ದೇಶಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ನಂಬಿಕೆ ಮುಂದುವರಿದಿದೆ. ನ.3ರಿಂದ 27ರ ಅವಧಿಯಲ್ಲಿ 62,951 ಕೋಟಿ ರೂ.ಹೂಡಿಕೆ ಮಾಡಿದ್ದು, ಇದರಲ್ಲಿ 60,358 ಕೋಟಿ ರೂ.ಮೌಲ್ಯದ ಷೇರು ಹಾಗೂ 2,593ಕೋಟಿ ರೂ.ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಅಕ್ಟೋಬರ್‌ನಲ್ಲಿ 22,033 ಕೋಟಿ ರೂ.ಬಂಡವಾಳ ಹೂಡಿಕೆ ಆಗಿತ್ತು. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಎಫ್‌ಪಿಐ ಮಾಹಿತಿ ಸಂಗ್ರಹಿಸಲು ಆರಂಭಿಸಿದ ಬಳಿಕ ಷೇರುಪೇಟೆಯಲ್ಲಿ ಆದ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ. ಜಾಗತಿಕ ಹೂಡಿಕೆದಾರರು ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಗಳಿಗಿಂತ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತಾರೆ. ಉತ್ತಮ ಆರ್ಥಿಕ ಸ್ಥಿತಿಯಿರುವ ಕಂಪನಿಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ, ಮುಖ್ಯವಾಗಿ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚು ಹೂಡಿಕೆ ಆಗುತ್ತಿದೆ ಎಂದು ಗ್ರೋ ಸಂಸ್ಥೆಯ ಸಹಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ.