ಬಲಪಂಥೀಯತೆ: ಒಂದು ಜಾಗತಿಕ ಪಿಡುಗು

ಇಂಡಿಯ ಸೇರಿದಂತೆ ಪ್ರಜಾಪ್ರಭುತ್ವವಿರುವ ದೇಶಗಳಿಗೆ ೨೦೨೪ ಸಂಕಷ್ಟದ ವರ್ಷವಾಗಲಿದೆಯೇ? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಗಳಾದ ಇಂಡಿಯ, ಅಮೆರಿಕ, ಬ್ರಿಟನ್‌, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಥೈವಾನ್‌ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆಗಳು ಆವರ್ತೀಯ ಪ್ರಕ್ರಿಯೆ ಎಂದು ಹೇಳಿಬಿಡಬಹುದು. ಆದರೆ, ಅಂದಾಜು 2 ಶತಕೋಟಿ ಜನರು ಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಆಯ್ಕೆಗಳು ದೇಶದ-ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತವೆಯೇ ಎನ್ನುವುದು ಪ್ರಶ್ನೆ. ಮತ ಚಲಾವಣೆಯಂಥ ಸಹಜ ಪ್ರಕ್ರಿಯೆಯ ಫಲಿತಾಂಶಗಳು ತಾರ್ಕಿಕವಾಗಿರುತ್ತವೆ ಎಂದು ಭಾವಿಸಬೇಕಿಲ್ಲ.

ಅಮೆರಿಕದ ಪ್ರಜಾಸತ್ತೆ ತೀವ್ರವಾಗಿ ಧ್ರುವೀಕರಣಗೊಂಡಿದೆ. ಡೊನಾಲ್ಡ್‌ ಟ್ರಂಪ್‌ ಸ್ಪರ್ಧೆಯು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲಿದೆ. ಆದರೆ, ಎರಡು ಪಕ್ಷಗಳ ನಿಕಟ ಸ್ಪರ್ಧೆ ಮತ್ತು ಧ್ರುವೀಕರಣದಿಂದಾಗಿ, ಸೂಕ್ತ ಆಯ್ಕೆ ಕಷ್ಟವಾಗಲಿದೆ. ಜೋ ಬಿಡೆನ್‌ ಅವರು ಆರ್ಥಿಕ ಸ್ಥಿರತೆ, ಕೈಗಾರಿಕೆ ಕಾರ್ಯನೀತಿಗೆ ಒತ್ತು ಮತ್ತು ಹಸಿರು ಸ್ಥಿತ್ಯಂತರದ ಹೆಸರಿನಲ್ಲಿ ಮತ ಕೇಳಲಿದ್ದಾರೆ. ಆದರೆ, ಬಿಡೆನಾಮಿಕ್ಸ್‌ ದೀರ್ಘಕಾಲೀನ ಸಮಸ್ಯೆಗಳಾದ ವಸತಿ-ಆರೋಗ್ಯ ವೆಚ್ಚ, ಮೇಲ್ವರ್ಗದವರ ಬಿಗಿಹಿಡಿತ ಮತ್ತು ಅಸಮಾನತೆಯನ್ನು ತೊಡೆದುಹಾಕಿಲ್ಲ. ಉಕ್ರೇನ್‌ ಯುದ್ಧ ಮತ್ತು ಗಾಜಾ ಆಕ್ರಮಣಕ್ಕೆ ನೀಡಿದ ಬೆಂಬಲಗಳು ಸ್ವದೇಶ-ವಿದೇಶಗಳಲ್ಲಿ ಅವರ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ. ಟ್ರಂಪ್‌ ಗೆ ನ್ಯಾಯಾಲಯ ಸ್ಪರ್ಧಿಸಲು ಅನುಮತಿ ನೀಡಿ, ಅವರು ಗೆದ್ದಲ್ಲಿ ಆರ್ಥಿಕ ಸಮಸ್ಯೆಗಳು ಬಗೆಹರಿದುಬಿಡುವುದಿಲ್ಲ. ಅಮೆರಿಕದಲ್ಲಿ ಜನವರಿ ಮೊದಲ ವಾರದಲ್ಲಿ ಪ್ರಾಥಮಿಕ ಚುನಾವಣೆ ಮತ್ತು ಉಮೇದುವಾರಿಕೆ ಪ್ರಕ್ರಿಯೆಗಳು ಆರಂಭವಾಗಲಿದ್ದು, ನವೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಪಾಕಿಸ್ತಾನದಲ್ಲಿ ಕೂಡ ಚುನಾವಣೆ ನಡೆಯಬೇಕಿದೆ. ಇಂಡೋನೇಷ್ಯಾದಲ್ಲಿ ಹಾಲಿ ಅಧ್ಯಕ್ಷ ಜೋಕೋ ವಿಡೋಡೋ ಅವರು ಮತ್ತೊಂದು ಅವಧಿಗೆ  ಸ್ಪರ್ಧಿ ಸಲು ಅವಕಾಶವಿಲ್ಲ. ಹೀಗಾಗಿ, ಪುತ್ರ ಗಿಬ್ರಾನ್‌ ರಕಬುಮಿಂಗ್‌ ರಕಾ ಅಭ್ಯರ್ಥಿಯಾಗಿದ್ದಾರೆ. ಪರಿವಾರ ಪ್ರೇಮ ಇಂಡಿಯಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ದಕ್ಷಿಣ ಆಫ್ರಿಕ ಗಂಭೀರ ಆರ್ಥಿಕ ಮತ್ತು ಆಡಳಿತ ಸಮಸ್ಯೆ ಎದು ರಿಸುತ್ತಿದೆ. ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಮೇಲುಗೈ ಅಂತ್ಯಗೊಳ್ಳುವ ಕಾಲ ಪ್ರಾಯಶಃ ಸನ್ನಿಹಿತವಾಗಿದೆ. ಥೈವಾನ್‌ನ ಚುನಾವಣೆ ಫಲಿತಾಂಶ ಚೀನಾದೊಡನೆಯ ಸಂಬಂಧವನ್ನು ಭೌಗೋಳಿಕ ರಾಜಕೀಯವನ್ನು ಮರುವ್ಯಾಖ್ಯಾನಿಸಲಿದೆ.

