ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ

ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. ಇದಕ್ಕೆ ಹಲವು ಕಾರಣಗಳಿದ್ದು, ಆರೋಗ್ಯ ವ್ಯವಸ್ಥೆಯ ದುರವಸ್ಥೆ ಹಾಗೂ ಕಳಪೆ ಗುಣ ಮಟ್ಟದ ಔಷಧಗಳು ಪ್ರಮುಖ ಕಾರಣಗಳಾಗಿವೆ.

ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 3,364 ತಾಯಂದಿರು ಜೀವ ಕಳೆದುಕೊಂಡಿದ್ದಾರೆ. 2024ರಲ್ಲಿ ನವೆಂಬರ್‌ವರೆಗೆ 348 ತಾಯಂದಿರ ಸಾವು ಸಂಭವಿಸಿದೆ. 2023-24ರಲ್ಲಿ ಇದು 518 ಇದ್ದಿತ್ತು. ಸುಧಾರಣೆ ಕ್ರಮವಾಗಿ ರಾಜ್ಯದ ಔಷಧ ನಿ ಯಂತ್ರಣ ಇಲಾಖೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಡಿ ತರಲಾಗಿದೆ. ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣ ಉತ್ಪಾದಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಗರ್ಭಿಣಿಯರ ಸಾವಿಗೆ ಹೆರಿಗೆ ಬಳಿಕ ರಕ್ತಸ್ರಾವ (ಶೇ.47), ನಂಜು(ಶೇ.11.7), ಗರ್ಭಧಾರಣೆಯಿಂದ ಬರುವ ಅಧಿಕ ರಕ್ತದೊತ್ತಡ(ಶೇ.7), ಅವೈಜ್ಞಾನಿಕ ಗರ್ಭಪಾತ(ಶೇ.5), ರಕ್ತಹೀನತೆ, ಅಪೌಷ್ಟಿಕ ಆಹಾರ ಸೇವನೆ, ವೈದ್ಯಕೀಯ ಸೌಲಭ್ಯ ಕೊರತೆ ಹಾಗೂ ವೈದ್ಯರ ಸಲಹೆ ಪಾಲಿಸದೆ ಇರುವುದು ಸೇರಿದಂತೆ ಅನೇಕ ಕಾರಣಗಳಿವೆ. ಅಪರೋಕ್ಷ ಕಾರಣಗಳಿಂದ ಶೇ.9.4 ಹಾಗೂ ಇನ್ನಿತರ ಕಾರಣಗಳಿಂದ ಶೇ.20 ರಷ್ಟು ಸಾವು ಸಂಭವಿಸುತ್ತದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ, ಮಾನವ ಸಂಪನ್ಮೂಲ-ಮೂಲಸೌಲಭ್ಯ ಕೊರತೆ, ಕಳಪೆ ಗುಣಮಟ್ಟದ ಔಷಧಗಳು ಇತ್ಯಾದಿ ಬರುತ್ತವೆ.

ತಾಯಂದಿರ ಸಾವಿನ ಅನುಪಾತ ಕುಸಿತ: ಆದರೆ, ರಾಜ್ಯದಲ್ಲಿ ತಾಯಂದಿರ ಸಾವಿನ ಅನುಪಾತ(ಎಂಎಂಆರ್) ಕಡಿಮೆಯಾಗಿದೆ. ಗರ್ಭಿಣಿಯರ ಹೆರಿಗೆಪೂರ್ವ ಪಾಲನೆ(ಆಂಟೆನೇಟಲ್‌ ಕೇರ್), ಆಸ್ಪತ್ರೆಗಳಲ್ಲಿ ಸಾಂಸ್ಥಿಕ ಹೆರಿಗೆಗಳ ಹೆಚ್ಚಳ, ಕಬ್ಬಿಣ-ಫೋಲಿಕ್‌ ಆಮ್ಲದ ಮಾತ್ರೆ ಸೇವನೆ, ಅಪಾಯಕರ ಗರ್ಭಾವಸ್ಥೆಯ ನಿರ್ವಹಣೆ, ಹೆರಿಗೆ ಬಳಿಕ ತಾಯಿ-ಮಗುವಿನ ರಕ್ಷಣೆಗೆ ಒತ್ತು ನೀಡಿರುವುದರಿಂದ, 2007-09ರಲ್ಲಿ ಒಂದು ಲಕ್ಷಕ್ಕೆ 178 ಇದ್ದ ಸಾವಿನ ಸಂಖ್ಯೆ 64ಕ್ಕೆ ಕಡಿಮೆಯಾಗಿದೆ(ರಾಷ್ಟ್ರೀಯ ಸರಾಸರಿ 93). ಈ ಮೂಲಕ  ಎಂಎಂಆರ್‌ 70ಕ್ಕಿಂತ ಕಡಿಮೆ ಇರಬೇಕು ಎಂಬ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ)ಯನ್ನು ಸಾಧಿಸಲಾಗಿದೆ. ಆದರೆ, ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ಸಾಧನೆ ಕಳಪೆಯಾಗಿದೆ(ಕೇರಳ 19, ತಮಿಳುನಾ ಡು 54, ಆಂಧ್ರಪ್ರದೇಶ 45 ಮತ್ತು ತೆಲಂಗಾಣ 43). ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ಹಾಗೂ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ)ಗಳಲ್ಲಿ ವೈದ್ಯರು-ಸಿಬ್ಬಂದಿ ಕೊರತೆ ತೀವ್ರವಾಗಿದೆ. ರೆಫರಲ್‌ ಆಸ್ಪತ್ರೆಗಳಾದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲೂ ತರಬೇತಾದ ವೈದ್ಯಕೀಯ ಮಾನವ ಸಂಪನ್ಮೂಲ ಹಾಗೂ ವೈದ್ಯಕೀಯ ಸಾಧನಗಳ ಕೊರತೆಯಿದೆ. ಪಿಎಚ್‌ಸಿ ಹಾಗೂ ಸಿಎಚ್‌ಸಿಗಳಲ್ಲಿ ರಕ್ತ ಮತ್ತು ಅನುದಾನದ ಕೊರತೆ ಮಾತ್ರವಲ್ಲದೆ, ರೆಫರಲ್‌ ಆಸ್ಪತ್ರೆಗೆ ತೆರಳಲು ಆಂಬ್ಯುಲೆನ್ಸ್‌ ಹಾಗೂ ಸಮರ್ಪಕ ರಸ್ತೆ ಇಲ್ಲ. ಮೊದಲ ರೆಫರಲ್‌ ಘಟಕಗಳಾದ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದೆ ಇರುವಾಗ, ಸಾಂಸ್ಥಿಕ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ಒತ್ತಾಯಿಸುವುದರಲ್ಲಿ ಯಾವ ಅರ್ಥವಿದೆ? ಹೀಗಿದ್ದರೂ, ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ(ಎಚ್‌ಎಂಐಎಸ್)‌ ಪ್ರಕಾರ, ಶೇ.61.2ರಷ್ಟು ಹೆರಿಗೆಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ದುಬಾರಿ ಆಗಿರುವುದು ಇದಕ್ಕೆ ಕಾರಣ ಇರಬಹುದು.

