ಬ್ರಿಟನ್ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಡಿ.24ರಿಂದ ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನವರಿ 1ರವರೆಗೆ (ಜ.2ರ ಬೆಳಗ್ಗೆ 5 ಗಂಟೆ) ರಾತ್ರಿ 11ರಿಂದ ಬೆಳಗ್ಗೆ ೫ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಅನುಮತಿ ಪಡೆದುಕೊಂಡ ಕೈಗಾರಿಕಾ ಚಟುವಟಿಕೆಗಳ ಹೊರತಾಗಿ ಜನರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬ್ರಿಟನ್ನಿಂದ ಆಗಮಿಸಿರುವ ಕೆಲವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಕುರಿತು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ಸಂಚಾರ, ಗುಂಪುಗೂಡುವುದು, ಹೋಟೆಲ್, ವಾಣಿಜ್ಯ ಮಳಿಗೆ, ಮಾಲ್ ತೆರೆಯುವಂತಿಲ್ಲ, ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಔಷಧ, ಹಾಲು ಸೇರಿದಂತೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಾಗಿ ಜನರ ಓಡಾಟ, ಸರಕು ಸಾಗಣೆ ವಾಹನಗಳ ಸಂಚಾರ. ಕೈಗಾರಿಕೆಗಳು, ಕಂಪನಿಗಳು ಮತ್ತು ಇತರ ಉದ್ದಿಮೆಗಳ ನೌಕರರು ಗುರುತಿನ ಚೀಟಿ ಪ್ರದರ್ಶಿಸಿ ಕೆಲಸಕ್ಕೆ ಹೋಗಿ ಬರಬಹುದು. 24 ಗಂಟೆ ಕಾರ್ಯ ನಿರ್ವಹಿಸಬೇಕಾದ ಕೈಗಾರಿಕೆಗಳು, ಉದ್ದಿಮೆಗಳ ಮೇಲೆ ನಿರ್ಬಂಧವಿಲ್ಲ. ದೂರದ ಊರುಗಳಿಗೆ ತೆರಳುವ ಬಸ್, ರೈಲು, ವಿಮಾನ ಸೇವೆ ಲಭ್ಯವಿದ್ದು, ಟಿಕೆಟ್ ಪ್ರದರ್ಶಿಸಿ ಟ್ಯಾಕ್ಸಿ ಅಥವಾ ಆಟೊರಿಕ್ಷಾ ಸೇವೆ ಬಳಸಬಹುದು.
Courtesyg: Google (photo)