ಜಾಗತಿಕ ರಾಜಕೀಯ ಒಲವುಗಳ ದಿಕ್ಸೂಚಿ ಎಂದೇ ಕರೆಯಲ್ಪಡುವ ನೆದರ್ಲೆಂಡ್‌ನಲ್ಲಿ ವಲಸೆ ವಿರೋಧಿ ಪಕ್ಷ ಗೀರ್ಟ್‌ ವೈಲ್ಡರ್‌, ಲ್ಯಾಟಿನ್‌ ಅಮೆರಿಕದ ದೊಡ್ಡ ದೇಶವಾದ ಅರ್ಜೆಂಟೀನಾದಲ್ಲಿ ಜೇವಿಯರ್ ಮಿಲೈ ಮತ್ತು ಇಟಲಿಯ ಜಾರ್ಜಿಯಾ ಮೆಲೋನ್‌ ಬಲಪಂಥೀಯ ಒಲವುಳ್ಳವರು. ಫ್ರಾನ್ಸ್‌ನಲ್ಲಿ ಇಂಥದ್ದೇ ಪಕ್ಷವಾದ ರಾಸೆಂಬ್ಲಿಮೆಂಟ್‌ ನ್ಯಾಷನಲ್‌(ಆರ್‌ಎನ್)ನ ಮರೀನ್‌ ಲೆ ಪೆನ್‌ ಅಧ್ಯಕ್ಷ ಗಾದಿಯೆಡೆಗೆ ಮುನ್ನಡೆದಿದ್ದಾರೆ. ಸ್ವೀಡನ್‌, ಜರ್ಮನಿ, ಸ್ಕಾಂಡಿನೇವಿಯಾ, ಸ್ವೀಡನ್‌, ಫಿನ್ಲೆಂಡ್‌ನಲ್ಲೂ ಬಲಪಂಥೀಯರ ಬಲ ಹೆಚ್ಚಳಗೊಂಡಿದೆ. ಆದರೆ, ಬ್ರೆಜಿಲ್‌ನಲ್ಲಿ ಎಡ ಸಿದ್ಧಾಂತದಲ್ಲಿ ಒಲವಿರುವ ಲುಲಾ ಡ ಸಿಲ್ವಾ ಗೆಲುವು ಸಾಧಿಸಿದ್ದು, ಬ್ರಿಟನ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಲೇಬರ್‌ ಪಕ್ಷ ಗೆಲ್ಲುವ ಸಾಧ್ಯತೆ ಇದೆ.