ಗಮನಿಸಬೇಕಾದ ಅಂಶವೆಂದರೆ, ಆಸ್ಪತ್ರೆಗಳಿಗೆ ಕಟ್ಟಡದ ಕೊರತೆ ಇಲ್ಲ. ಗ್ರಾಮೀಣ ಆರೋಗ್ಯ ಅಂಕಿಅಂಶ ವರದಿ 2022ರ ಪ್ರಕಾರ, ರಾಜ್ಯದಲ್ಲಿ 9,188 ಉಪ ಆರೋಗ್ಯ ಕೇಂದ್ರ, 2,176 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 189 ಸಮುದಾಯ ಆರೋಗ್ಯ ಕೇಂದ್ರಗಳು ಇವೆ; ಅಗತ್ಯವಿರುವುದು 8,024 ಉಪ ಕೇಂದ್ರ, 1,318 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 329 ಸಮುದಾಯ ಆರೋಗ್ಯ ಕೇಂದ್ರ ಮಾತ್ರ. ನಗರ ಪ್ರದೇಶದಲ್ಲಿ ಶೇ.38ರಷ್ಟು ಪಿಎಚ್‌ಸಿಗಳ ಕೊರತೆ ಇದೆ(ಅಗತ್ಯ ಇರುವುದು 575 ಪಿಎಚ್‌ಸಿ). 26 ಜಿಲ್ಲಾಸ್ಪತ್ರೆ, 150 ಉಪ ಜಿಲ್ಲಾಸ್ಪತ್ರೆ ಮತ್ತು 24 ವೈದ್ಯಕೀಯ ಕಾಲೇಜು ಆಸ್ಪತ್ರೆ ಇದೆ; ಆದರೆ, ಪ್ರಸೂತಿ-ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು ಸೇರಿದಂತೆ ಇನ್ನಿತರ ತಜ್ಞರು, ಶುಶ್ರೂಷಕಿಯರು, ಮಿಡ್‌ವೈಫ್‌ಗಳ ಕೊರತೆ ಇದೆ. ಎನ್‌ಎಫ್‌ಎಚ್‌ಎಸ್‌ 5(5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ಪ್ರಕಾರ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಶೇ.53.2ರಷ್ಟು ಮಾನವ ಸಂಪನ್ಮೂಲದ ಕೊರತೆಯಿದೆ. 6,497 ಎಂಬಿಬಿಎಸ್‌ ವೈದ್ಯರಲ್ಲಿ 3,281 ಮಂದಿ ಹಾಗೂ ಅಗತ್ಯವಿರುವ 5,091 ಸ್ತ್ರೀರೋಗ-ಪ್ರಸೂತಿ ತಜ್ಞರು, ವಿವಿಧ ತಜ್ಞರಲ್ಲಿ 2,971 ಮಂದಿ ಮಾತ್ರ ಇದ್ದಾರೆ; 18,342 ಸ್ಟ್ಯಾಫ್‌ ನರ್ಸ್‌ಗಳು ಹಾಗೂ 13,405 ಬಹುಉದ್ದೇಶ ಆರೋಗ್ಯ ಕಾರ್ಯಕರ್ತರ ಕೊರತೆ ಇದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಇತ್ತೀಚೆಗೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪಾಲು 37,069.

ಪಿಎಚ್‌ಸಿಗಳ ಲಭ್ಯತೆಯಲ್ಲೂ ಪ್ರಾದೇಶಕ ಅಸಮಾನತೆ ಕಾಯ್ದುಕೊಳ್ಳಲಾಗಿದೆ! ದಕ್ಷಿಣ ಮತ್ತು ಕೇಂದ್ರ ಕರ್ನಾಟಕದ 18 ಜಿಲ್ಲೆಗಳಲ್ಲಿ 13,641 ಜನರಿಗೆ ಒಂದು ಪಿಎಚ್‌ಸಿ ಇದ್ದರೆ, ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ 23,374 ಜನರಿಗೆ ಒಂದು ಪಿಎಚ್‌ಸಿ ಇದೆ. ಕೇಂದ್ರ ಸರ್ಕಾರವು ತಾಯಂದಿರ ಸಾವಿನ ಪ್ರಮಾಣ ಹೆಚ್ಚು ಇದೆ ಎಂದು ಹೇಳಿರುವ 8 ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿ ಇವೆ.

ತಾಯಂದಿರ ಸಾವಿನ ಆಡಿಟ್:‌ 2005ರಲ್ಲಿ ಕೇಂದ್ರ ಸರ್ಕಾರವು ತಾಯಂದಿರ ಸಾವಿನ ಆಡಿಟ್‌ನ್ನು ಕಡ್ಡಾಯಗೊಳಿಸಿತು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮಾಸಿಕ ಸಭೆ ನಡೆಸಬೇಕು; ತನಿಖೆ ನಡೆಸಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಆದರೆ, ಮಾಸಿಕ ಸಭೆ ಗಳು ಕಾಟಾಚಾರಕ್ಕೆ ನಡೆಯುತ್ತಿದೆ. ಈ ಸಭೆಗಳು ಘಟನೆಗೆ ಬಲಿಪಶು ಹುಡುಕಲಷ್ಟೇ ಸೀಮಿತವಾಗಿರುತ್ತವೆ ಎಂದು ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಆಶಾ ಕಾರ್ಯಕರ್ತೆಯರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಹಾಗೂ ಗರ್ಭಿಣಿಯರು ಔಷಧ ಸರಿಯಾಗಿ ಸೇವಿಸುತ್ತಿಲ್ಲ ಎಂದು ದೂರಲಾಗುತ್ತದೆ. ವ್ಯವಸ್ಥೆಯಲ್ಲಿನ ಲೋಪವನ್ನು ಪತ್ತೆ ಹಚ್ಚುವುದು ಇಲ್ಲವೇ ಅದನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ಚಿಂತನೆ-ಕ್ರಿಯೆ ನಡೆಯುವುದಿಲ್ಲ.

ತಾಯಂದಿರ ಸಾವು ಎಲ್ಲಿ ಹೆಚ್ಚು ಪ್ರಮಾಣದಲ್ಲಿದೆ ಎಂದು ಪತ್ತೆ ಹಚ್ಚುವುದು ಒಂದು ಸವಾಲು. ಗ್ರಾಮಾಂತರ ಪ್ರದೇಶಗಳ ಪಿಎಚ್‌ಸಿಗಳಲ್ಲಿ ಸ್ಕ್ಯಾನಿಂಗ್-ಎಕ್ಸ್‌ರೇ, ರಕ್ತ ಬ್ಯಾಂಕ್‌ ಇತ್ಯಾದಿ ಸೌಲಭ್ಯಗಳು ಇಲ್ಲದೆ ಇರುವುದರಿಂದ, ಅವರು ತಾಲೂಕು-ಜಿಲ್ಲಾ ಕೇಂದ್ರಗಳ ಸಾರ್ವಜನಿಕ/ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಮೊರೆ ಹೋಗುತ್ತಾರೆ. ಇದರಿಂದ ರೆಫರಲ್‌ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚುತ್ತದೆ. ಗಂಭೀರ ಪ್ರಕರಣಗಳನ್ನು ತಾಲೂಕು ಇಲ್ಲವೇ ಜಿಲ್ಲಾಸ್ಪತ್ರೆ ಗೆ ಕಳಿಸುವುದರಿಂದ, ಒಂದು ವೇಳೆ ಸಾವು ಸಂಭವಿಸಿದಲ್ಲಿ ಅಲ್ಲಿ ಸಾವಿನ ಅಂಕಿಅಂಶ ದಾಖಲಾಗುತ್ತವೆ; ಮೃತಳ ಸ್ವಗ್ರಾಮ(ಅಥವಾ ಜಿಲ್ಲೆ) ಯಾವುದು ಎನ್ನುವುದು ದಾಖಲಾಗುವುದಿಲ್ಲ. ಉದಾಹರಣೆಗೆ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಕೊಪ್ಪಳ ಮತ್ತು ಬಾಗಲಕೋಟೆಯ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿಯರನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್)ಗೆ ಕಳಿಸಲಾಗುತ್ತದೆ. ಇದಲ್ಲದೆ, ರೆಫರಲ್‌ ಆಸ್ಪತ್ರೆಗಳಲ್ಲಿ ತಾಯಂದಿರ ಸಾವುಗಳನ್ನು ʻಸಾಮಾನ್ಯ ಸಾವುʼ ಎಂದು ದಾಖಲಿಸುತ್ತಿರುವುದರಿಂದ, ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಉತ್ತರದಾಯಿತ್ವವನ್ನು ನಿರ್ಧರಿಸುವುದು ಕಷ್ಟವಾಗುತ್ತಿದೆ. ಪಿಎಚ್‌ಸಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕ, ಆಧುನಿಕ ವೈದ್ಯಕೀಯ ಸಾಧನಗಳ ಪೂರೈಕೆ ಮತ್ತು ರಕ್ತದ ಕೊರತೆಯನ್ನು ನೀಗಿಸಿದಲ್ಲಿ, ಸಾವಿನ ಪ್ರಮಾಣ ಕಡಿಮೆ ಮಾಡಬಹುದು.

ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ಗರ್ಭ ಧರಿಸಿದವರಲ್ಲಿ ಹೆಚ್ಚಿನವರು ರಕ್ತಹೀನತೆಯಿಂದ ಬಳಲುತ್ತಾರೆ. ಅವರಿಗೆ ಮಡಿಲು ಕಿಟ್‌ನಲ್ಲಿರುವ ಕಬ್ಬಿಣ-ಫೋಲಿಕ್‌ ಆಮ್ಲದ ಮಾತ್ರೆ ಸೇವಿಸಬೇಕು ಎಂಬ ಮಾಹಿತಿ ಇರುವುದಿಲ್ಲ. ಎನ್‌ಎಫ್‌ ಎಚ್‌ಎಸ್‌-5 ವರದಿ ಪ್ರಕಾರ, ಶೇ.29ರಷ್ಟು ಗರ್ಭಿಣಿಯರು ಮಗುವಿನ ಜನನಕ್ಕೆ ಮೊದಲಿನ 4 ತಪಾಸಣೆಗಳನ್ನು ಮಾಡಿಸಿಕೊಂಡಿರಲಿಲ್ಲ. 100 ದಿನ ಫೋಲಿಕ್‌ ಆಮ್ಲದ ಗುಳಿಗೆ ತೆಗೆದುಕೊಂಡವರ ಪ್ರಮಾಣ ಶೇ.44.7 ಕ್ಕಿಂತ ಕಡಿಮೆ ಇತ್ತು; 180 ದಿನ ತೆಗೆದುಕೊಂಡವರು ಶೇ.26.7 ಮಾತ್ರ.  ಸಂಚಾರ ಸಮಸ್ಯೆಯಿಂದ(ಹದಗೆಟ್ಟ ರಸ್ತೆ, ಅಸಮರ್ಪಕ ಆಂಬ್ಯುಲೆನ್ಸ್‌ ಕೊರತೆ ಇತ್ಯಾದಿ) ರೆಫರಲ್‌ ಆಸ್ಪತ್ರೆಗೆ ಕರೆತರುವಲ್ಲಿ ವಿಳಂಬ ಆಗುತ್ತಿದೆ. ಆರೋಗ್ಯ ಕೇಂದ್ರಗಳಿಂದ ದೂರ ದಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗಬೇಕಿದೆ.

ಕಳಪೆ ಔಷಧಗಳ ಸಮಸ್ಯೆ: ಬಳ್ಳಾರಿಯ ಸಾವುಗಳು ಭಾರತೀಯ ಔಷಧ ಉದ್ಯಮದ ಕಳಪೆ ಗುಣಮಟ್ಟದ ಉತ್ಪನ್ನಗಳಿಂದ ಸಂಭವಿಸಿದ ಸಾವುಗಳ ಪಟ್ಟಿಗೆ ಹೊಸ ಸೇರ್ಪಡೆ. 2020ರ ಬಳಿಕ ಜಮ್ಮುವಿನಲ್ಲಿ 12, ದಿಲ್ಲಿಯಲ್ಲಿ 3, ಗಾಂಬಿಯಾ ದಲ್ಲಿ 70, ಉಜ್ಬೆಕಿಸ್ತಾನದಲ್ಲಿ 18, ಕ್ಯಾಮೆರಾನ್‌ನಲ್ಲಿ 12, ಕೊಲಂಬಿಯದಲ್ಲಿ 4 ಮಕ್ಕಳಲ್ಲದೆ, ಚಂಡೀಗಢದಲ್ಲಿ ಐವರು ಕಲಬೆರಕೆ ಔಷಧಗಳಿಂದ ಸಾವಿಗೀಡಾಗಿದ್ದರು. ಔಷಧಗಳಲ್ಲಿ ನಿಗದಿತ ಪ್ರಮಾಣದಲ್ಲಿ ಸಕ್ರಿಯ ಘಟಕಗಳು ಇಲ್ಲದೆ ಇರುವುದು ಮತ್ತು ಕಲಬೆರಕೆ ಗುಣಮಟ್ಟ ಕುಸಿತಕ್ಕೆ ಕಾರಣ. ಔಷಧ ಕ್ಷೇತ್ರದ ಮೇಲುಸ್ತುವಾರಿಗೆ ವಿಶ್ವಾಸಾರ್ಹವಾದ ವ್ಯವಸ್ಥೆಯೊಂದು ಇಲ್ಲದೆ ಇರುವುದರಿಂದ ಇಂಥ ಸಾವುಗಳನ್ನು ಗುರುತಿಸುವುದು ಮತ್ತು ಪ್ರಮಾಣೀಕರಿಸುವುದು ಕಷ್ಟ.

