ಕೊರೊನಾ ಸೋಂಕು ತಡೆಯ ಎರಡು ಲಸಿಕೆಗೆ ಅನುಮತಿ ನೀಡಿದ ಸುದ್ದಿಯು ಷೇರುಪೇಟೆಗಳಲ್ಲಿ ಹೂಡಿಕೆ ಉತ್ಸಾಹ ಹೆಚ್ಚಿಸಿತು. ಮುಂಬೈ ಷೇರುಪೇಟೆಯು ಇದೇ ಮೊದಲ ಬಾರಿಗೆ 48 ಸಾವಿರದ ಗಡಿ ದಾಟಿತು. ರೂಪಾಯಿ ಮೌಲ್ಯವೃದ್ಧಿ, ಜಾಗತಿಕ ಮಟ್ಟದಲ್ಲಿನ ಸಕಾರಾತ್ಮಕ ಅಂಶಗಳು ಹಾಗೂ ತಯಾರಿಕಾ ವಲಯದ ಬೆಳವಣಿಗೆಯು ಸಕಾರಾತ್ಮಕ ಮಟ್ಟದ ಬೆಳವಣಿಗೆಯಾಗಿದ್ದು. ಮುಂಬೈ ಷೇರುಪೇಟೆ ಸೂಚ್ಯಂಕ 308 ಅಂಶ ಜಿಗಿತ ಕಂಡು ಗರಿಷ್ಠ ಮಟ್ಟವಾದ 48,177 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಧ್ಯಂತರ ವಹಿವಾಟಿನಲ್ಲಿ 48,220 ಅಂಶಗಳ ಮಟ್ಟವನ್ನು ಸೂಚ್ಯಂಕ ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 114 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,133 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಧ್ಯಂತರ ವಹಿವಾಟಿನಲ್ಲಿ 14,148 ಅಂಶಗಳ ದಾಖಲೆ ಮಟ್ಟಕ್ಕೆ ಏರಿಕೆಯಾಗಿತ್ತು. ದಿನದ ವಹಿವಾಟಿನಲ್ಲಿ ಒಎನ್ಜಿಸಿ ಷೇರು ಶೇ. 4.02 ರಷ್ಟು ಗರಿಷ್ಠ ಗಳಿಕೆ ಕಂಡಿತು. ಟಿಸಿಎಸ್, ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರ, ಇನ್ಫೊಸಿಸ್, ಮಹೀಂದ್ರ, ಎಚ್ಯುಎಲ್, ಸನ್ ಫಾರ್ಮಾ ಮತ್ತು ಎಲ್ಆ್ಯಂಡ್ಟಿ ಷೇರುಗಳು ಬೆಲೆ ಹೆಚ್ಚಾಯಿತು. ಲಸಿಕೆಗಳಿಗೆ ಅನುಮತಿ ನೀಡಿರುವುದು ಮತ್ತು ಅವುಗಳ ಬಳಕೆ ಆರಂಭಿಸುವುದು ಮಾರುಕಟ್ಟೆ ಮತ್ತು ಆರ್ಥಿಕತೆಗೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Courtesyg: Google (photo)