ಈ ಎಲ್ಲ ಚುನಾವಣೆಗಳಲ್ಲಿ ರಾಷ್ಟ್ರೀಯವಾದ ಪ್ರಮುಖ ವಿಷಯವಾಗಲಿದೆ. ಚಾರಿತ್ರಿಕ ನೆನಪು, ಇತಿಹಾಸದ ಮರುಕಟ್ಟುವಿಕೆ ಮತ್ತು ಕುಲಸಂಬಂಧಿ ಶತ್ರುಗಳ ಹುಡುಕಾಟ ಮೇಲುಗೈ ಪಡೆದುಕೊಳ್ಳಲಿದೆ. ಉನ್ನತ ಆದರ್ಶ ವೊಂದರ ಪಾಲುದಾರರಾಗಿರಬೇಕು ಎಂದು ನಾಗರಿಕರಲ್ಲಿ ಭ್ರಮೆ ಹುಟ್ಟಿಸಲಾಗುತ್ತದೆ. ತಮ್ಮತನದ ಗರ್ವ ಮತ್ತು ಪರಕೀಯದ ಭಯಗಳ ಸಮ್ಮಿಶ್ರಣವಿರುವ ರಾಷ್ಟ್ರೀಯತೆಯು ರಾಜಕೀಯದಲ್ಲಿ ಅತ್ಯಂತ ಪರಿಣಾಮಕಾರಿ ಅಸ್ತ್ರ ವಾಗಿದೆ. ಅಸ್ತಿತ್ವದ ಭೌತಿಕ ಇರುವಿಕೆ ಪ್ರಶ್ನೆಗಳನ್ನು ಕೂಡ ಅಸ್ಮಿತೆ, ಇತಿಹಾಸ ಮತ್ತು ಸ್ಮರಣೆ ಮೂಲಕ ಕಟ್ಟಬಹುದು. ರಾಷ್ಟ್ರೀಯತೆಯು ರಾಜಕೀಯ ದಾಳವಾಗಿ ಪರಿಣಮಿಸಿದೆ; ಆರ್ಥಿಕ-ಕೈಗಾರಿಕೀಕರಣದ ಹಿನ್ನಡೆ, ನಾಗರಿಕ ಸೌಲಭ್ಯ-ಮೂಲಸೌಲಭ್ಯದ ಕೊರತೆ, ಸಂಸ್ಕೃತಿ ಬಗ್ಗೆ ಆತಂಕ ಸೇರಿದಂತೆ ಎಲ್ಲವನ್ನೂ ರಾಷ್ಟ್ರೀಯತೆಯ ಕೊರತೆಯ ಕುತ್ತಿಗೆಗೆ ಕಟ್ಟಬಹುದು. ಈ ಹಿನ್ನೆಲೆಯಲ್ಲಿ ಇಂಡಿಯದಲ್ಲಿ ನಡೆಯಲಿರುವ ಚುನಾವಣೆಯನ್ನು ನೋಡಬೇಕು.

