ನೂತನ ಮಾಹಿತಿ ತಂತ್ರಜ್ಞಾನ ಕಾಯಿದೆ ಇಂದಿನಿಂದ ಜಾರಿಗೆ ಬಂದಿದ್ದು, ಬಹುತೇಕ ಅಂತರ್ಜಾಲ ಮಧ್ಯಸ್ಥ ಕಂಪನಿಗಳು ನಿಯಮಗಳನ್ನು ಜಾರಿಗೊಳಿಸುವುದಾಗಿ ಹೇಳಿವೆ.
ಮಾಹಿತಿ ತಂತ್ರಜ್ಞಾನ(ಮಧ್ಯಸ್ಥಗಾರರು ಹಾಗೂ ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು-2021 ಮಧ್ಯಸ್ಥ ಸಂಸ್ಥೆಗಳಾದ ಕೂ, ಫೇಸ್‍ಬುಕ್, ಗೂಗಲ್, ಟ್ವಿಟರ್, ಟೆಲಿಗ್ರಾಂ ಹಾಗೂ ಇನ್‍ಸ್ಟಾಗ್ರಾಂಗೆ ಅನ್ವಯಿಸಲಿದೆ.
ಹೊಸ ನಿಯಮಗಳನ್ನು ತಾನು ಜಾರಿಗೊಳಿಸುವುದಾಗಿ ಫೇಸ್‍ಬುಕ್ ಹೇಳಿದ್ದು, ಬಹುತೇಕ ಎಲ್ಲ ನಿಯಮಗಳನ್ನು ತಾನು ಅಳವಡಿಸಿಕೊಂಡಿರುವುದಾಗಿ ಟೆಲಿಗ್ರಾಂ ಹೇಳಿಕೊಂಡಿದೆ. ದೇಶಿ ಆಪ್ ಕೂ, ತಾನು ಎಲ್ಲ ನಿಯಮಗಳಿಗೆ ಅಳವಡಿಸಿಕೊಂಡಿರುವುದಾಗಿ ಹೇಳಿದೆ. ಟ್ವಿಟರ್ ಹಾಗೂ ವಾಟ್ಸ್‍ಆಪ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ನಿಯಮಗಳನ್ನು ಅಳವಡಿಸಿಕೊಳ್ಳದ ಕಂಪನಿಗಳಿಗೆ ಏನು ಶಿಕ್ಷೆ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಅಂಥ ಸಂಸ್ಥೆಗಳ ವೇದಿಕೆಗಳಲ್ಲಿ ಮೂರನೇ ವ್ಯಕ್ತಿಗಳು ಹಾಕಿದ ವಿಷಯ/ಪೋಸ್ಟ್‍ಗಳು ಕಾನೂನು ಸಮಸ್ಯೆಗೆ ಸಿಲುಕಿದರೆ, ಸಂಸ್ಥೆಗಳಿಗೆ ಶಾಸನಾತ್ಮಕ ರಕ್ಷಣೆ ಸಿಗುವುದಿಲ್ಲ.
ತಾನು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅನುಷ್ಠಾಗೊಳಿಸುವ ಸಂಸ್ಥೆಗಳೊಟ್ಟಿಗೆ ಚರ್ಚೆ ನಡೆಸಬೇಕಿದೆ. ಆದರೆ, ನಿಯಮಗಳನ್ನು ಅಳವಡಿಸಿಕೊಳ್ಳುವುದಾಗಿ ಫೇಸ್‍ಬುಕ್ ಹೇಳಿದೆ.
ದೇಶದಲ್ಲಿ ವಾಟ್ಸ್‍ಆ್ಯಪ್(52 ಕೋಟಿ), ಫೇಸ್‍ಬುಕ್ (41 ಕೋಟಿ), ಟ್ವಿಟರ್ (1.75 ಕೋಟಿ), ಇನ್ಸ್ಟಾಗ್ರಾಮ್ (23 ಕೋಟಿ) ಹಾಗೂ ಯೂಟ್ಯೂಬ್ (44.8 ಕೋಟಿ) ಗ್ರಾಹಕರನ್ನು ಹೊಂದಿದೆ.
****