ಕೋವಿಡ್‌ಗೆ ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆ ಸ್ಪುಟ್ನಿಕ್–ವಿ ತಯಾರಿಸಲು ದೇಶಿ ಔಷಧ ಕಂಪನಿ ಹೆಟೆರೋ, ರಷ್ಯನ್ ಡೈರೆಕ್ಟ್ ಇನ್‌ವೆಸ್ಟ್ಮೆಂಟ್ ಫಂಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೆಟೆರೋ ವಾರ್ಷಿಕ ೧೦ ಕೋಟಿ ಡೋಸ್ ಲಸಿಕೆ ತಯಾರಿಸಲಿದೆ. ೨೦೨೧ರ ಆರಂಭದಲ್ಲೇ ಲಸಿಕೆ ತಯಾರಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಲರೂಸ್, ಅರಬ್ ಸಂಯುಕ್ತ ಸಂಸ್ಥಾನ, ವೆನೆಜುವೆಲಾ ಮತ್ತು ಇನ್ನಿತರ ದೇಶಗಳಲ್ಲಿ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮೋದನೆ ದೊರೆತಿದೆ. ಭಾರತದಲ್ಲಿ ಎರಡು ಮತ್ತು ಮೂರನೇ ಹಂತದ ಪ್ರಯೋಗ ಪ್ರಗತಿಯಲ್ಲಿದೆ ಎಂದು ಆರ್‌ಡಿಐಎಫ್ ಹೇಳಿದೆ.
ಸ್ಪುಟ್ನಿಕ್–ವಿ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಡಾ.ರೆಡ್ಡೀಸ್ ಲ್ಯಾಬ್ ಮತ್ತು ಆರ್‌ಡಿಐಎಫ್‌ಗೆ ಭಾರತದ ಔಷಧ ಮಹಾನಿಯಂತ್ರಕರು ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿದ್ದರು. ೫೦ಕ್ಕೂ ಹೆಚ್ಚು ದೇಶಗಳು ಸ್ಪುಟ್ನಿಕ್–ವಿ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದು, ೧೨೦ ಕೋಟಿ ಡೋಸ್‌ಗಳು ಬೇಕಾಗಿವೆ. ಭಾರತ, ಬ್ರೆಜಿಲ್, ಚೀನಾ, ದಕ್ಷಿಣ ಕೊರಿಯಾ ಮತ್ತು ಇತರ ದೇಶಗಳಲ್ಲಿರುವ ಅಂತಾರಾಷ್ಟ್ರೀಯ ಪಾಲುದಾರರು ತಯಾರಿಸಿದ ಲಸಿಕೆಗಳನ್ನು ಜಾಗತಿಕ ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ಆರ್‌ಡಿಐಎಫ್ ತಿಳಿಸಿದೆ. ಲಸಿಕೆಯು ಶೇ. ೯೫ರಷ್ಟು ಪರಿಣಾಮಕಾರಿ. ಹೆಟೆರೊ ಜತೆಗಿನ ಒಪ್ಪಂದದಿಂದ ಲಸಿಕೆ ತಯಾರಿಕೆ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಆರ್‌ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿಯೇವ್ ಹೇಳಿದ್ದಾರೆ.
Courtesyg: Google (photo)