ಮೂರನೇ ಬಾರಿ ಮೋದಿ?: ಮೂರನೇ ಬಾರಿ ಮೋದಿ ಅವರು ಆಯ್ಕೆಯಾದರೆ, ನಿರಂತರತೆ ಹಾಗೂ ಸ್ಥಿರತೆಯನ್ನು ಮತ್ತು ಶೇ.೬ರಷ್ಟು ಜಿಡಿಪಿ ಬೆಳವಣಿಗೆಯನ್ನು ಕಾಯ್ದುಕೊಳ್ಳಬಹುದು. ಆದರೆ, ಆರ್ಥಿಕತೆಯಲ್ಲಿನ ಆಳವಾದ ರಾಚನಿಕ ಸಮಸ್ಯೆಗಳು, ಮುಖ್ಯವಾಗಿ, ಗುಣಮಟ್ಟದ ಹೆಚ್ಚು ಉತ್ಪಾದಕ ಕೆಲಸಗಳಿಗೆ ಸ್ಥಿತ್ಯಂತರ ಅಂತೆಯೇ ಉಳಿದುಕೊಳ್ಳಲಿದೆ. ಪ್ರತಿಪಕ್ಷಗಳ ಒಕ್ಕೂಟ ʻಇಂಡಿಯʼ ಇನ್ನೂ ಸಂಘಟಿತವಾಗಬೇಕಿದೆ; ಪ್ರಧಾನಿ ಹುದ್ದೆಗೆ ತಾವೇ ಅಭ್ಯರ್ಥಿ ಎನ್ನುವ ಹಲವು ನಾಯಕರಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಉಪಾಯವಾಗಿ ತೇಲಿಬಿಡಲಾಗಿದೆ. ಬಿಜೆಪಿಯ ಮರುಆಯ್ಕೆ ಕೋಮುವಾದ ಮತ್ತು ನಿರಂಕುಶಾಧಿಕಾರವನ್ನು ಗಟ್ಟಿಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯ ಬೇಡ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ತಡೆಗಳು-ಸಮತೋಲಗಳ ದುರ್ಬಲಗೊಳಿಸುವಿಕೆ/ನಿವಾರಣೆ, ಪ್ರಶ್ನಿಸುವವರ ನಿಯಂತ್ರಣಕ್ಕಾಗಿ ರೂಪಿಸಲಾದ ಹೊಸ ಕಾಯಿದೆಗಳು, ಹಿಂಸೆಯ ಸಾಂಸ್ಥೀಕರಣ ಮತ್ತು ಬಹುತ್ವವಾದದ ಎಗ್ಗಿಲ್ಲದ ಹೇರುವಿಕೆಯನ್ನು ನೋಡಿದರೆ, ಇದು ಸ್ಪಷ್ಟವಾಗಲಿದೆ. ಇದು ಭವಿಷ್ಯದಲ್ಲಿ ನಡೆಯುವಂಥದ್ದಲ್ಲ; ಈಗಾಗಲೇ ಚಾಲ್ತಿಯಲ್ಲಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ನೋಡಿದರೆ, ಹಿಂದುತ್ವ ಮತ್ತು ಉಚಿತಗಳ ಮಾದರಿಯನ್ನು ಜನ ಒಪ್ಪಿಕೊಂಡಿದ್ದಾರೆ. ದೇಶವು ಬಿಜೆಪಿ ಮುಕ್ತ ದಕ್ಷಿಣ ಮತ್ತು ಕಾಂಗ್ರೆಸ್‌ ಮುಕ್ತ ಉತ್ತರ ಎಂದು ವಿಭಜಿಸಲ್ಪಟ್ಟಿದೆ. ಬಿಜೆಪಿ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಮಮಂದಿರದ ಅಲೆಯನ್ನು ಹುಟ್ಟುಹಾಕಿದೆ. ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಕಾಂಗ್ರೆಸ್‌ನ್ನು ಅಡಕತ್ತರಿಗೆ ಸಿಕ್ಕಿಸಿದೆ. ಸ್ಪಷ್ಟ ಸಿದ್ಧಾಂತವೇ ಇಲ್ಲದ ಕಾಂಗ್ರೆಸ್‌, ಗೊಂದಲದಲ್ಲಿ ಬಿದ್ದಿದೆ. ಆಸ್ಟ್ರಿಚ್‌ ಮನಸ್ಥಿತಿ ಮತ್ತು ನಿಷ್ಕ್ರಿಯ ಮಧ್ಯಮ ವರ್ಗದವರಿಂದ, ಪ್ರಜಾಸತ್ತೆ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಸಂಕಷ್ಟದಲ್ಲಿ ಸಿಲುಕಿವೆ.

ಸದ್ಯಕ್ಕೆ ʻಇಂಡಿಯʼ ಅಡಿ ೨೮ ಪಕ್ಷಗಳಿವೆ. ನಿತೀಶ್‌ ಕುಮಾರ್‌ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ. ಎನ್ಡಿಎ ಜೊತೆಗಿದ್ದ ಜೆಡಿ(ಯು), ಅಕಾಲಿದಳ ಮತ್ತು ಎಐಎಡಿಎಂಕೆ ಒಕ್ಕೂಟವನ್ನು ತೊರೆದಿವೆ; ಜೆಡಿ(ಎಸ್)‌ ಸೇರಿಕೊಂಡಿದೆ. ಜನವರಿ ೨೨ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ಜನವರಿ ೧೪ರಂದು ರಾಜೀವ್‌ ಗಾಂಧಿ ನೇತೃತ್ವದಲ್ಲಿ ʻಭಾರತ್‌ ನ್ಯಾಯ ಯಾತ್ರೆʼ ಮಣಿಪುರದಿಂದ ಆರಂಭವಾಗಲಿದೆ. ಇದೇ ಹೊತ್ತಿನಲ್ಲಿ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಿಜೆಪಿ ಎಂಬ ಚುನಾವಣಾ ಯಂತ್ರ ಸದಾ ಸನ್ನದ್ಧವಾಗಿರುತ್ತದೆ. 1984 ರಲ್ಲಿ ಕೇವಲ ೨ ಸಂಸದರಿದ್ದ ಪಕ್ಷ ೨೦೧೪ರಲ್ಲಿ ೨೮೨ ಮತ್ತು ೨೦೧೯ರಲ್ಲಿ ೩೦೩ ಸ್ಥಾನ ಗೆಲ್ಲುವಷ್ಟು ಸಂಘಟನಾ ಶಕ್ತಿ ಬೆಳೆಸಿಕೊಂಡಿದೆ. ಪಕ್ಷ ಚುನಾವಣೆ ಸಿದ್ಧತೆಯನ್ನು ಎಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ನವೆಂಬರ್‌ 15ರಂದು ಆರಂಭಿಸಿದ ವೀಕ್ಷಿತ್‌ ಭಾರತ ಸಂಕಲ್ಪ ಯಾತ್ರೆ ಒಂದು ಉದಾಹರಣೆ.

