಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ತಜ್ಞರು.

ಎಲ್‌ವಿಬಿ ಷೇರುದಾರರು ಅತಿಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗ ಪ್ರಸ್ತಾಪಿಸಲಾಗಿರುವ ವಿಲೀನ ಸೂತ್ರದ ಪ್ರಕಾರ, ಎಲ್‌ವಿಬಿಯು ಸಿಂಗಪುರ ಮೂಲದ ಡಿಬಿಎಸ್ ಬ್ಯಾಂಕಿನಲ್ಲಿ ವಿಲೀನ ಆಗಲಿದೆ. ವಿಲೀನದ ನಂತರ, ಎಲ್‌ವಿಬಿ ಎಂಬ ಹಣಕಾಸು ಸಂಸ್ಥೆ ಅಸ್ತಿತ್ವದಲ್ಲಿ ಇರುವುದಿಲ್ಲ. ಷೇರುಪೇಟೆಯಲ್ಲಿ ಮಾಡಿಕೊಂಡ ನೋಂದಣಿ ಚಾಲ್ತಿಯಲ್ಲಿ ಉಳಿಯುವುದಿಲ್ಲ. ಹಾಗಾಗಿ ಬ್ಯಾಂಕಿನ ಷೇರುಗಳನ್ನು ಮಾರಲು ಅಥವಾ ಖರೀದಿಸಲು ಆಗುವುದಿಲ್ಲ ಎಂದು ಇಂಡಿಯನ್‌ಮನಿ.ಕಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಶರತ್ ಹೇಳಿದರು. ಷೇರಿನಲ್ಲಿ ಹೂಡಿಕೆ ಮಾಡು ವುದರಲ್ಲಿ ಅಪಾಯ ಇದ್ದಿದ್ದೇ. ವಿಲೀನದ ನಂತರ ಷೇರು ಮೌಲ್ಯ ಕಳೆದುಕೊಳ್ಳುತ್ತದೆ. ಆ ನಷ್ಟವನ್ನು ಹೂಡಿಕೆದಾರರು ಹೊರಲೇಬೇಕಾಗುತ್ತದೆ ಎಂದು ಶರತ್ ತಿಳಿಸಿದ್ದಾರೆ.

ಸಾಲದ ಕಂತು: ಎಲ್‌ವಿಬಿಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಆ ಖಾತೆಯಿಂದ ವ್ಯವಸ್ಥಿತ ಹೂಡಿಕೆ ಯೋಜನೆಗಳಿಗೆ(ಎಸ್‌ಐಪಿ) ಹಣ ವರ್ಗಾವಣೆ ಆಗುವುದಿದ್ದರೆ, ಅದಕ್ಕೆ ಈಗಿನ ನಿರ್ಬಂಧಗಳ ಅವಧಿಯಲ್ಲಿ ಅಡಚಣೆ ಎದುರಾಗಬಹುದು. ಬೇರೊಂದು ಬ್ಯಾಂಕಿನಲ್ಲಿ ಸಾಲ ಮಾಡಿ, ಅದರ ಕಂತುಗಳು ಎಲ್‌ವಿಬಿ ಖಾತೆಯಿಂದ ಪಾವತಿಯಾಗುವುದಿದ್ದರೆ, ಕಂತಿನ ಮೊತ್ತವು 25 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಸಮಸ್ಯೆ ಆಗಬಹುದು. ಗ್ರಾಹಕರು ತಮ್ಮ ಸಾಲದ ಖಾತೆ ಇರುವ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ, ನಿರ್ಬಂಧಗಳು ಜಾರಿಯಲ್ಲಿರುವವರೆಗೆ ಏನು ಮಾಡಬೇಕು ಎಂಬ ಬಗ್ಗೆ ಅವರಿಂದಲೇ ಸಲಹೆ ಪಡೆಯುವುದು ಒಳಿತು ಎಂದು ಶರತ್ ಹೇಳಿದರು. ನಿರ್ಬಂಧಗಳು ಡಿಸೆಂಬರ್ 16ರವರೆಗೂ ಮುಂದುವರಿಯಲಿರುವ ಕಾರಣ, ಎಲ್‌ವಿಬಿಯಲ್ಲಿ ಸಂಬಳದ ಖಾತೆ ಹೊಂದಿರುವವರು ಡಿಸೆಂಬರ್ ಆರಂಭದಲ್ಲಿ ಬರುವ ಸಂಬಳವನ್ನು ಬೇರೆ ಬ್ಯಾಂಕ್‌ನಲ್ಲಿ ತಾವು ಹೊಂದಿರುವ ಖಾತೆಗೆ ಹಾಕಿಸಿಕೊಳ್ಳುವುದು ಉತ್ತಮ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ. 25 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಅಡಚಣೆ ಆಗುವುದಿಲ್ಲ ಎಂಬುದು ಅವರ ಅನಿಸಿಕೆ. ಎಲ್‌ವಿಬಿಯಿಂದ ಬಾಂಡ್ ಖರೀದಿ ಮಾಡಿದ್ದವರು ಆತಂಕಕ್ಕೆ ಒಳಗಾಗುವ ಅಗತ್ಯ ಕಾಣುತ್ತಿಲ್ಲ ಎಂದು ಹಣಕಾಸು ತಜ್ಞರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದರು. ಡಿಬಿಎಸ್ ಬ್ಯಾಂಕ್ ಜೊತೆ ಎಲ್‌ವಿಬಿ ವಿಲೀನ ಆದ ನಂತರ, ಬಾಂಡ್‌ಗಳಿಗೆ ಸಂಬಂಧಿಸಿದ ಮೊತ್ತವನ್ನು ಡಿಬಿಎಸ್ ಮರಳಿಸುತ್ತದೆ ಎಂಬುದು ಅವರ ಅಭಿಪ್ರಾಯ. ಎಲ್‌ವಿಬಿಯಲ್ಲಿ ಇರುವ ಎಲ್ಲ ಬಗೆಯ ಠೇವಣಿಗಳು ಸುರಕ್ಷಿತವಾಗಿ ಇರುತ್ತವೆ. ನಿರ್ಬಂಧಗಳ ಅವಧಿ ಮುಗಿದ ನಂತರ ಎಲ್‌ವಿಬಿ ಪಾವತಿಸುತ್ತಿರುವ ಹೆಚ್ಚಿನ ಬಡ್ಡಿ ದರ ಸಿಗುವುದಿಲ್ಲ. ಅದರ ಬದಲಿಗೆ, ಡಿಬಿಎಸ್ ಪಾವತಿಸುವ ಬಡ್ಡಿ ದರ ಸಿಗುತ್ತದೆ. ಗ್ರಾಹಕರು ತಮ್ಮ ಹಣ ಹಿಂಪಡೆಯಲು ತೊಂದರೆಯಾಗದು ಎಂದು ಎಸ್‌ಆರ್‌ಇ ಲಿಮಿಟೆಡ್‌ನ ಮುಖ್ಯ ಹಣಕಾಸು ಯೋಜಕ ಕೀರ್ತನ್ ಎ. ಶಾ ತಿಳಿಸಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top