ದೇಶದ ತಯಾರಿಕಾ ವಲಯದ ಚಟುವಟಿಕೆಯು ಡಿಸೆಂಬರ್‌ನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಮುಂದುವರಿದಿದೆ ಎಂದು ಐಎಚ್‌ಎಸ್ ಮರ್ಕಿಟ್ ಇಂಡಿಯಾ ಹೇಳಿದೆ. ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್(ಪಿಎಂಐ) ನವೆಂಬರ್‌ನಲ್ಲಿ 56.3ರಷ್ಟು ಇತ್ತು. ಡಿಸೆಂಬರ್‌ನಲ್ಲಿ ಅದು ಅಲ್ಪ ಏರಿಕೆ ಕಂಡು 56.4ಕ್ಕೆ ತಲುಪಿದೆ.
ತಯಾರಿಕಾ ಚಟುವಟಿಕೆ ಸೂಚ್ಯಂಕವು 50 ಮತ್ತು ಅದಕ್ಕಿಂತ ಮೇಲ್ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಎಂದು ಕರೆಯಲಾಗುತ್ತದೆ. ಸತತ ಐದನೇ ತಿಂಗಳಿನಲ್ಲಿಯೂ ಸೂಚ್ಯಂಕವು 50ಕ್ಕಿಂತ ಮೇಲ್ಮಟ್ಟದಲ್ಲಿ ಇದೆ. ವರ್ಷದ ವಹಿವಾಟು ಮುಗಿಯುತ್ತಿರುವುದರಿಂದ ತಯಾರಕರು ತಮ್ಮ ದಾಸ್ತಾನನ್ನು ಮತ್ತೆ ಹೊಂದಿಸಿಕೊಳ್ಳಲು ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ತಯಾರಿಕೆಯನ್ನು ಹೆಚ್ಚಿಸಿದ್ದಾರೆ. ಬೇಡಿಕೆ ನಿಧಾನವಾಗಿ ಏರಿಕೆಯಾಗುತ್ತಿರುವುದು ತಯಾರಿಕಾ ಚಟುವಟಿಕೆ ಸುಧಾರಿಸಲು ಕಾರಣವಾಗಿದೆ ಎಂದು ಐಎಚ್‌ಎಸ್ ಮರ್ಕಿಟ್ ಹೇಳಿದೆ.
ಎಲ್ಲಾ ವಲಯಗಳಲ್ಲಿ ವಹಿವಾಟು ನಡೆಸುವ ಸ್ಥಿತಿ ಸುಧಾರಿಸುತ್ತಿದೆ. ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಎರಡರಲ್ಲಿಯೂ ಏರಿಕೆ ಕಂಡುಬರುತ್ತಿದೆ. 2020-21ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕದ ಬೆಳವಣಿಗೆಯು ಉತ್ತಮವಾಗಿದೆ ಎಂದು ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೆಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ. ಭಾರತದ ಸರಕುಗಳಿಗೆ ಅಂತರರಾಷ್ಟ್ರೀಯ ಬೇಡಿಕೆಯು ಡಿಸೆಂಬರ್‌ನಲ್ಲಿ ಏರಿಕೆ ಕಂಡಿದೆ. ಆದರೆ, ಬೆಳವಣಿಗೆಯ ಮೇಲೆ ಕೋವಿಡ್–೧೯ ಸಾಂಕ್ರಾಮಿಕ ಪರಿಣಾಮ ಬೀರಿದೆ.
Courtesyg: Google (photo)