2 ಲಕ್ಷ ಪಂಚಾಯಿತಿಗಳಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ, ಉಜ್ವಲ, ಪಿಎಂ ಸುರಕ್ಷಾ ಬಿಮಾ ಮತ್ತು ಪಿಎಂ ಸ್ವನಿಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಯಾತ್ರೆಯ ಉದ್ದೇಶ. ಡಿಸೆಂಬರ್‌ ೨೨ರೊಳಗೆ ೧ ಲಕ್ಷ ಪಂಚಾಯಿತಿಗಳ ೪.೫ ಕೋಟಿ ಜನರನ್ನು ತಲುಪಲಾಗಿತ್ತು. ಇದರಲ್ಲಿ ಉತ್ತರಪ್ರದೇಶದ ೬೦ ಲಕ್ಷ ಮತ್ತು ಮಹಾರಾಷ್ಟ್ರದ ೩೦ ಲಕ್ಷ ಜನರಿದ್ದರು. ಈ ಎರಡು ರಾಜ್ಯಗಳು ಒಟ್ಟು ೧೨೮ ಸಂಸದರನ್ನು ಆಯ್ಕೆ ಮಾಡು ತ್ತವೆ. ಈ ʻಲಾಭಾರ್ಥಿ ಮತಬ್ಯಾಂಕ್‌ ತಲುಪುವಿಕೆ ಆಂದೋಲನʼ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದೆ. ಇದರ ಭಾಗವಾಗಿ, ಪ್ರಧಾನಿ ಕೆಲದಿನಗಳ ಹಿಂದೆ ಅಯೋಧ್ಯೆಯಲ್ಲಿ ಉಜ್ವಲ ಯೋಜನೆಯ ೧೦ ಕೋಟಿ ಫಲಾ ನುಭವಿಗಳಲ್ಲಿ ಒಬ್ಬರ ಮನೆಯಲ್ಲಿ ಚಹಾ ಸೇವಿಸಿದರು.

ಇಂಥ ʻಉಚಿತʼ ಮತ್ತು ʻರಾಷ್ಟ್ರೀಯತೆʼ ಒಳಗೊಂಡ ಕಾರ್ಯತಂತ್ರ ಯಶಸ್ವಿಯಾಗುತ್ತದೆ ಎನ್ನುವುದು 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಚುನಾವಣೆಗೆ ಒಂದು ವರ್ಷ ಮೊದಲು ಪಕ್ಷ ಈ ರಾಜ್ಯಗಳ ೬೫,೦೦೦ ಬೂತ್‌ಗಳಲ್ಲಿ ನಿರ್ವಾಹಕರನ್ನು  ನೇಮಿಸಿತು. ಪ್ರತಿ ಬೂತ್‌ನಲ್ಲಿ ಶೇ.೧೦ರಷ್ಟು ಮತ ಹೆಚ್ಚಳಕ್ಕೆ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಮೊದಲಿನಷ್ಟೇ ಇತ್ತು ಮತ್ತು ಬಿಜೆಪಿ ಮತ ಗಳಿಕೆ ಶೇ.೮ಕ್ಕಿಂತ ಹೆಚ್ಚಳವಾಯಿತು. ೨೦೨೧ರಲ್ಲಿ ಉತ್ತರಪ್ರದೇಶದಲ್ಲಿ ʻಕೋವಿಡ್‌ ಸಮಯದಲ್ಲಿ ೧೬ ಕೋಟಿ ಮಂದಿಗೆ ಪಡಿತರʼ ಎಂಬ ಸಂದೇಶ ಫಲ ನೀಡಿತ್ತು. ೧ ಕೋಟಿ ಫಲಾನುಭವಿ ಗಳೊಟ್ಟಿಗೆ ಮಹಿಳಾ ಮೋರ್ಚಾ ಸದಸ್ಯರು ಸೆಲ್ಫಿ ತೆಗೆದುಕೊಳ್ಳುವುದು ಇಲ್ಲವೇ ಒಬಿಸಿ ಸಮ್ಮೇಳನಗಳ ಮೂಲಕ ಫಲಾನುಭವಿಗಳನ್ನು ತಲುಪಲಾಗುತ್ತಿದೆ. ಹಲವು ಸಚಿವಾಲಯ-ಇಲಾಖೆಗಳನ್ನು ಬಳಸಿಕೊಂಡು ಎಲ್ಲ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ; ಇದಕ್ಕಾಗಿ ೨,೫೦೦ಕ್ಕೂ ಅಧಿಕ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯಾತ್ರೆಯಲ್ಲಿ ೭೧ ಕೇಂದ್ರ ಸಚಿವರು ಪಾಲ್ಗೊಂಡಿದ್ದು, ಇವರು ನಿಗದಿತ ಕ್ಷೇತ್ರದಲ್ಲಿ ೧ ಇಲ್ಲವೇ ೨ ದಿನ ಕಳೆಯುತ್ತಾರೆ.

