ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಶುಸಂಗೋಪನೆ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯಕ್ಕೆ ಹಕ್ಕಿ ಜ್ವರ ಕಾಲಿಟ್ಟಿಲ್ಲ. ಆದರೆ, ಕೇರಳದ ಕೊಟ್ಟಾಯಂನಲ್ಲಿ ಕಾಣಿಸಿಕೊಂಡಿರುವುದರಿದ ಗಡಿಗಳಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕ ಡಾ. ಬಿ.ಎನ್. ಶಿವರಾಂ ತಿಳಿಸಿದರು.
ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ: ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಕ್ಕಿ ಜ್ವರದಿಂದ ಸಾವಿರಾರು ಪಕ್ಷಿಗಳು ಮೃತಪಟ್ಟಿವೆ. ಕೇರಳದ ಆಲಪ್ಪುಳ ಹಾಗೂ ಕೊಟ್ಟಾಯಂ ಜಿಲ್ಲೆಗಳ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೋಗ ಕಾಣಿಸಿಕೊಂಡಿದ್ದು, ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು ಘೋಷಿಸಲಾಗಿದೆ. ರೋಗ ಕಾಣಿಸಿಕೊಂಡ ಪ್ರದೇಶದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಕೋಳಿ, ಬಾತುಕೋಳಿ ಹಾಗೂ ಇತರ ಪಕ್ಷಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭಿಸಲಾಗಿದೆ. ಸುಮಾರು 40,000ದಷ್ಟು ಹಕ್ಕಿಗಳನ್ನು ಈಗಾಗಲೇ ಕೊಲ್ಲಲಾಗಿದೆ. ವಲಸೆ ಹಕ್ಕಿಗಳ ಸಾವು: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್ ನದಿಯ ಸುತ್ತ ಮುತ್ತ 2,700ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಮೃತಪಟ್ಟಿರುವುದರಿಂದ, ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
Courtesyg: Google (photo)