ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ ಸಿಗುವ ಸಾಧ್ಯತೆ ಇದೆ. ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ನಾನಾ ವಿವರಗಳನ್ನು ಔಷಧ ತಯಾರಿಕೆ ಸಂಸ್ಥೆ ಸೀರಂ ಇನ್ಸ್ಟಿಟ್ಯೂಟ್ ನೀಡಿದೆ. ಬಳಕೆಗೆ ಅನುಮತಿ ಶೀಘ್ರವೇ ದೊರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮನುಷ್ಯರ ಮೇಲಿನ ಲಸಿಕೆ ಪ್ರಯೋಗದ ದತ್ತಾಂಶಗಳನ್ನು ಬ್ರಿಟನ್ನಿನ ಔಷಧ ನಿಯಂತ್ರಣ ಸಂಸ್ಥೆ ವಿಶ್ಲೇಷಿಸುತ್ತಿದೆ. ಅದು ಇನ್ನೂ ಅಂತಿಮ ಘಟ್ಟ ತಲುಪಿಲ್ಲ. ಹೀಗಾಗಿ, ಬ್ರಿಟನ್‌ಗಿಂತ ಮೊದಲೇ ಭಾರತದಲ್ಲಿ ಲಸಿಕೆಗೆ ಅನುಮೋದನೆ ದೊರೆಯಬಹುದು ಎನ್ನಲಾಗಿದೆ. ಜನವರಿಯಿಂದಲೇ ಜನರಿಗೆ ಲಸಿಕೆ ನೀಡಲು ಭಾರತ ಬಯಸಿದೆ.
ಫೈಜರ್ ಮತ್ತು ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗಳ ತುರ್ತು ಬಳಕೆಯ ಅನುಮತಿ ಅರ್ಜಿಗಳನ್ನೂ ಪರಿಶೀಲಿಸಲಾಗುತ್ತಿದೆ. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಲಸಿಕೆ ತಯಾರಿಸುವ ದೇಶ. ಆಕ್ಸ್ಫರ್ಡ್ ಲಸಿಕೆ ಕಡಿಮೆ ವರಮಾನ ಮತ್ತು ಹೆಚ್ಚು ತಾಪಮಾನ ಇರುವ ದೇಶಗಳಿಗೆ ಅತ್ಯುತ್ತಮ ಎನ್ನಲಾಗುತ್ತಿದೆ. ಲಸಿಕೆಯ ದರ ಕಡಿಮೆ ಇದ್ದು, ಸಾಗಣೆ ಸುಲಭ ಹಾಗೂ ಸಾಮಾನ್ಯ ಫ್ರಿಜ್‌ನಲ್ಲಿ ದೀರ್ಘಕಾಲ ಇರಿಸಬಹುದು.
ಎರಡು ಡೋಸ್ ಸಾಧ್ಯತೆ: ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ನಡೆದ ಪ್ರಯೋಗಗಳ ಪ್ರಕಾರ, ಎರಡು ಪೂರ್ಣ ಡೋಸ್ ಪಡೆದವರಲ್ಲಿ ಲಸಿಕೆ ಪರಿಣಾಮ ಶೇ.62 ಹಾಗೂ ಮೊದಲು ಅರ್ಧ ಮತ್ತು ನಂತರ ಪೂರ್ಣ ಡೋಸ್ ಪಡೆದವರಲ್ಲಿ ಪರಿಣಾಮ ಶೇ.90ರಷ್ಟಿತ್ತು. ಈ ವಿಧಾನವನ್ನು ಸಿಡಿಎಸ್ಸಿಒ ಪರಿಶೀಲಿಸುತ್ತಿದೆ.
Courtesyg: Google (photo)