ಜಿಲ್ಲೆಗಳ ಅಧಿಕಾರಿಗಳನ್ನು ʼಜಿಲ್ಲಾ ರಥ್‌ ಪ್ರಭಾರಿʼ ಗಳನ್ನಾಗಿ ನೇಮಿಸುವ ಕುರಿತ ಸುತ್ತೋಲೆಗೆ ಪ್ರತಿಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಅಕ್ಟೋಬರ್‌ ೧೫ ರಂದು ಕೃಷಿ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ), ʻಭಾರತ ಸರ್ಕಾರದ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು, ಉಪಕಾರ್ಯದರ್ಶಿಗಳನ್ನು ರಥ ಪ್ರಭಾರಿಗಳನ್ನಾಗಿ ನೇಮಿಸಲಾಗುತ್ತದೆʼ ಎಂದಿತ್ತು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಟಿಎಂಸಿಯ ಸೌಗತ ರಾಯ್‌, ಪ್ರತಿಮಾ ಮೊಂಡಲ್‌ ಹಾಗೂ ಕಾಂಗ್ರೆಸ್‌ನ ವಿಜಯಕುಮಾರ್‌ ವಸಂತ್‌ ಪ್ರಶ್ನೆಯೊಂದನ್ನು ಕೇಳಿದ್ದರು-ʻನೇಮಕಕ್ಕೆ ಐಎಎಸ್‌ ಅಧಿಕಾರಿಗಳ ಒಪ್ಪಿಗೆ ಪಡೆಯಲಾಗಿತ್ತೇ?ʼ ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ, ʼಈ ಹಿಂದೆಯೂ ಸರ್ಕಾರದ ಕಾರ್ಯಕ್ರಮಗಳಿಗೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆʼ ಎಂದಿತ್ತು. ೧೯೮೦ರಲ್ಲಿ ಇಂದಿರಾ ಗಾಂಧಿ ಇದೇ ಕಾರ್ಯತಂತ್ರ ಬಳಸಿದ್ದರು. ೧೦ ಅಂಶಗಳ ಕಾರ್ಯಕ್ರಮವನ್ನು ಸಾಂಸ್ಥಿಕ ಚೌಕಟ್ಟು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು, ಜನಕಲ್ಯಾಣ ಯೋಜನೆಗಳು ಬಡವರಿಗೆ ದೊರೆಯುವಂತೆ ಮಾಡಿದ್ದರು. ಪಕ್ಷವೊಂದನ್ನು ಅದರ ಜನಪರ ಕಾರ್ಯಕ್ರಮದಿಂದ ಬೇರ್ಪಡಿಸುವುದು ಕಷ್ಟಕರ.

