ಆರು ತಿಂಗಳ ಬಳಿಕ ಅಕ್ಟೋಬರ್ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ(ಸಿಪ್)ಯ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಕಂಡುಬದಿದೆ. ಅಕ್ಟೋಬರ್ನಲ್ಲಿ ಎಸ್ಐಪಿ ಮೂಲಕ 7,800 ಕೋಟಿ ರೂ. ಹೂಡಿಕೆ ಆಗಿದೆ. ಸೆಪ್ಟೆಂಬರ್ನಲ್ಲಿ ಈ ಮೊತ್ತ 7,788 ಕೋಟಿ ರೂ. ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಮಾಹಿತಿ ನೀಡಿದೆ.
ಹಾಲಿ ಹಣಕಾಸು ವರ್ಷದ ಎಂಟು ತಿಂಗಳಿನಲ್ಲಿ ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಒಟ್ಟು 55,627 ಕೋಟಿ ರೂ. ಹೂಡಿಕೆ ಆಗಿದೆ. ಸಿಪ್ ಹೂಡಿಕೆಗೆ ರಿಟೇಲ್ ಹೂಡಿಕೆದಾರರು ಸಿದ್ಧರಾಗಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಶೇರ್ಖಾನ್ ಹೂಡಿಕೆ ಪರಿಹಾರಗಳ ಮುಖ್ಯಸ್ಥ ಗೌತಮ್ ಕಲಿಯಾ ಹೇಳಿದ್ದಾರೆ. ಆರ್ಥಿಕತೆಯು ನಿಧಾನವಾಗಿ ಚೇತರಿಸುತ್ತಿದ್ದು, ಹಣದ ಕೊರತೆ ಅಥವಾ ವೆಚ್ಚಗಳನ್ನು ನಿರ್ವಹಿಸಲು ಹೂಡಿಕೆಗೆ ವಿರಾಮ ನೀಡಿದ್ದವರು ಮತ್ತೆ ಸಕ್ರಿಯವಾಗುತ್ತಿದ್ದಾರೆ ಎಂದು ಫೈರ್ಸ್ನ ಕಂಪನಿಯ ಮುಖ್ಯ ಸಂಶೋಧಕ ಗೋಪಾಲ್ ಕಾವಲಿರೆಡ್ಡಿ ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ 11.27 ಲಕ್ಷ ಎಸ್ಐಪಿ ಖಾತೆಗಳು ನೋಂದಣಿ ಆಗಿದ್ದು, ಅದರಲ್ಲಿ 7.87 ಲಕ್ಷ ಖಾತೆಗಳು ಹೂಡಿಕೆ ಸ್ಥಗಿತಗೊಳಿಸಿವೆ ಇಲ್ಲವೇ ಅವುಗಳ ಅವಧಿ ಮುಕ್ತಾಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ಗಳಲ್ಲಿ ಒಟ್ಟು 3.37 ಕೋಟಿ ಎಸ್ಐಪಿ ಖಾತೆಗಳಿವೆ.
Courtesyg: Google (photo)