ನೇರ ವರ್ಗಾವಣೆ: ಪ್ರಗತಿಯ ಲಾಭ ದೊರೆಯದಿದ್ದವರಿಗೆ ನೇರ ವರ್ಗಾವಣೆ ಮೂಲಕ ಪರಿಹಾರ ನೀಡುವಿಕೆ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿದೆ. ಈ ಪ್ರವೃತ್ತಿಯು ಬಡಜನರು ತಮ್ಮ ಹಕ್ಕುಗಳ ಚಲಾಯಿಸುವಿಕೆಯನ್ನು ಆಧರಿಸಿಲ್ಲ; ಬದಲಾಗಿ, ಕೇಂದ್ರೀಕೃತ ನಾಯಕತ್ವವೊಂದಕ್ಕೆ ತಳಕು ಹಾಕಿಕೊಂಡಿದೆ; ನಾಯಕತ್ವವನ್ನು ವೈಭವೀಕರಿಸಲಾಗುತ್ತದೆ. ಚುನಾವಣೆ ಪ್ರಚಾರ ಪ್ರಧಾನಿಯ ಸುತ್ತ ಸುತ್ತುವುದಕ್ಕೆ ಇದು ಕಾರಣ. ಜನರು ಜಡ ಲಾಭಾರ್ಥಿಗಳಾಗುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿಯ ಫಲ ಶೇ.೧ರಷ್ಟು ಜನರಿಗೆ ಮಾತ್ರ ದೊರೆಯುತ್ತಿದೆ. ೧೯೮೦-೨೦೧೦ರ ಅವಧಿಯಲ್ಲಿ ಜಿಡಿಪಿಯಲ್ಲಿ ಶೇ.೧ರಷ್ಟು ಮಂದಿಯ ಪಾಲು ಶೇ.೧೦ರಿಂದ ಶೇ.೨೨ಕ್ಕೆ ಹೆಚ್ಚಳಗೊಂಡಿತು; ಚೀನಾದಲ್ಲಿ ಹೆಚ್ಚಳದ ಪ್ರಮಾಣ ಶೇ.೭ರಿಂದ ಶೇ.೧೩ ಇದ್ದಿತ್ತು. 5 ಟ್ರಿಲಿಯನ್‌ ಆರ್ಥಿಕತೆ ಇತ್ಯಾದಿ ಕಣಿ ಹೇಳಿದರೂ, ದೇಶದ ಆರ್ಥಿಕ ಬೆಳವಣಿಗೆ ಮಾದರಿ ಹೆಚ್ಚಿನ ಭಾರತೀಯರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿಲ್ಲ. ಇತ್ತೀಚೆಗೆ ಬಿಡುಗಡೆ ಗೊಂಡ ಸ್ಟೇಟ್‌ ಆಫ್‌ ಇಂಡಿಯಾ ವರ್ಕಿಂಗ್‌ ರಿಪೋರ್ಟ್‌ ೨೦೨೩ ಪ್ರಕಾರ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ನಡುವೆ ಯಾವುದೇ ಸಂಬಂಧವಿಲ್ಲ. ಅಂದರೆ, ಜಿಡಿಪಿ ಬೆಳವಣಿಗೆಯು ಉದ್ಯೋಗ ಗಳನ್ನು ಸೃಷ್ಟಿಸುತ್ತದೆ ಎಂಬ ಖಾತ್ರಿಯಿಲ್ಲ. ಕೃಷಿಯೇತರ ಉದ್ಯೋಗದ ಹೆಚ್ಚು ಪಾಲು ಕಡಿಮೆ ವೇತನದ ನಿರ್ಮಾಣ ಕ್ಷೇತ್ರದಲ್ಲಿದೆ. ಆರ್ಥಿಕ ಬೆಳವಣಿಗೆ ಅಧಿಕ ಸಂಖ್ಯೆಯ ಜನರನ್ನು ಬಡತನದಿಂದ ಮೇಲೆತ್ತಿದ್ದರೂ, ಹೆಚ್ಚಿನವರು (೨೦೨೨ರಲ್ಲಿ ಶೇ.೪೦) ವಿಶ್ವ ಬ್ಯಾಂಕ್‌ ಹೇಳಿದಂತೆ ʻಮಧ್ಯಮ ಬಡತನಕ್ಕೆ ಸೇರಿದ್ದಾರೆʼ; ಒಂದು ಸಣ್ಣ ವ್ಯತ್ಯಯ ಅವರು ಮತ್ತೆ ಬಡತನದ ಕೂಪಕ್ಕೆ ಬೀಳುತ್ತಾರೆ.

ಆಧುನಿಕ ಪ್ರಜಾಪ್ರಭುತ್ವಗಳು ನೇಷನ್-ಸ್ಟೇಟ್‌ ಕಲ್ಪನೆಯನ್ನು ಆಧರಿಸಿದ್ದು, ಅಲ್ಲಿ ಸಮುದಾಯದ ಸದಸ್ಯತ್ವ, ಅಸ್ಮಿತೆ ಮತ್ತು ಪ್ರತಿಷ್ಠೆಯಂಥ ಪ್ರಶ್ನೆಗಳು ಬಿಡಿಸಲಾಗದಂತೆ ಹೆಣೆದುಕೊಂಡಿರುತ್ತವೆ. ಆದರೆ, ಹವಾಮಾನ ಬದಲಾವಣೆ ಪ್ರೇರಿತ ಬರದಿಂದ ಇದೇ ಮೊದಲ ಬಾರಿಗೆ ಪನಾಮಾ ನಾಲೆಯಲ್ಲಿ ಹಡಗು ಸಂಚಾರಕ್ಕೆ ಧಕ್ಕೆ ಬಂದಿದೆ ಮತ್ತು ಯುದ್ಧದಿಂದ ಸೂಯೆಝ್‌ ನಾಲೆ ಬಂದ್‌ ಆಗಿದೆ. ಇಂಥ ಗಂಭೀರ ಸಮಸ್ಯೆಗಳನ್ನು ರಾಷ್ಟ್ರೀ ಯತೆಯೆಂಬ ಹಳಹಳಿಯಿಂದ ಬಗೆಹರಿಸಲು ಸಾಧ್ಯವಿಲ್ಲ. ಮೂರನೇ ಮಹಾಸಂಗ್ರಾಮ ನಡೆಯದೆ ಇರಬಹುದು; ಆದರೆ, ಯುದ್ಧದ ಸಂಭವನೀಯತೆ ಹೆಚ್ಚುತ್ತದೆ. ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾ, ಜಾಗತಿಕ ಸುವ್ಯವಸ್ಥೆಗೆ ಧಕ್ಕೆ ತಂದಿತು. ಗಾಜಾದಿಂದ ಹಿಡಿದು ಅಜ‌ರ್‌ಬೈಜಾನ್‌ನ ನಗೋರ್ನೋ ಕರಬಾಕ್‌ವರೆಗೆ ಜನಾಂಗೀಯ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಚೀನಾ-ಅಮೆರಿಕ ಬಿಕ್ಕಟ್ಟು ಜಾಗತಿಕ ಅಲ್ಲೋಕಲ್ಲೋಲ ಸೃಷ್ಟಿಸ ಬಹುದು. ಕೋವಿಡ್‌ ೧೯ ಸಂಕಷ್ಟವನ್ನು ಜಗತ್ತು ಪರಸ್ಪರ ಸಹಕಾರದಿಂದ ದಾಟಿತು. ಆದ್ದರಿಂದ, ತಂತ್ರಜ್ಞಾನ ಮತ್ತು ಆರ್ಥಿಕ ಮಾದರಿಗಳ ಜಾಗತಿಕ ಮರುಸಂಯೋಜನೆ ಆಗಬೇಕಿದೆ.

ಇಂಡಿಯ ಮಾತ್ರವಲ್ಲ; ಬೇರೆಡೆ ಕೂಡ ಮತದಾರರ ಎದುರು ಗಂಭೀರ ಸವಾಲುಗಳಿವೆ. ಭೂತಕಾಲದಲ್ಲೇ ಉಳಿಯದೆ ಭವಿಷ್ಯದೆಡೆಗೆ ಮುನ್ನಡೆಯುವ ಸ್ಪಷ್ಟ ಮಾರ್ಗ ಯಾರಿಗೂ ಕಾಣಿಸುತ್ತಿಲ್ಲ. ದೇಶಗಳ ಅಗತ್ಯ ಮತ್ತು ಭೂಗ್ರಹದ ಸುರಕ್ಷೆಗೆ ಬೇಕಿರುವುದೇನು ಎಂಬುದರ ನಡುವಿನ ದ್ವಂದ್ವವನ್ನು ದಾಟುವುದು ಒಂದು ಸವಾಲು.

-ಮಾಧವ ಐತಾಳ್

(ಫೋಟೋ: ಫಾಲ್ಸಮ್‌ ಸ್ಟ್ರೀಟ್‌ ಫೇರ್‌, ಸ್ಯಾನ್‌ ಫ್ರಾನ್ಸಿಸ್ಕೋ. ಕೃಪೆ:ವಿಕಿಕಾಮನ್ಸ್

Journalist,Translator,avid bibliophile

Leave a Reply

Your email address will not be published. Required fields are marked *

Back To Top