ಆದರೆ, ಬಳ್ಳಾರಿಯ ಪ್ರಕರಣ ವಿಭಿನ್ನವಾದುದು; ರಾಜ್ಯದ ಗುಣನಿಯಂತ್ರಣ ವ್ಯವಸ್ಥೆಯು ಜನವರಿ 2024ರಲ್ಲೇ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದ ಗುಣಮಟ್ಟ ಕಡಿಮೆ ಇದೆ ಎಂದು ಗುರುತಿಸಿತ್ತು. ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಮಾಹಿ ತಿ ಪ್ರಕಾರ, ಜನವರಿ 8ರಲ್ಲಿ ಸಂಗ್ರಹಿಸಿದ ನಮೂನೆ(ಸ್ಯಾಂಪಲ್)‌ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದ್ದರಿಂದ ರಾಜ್ಯ ಔಷಧ ಪೂರೈಕೆ ನಿಗಮ ನಿಯಮಿತವು ಮಾರ್ಚ್‌ನಲ್ಲಿ ಕೋಲ್ಕತ್ತದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿತು. ಆದರೆ, ಕೋಲ್ಕತ್ತದ ಕೇಂದ್ರೀಯ ಔಷಧಗಳ ಪ್ರಯೋಗಾಲಯ(ಸಿಡಿಎಲ್)ವು ಗುಣಮಟ್ಟ ಸಮರ್ಪಕವಾಗಿದೆ ಎಂದು ವರದಿ ನೀಡಿದ್ದರಿಂದ, ಔಷಧ ಮತ್ತೆ ಮಾರುಕಟ್ಟೆಗೆ ಬಂದಿತು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆ 1940ರ ಅನ್ವಯ ಕೇಂದ್ರ ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುವ ಸಿಡಿಎಲ್‌ ನೀಡುವ ವರದಿ ಅಂತಿಮ; ಅದನ್ನು ಪ್ರಶ್ನಿಸುವಂತಿಲ್ಲ. ಸಿಡಿಎಲ್‌ ಕಾರ್ಯಾಚರಣೆ ಬಗ್ಗೆ ಹಲವು ದೂರುಗಳಿವೆ. 2022ರಲ್ಲಿ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ವಿದ್ಯಾಲಯ(ಪಿಜಿಐಎಂಇಆರ್)ದಲ್ಲಿ ಐವರು ರೋಗಿಗಳ ಸಾವಿಗೆ ಕಳಪೆ ಔಷಧ ಕಾರಣ ಎಂದು ಸಂಸ್ಥೆಯ ನಿರ್ದೇಶಕರು ಪತ್ರಿಕಾಗೋಷ್ಠಿ ಯಲ್ಲಿ ದೂರಿದ್ದರು. ಚಂಡೀಗಢದ ಪ್ರಾಂತೀಯ ಔಷಧ ಪರೀಕ್ಷಾ ಪ್ರಯೋಗಾಲಯ(ಆರ್‌ಡಿಟಿಎಲ್)ದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಚುಚ್ಚುಮದ್ದಿನಲ್ಲಿ ಬ್ಯಾಕ್ಟೀರಿಯಲ್‌ ಎಂಡೋಟಾಕ್ಸಿನ್(ಒಳ ವಿಷ) ಇರುವುದು ಪತ್ತೆಯಾಗಿತ್ತು. ಮಾರ್ಚ್‌ 2023 ರಲ್ಲಿ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವರು, ʻಸಿಡಿಎಲ್‌ನಲ್ಲಿ ನಡೆಸಿದ 2ನೇ ಗುಣಮಟ್ಟ ಪರೀಕ್ಷೆಯಲ್ಲಿ ಔಷಧ ತೇರ್ಗಡೆಯಾಯಿತುʼ ಎಂದು ಹೇಳಿದ್ದರು. ಆಧುನಿಕ ಪರೀಕ್ಷಾ ಸಾಧನಗಳಿರುವ ಪ್ರಾಂತೀ ಯ ಪ್ರಯೋಗಾಲಯದ ವರದಿಯನ್ನು ತಳ್ಳಿ ಹಾಕಿ, ಸಿಡಿಎಲ್‌ ನೀಡಿದ ವರದಿಯನ್ನು ಆಧರಿಸಿ ಔಷಧ ಕಂಪನಿಗೆ ಕ್ಲೀನ್‌ಚಿಟ್‌ ನೀಡಲಾಯಿತು.

ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಪ್ರಾಂತೀಯ ಔಷಧ ಪ್ರಯೋಗಾಲಯದ ವರದಿಯನ್ನು ಆಧರಿಸಿ, ಅಂಗಾಂಗ ನಾಟಿ ರೋಗಿಗಳು ಬಳಸುವ ಔಷಧ ಟಾಕ್ರೋಲಿಮಸ್‌ನ್ನು ಉತ್ಪಾದಿಸುವ ಕಂಪನಿಯನ್ನು ಪಿಜಿಐಎಂಇಆರ್ ಕಪ್ಪುಪಟ್ಟಿಗೆ ಸೇರಿಸಿತು. ʻಸಿಡಿಎಲ್‌ ತನ್ನ ಔಷಧವನ್ನು ಅಂಗೀಕರಿಸಿದ್ದು, ಕಪ್ಪು ಪಟ್ಟಿಯಿಂದ ತೆಗೆಯಬೇಕುʼ ಎಂದು ಕಂಪನಿ ಮನವಿ ಸಲ್ಲಿಸಿತು. ಆದರೆ, ಪಿಜಿಐಎಂಇಆರ್ ನಡೆಸಿದ ಆಂತರಿಕ ತನಿಖೆಯಲ್ಲಿ ಕಂಪನಿ ಸಲ್ಲಿಸಿದ ವರದಿಗಳು ಸಾಚಾ ಅಲ್ಲ ಎನ್ನುವುದು ಪತ್ತೆಯಾಯಿತು. ಆಸ್ಪತ್ರೆ ಆಡಳಿತವು ಡಿಸೆಂಬರ್‌ 2023ರಲ್ಲಿ ಈಸಂಬಂಧ ಪೊಲೀಸರಿಗೆ ದೂರು ನೀಡಿತು.

ಈ ಪ್ರಕರಣಗಳು ಸಿಡಿಎಲ್‌ನ ಕಾರ್ಯನಿರ್ವಹಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ದೀರ್ಘಕಾಲೀನ ಪರಿಣಾಮ ಬೀರುವ ವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಿಡಿಎಲ್‌ನಂಥ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಪಾರದರ್ಶಕ ಹಾಗೂ ಉತ್ತರದಾಯಿ ಆಗಿರಬೇಕು. ಸಿಡಿಎಲ್‌ ನಿರ್ಧಾರವನ್ನು ಪ್ರಶ್ನಿಸುವ ಮೇಲ್ಮನವಿ ಪ್ರಯೋಗಾಲಯ ಇಲ್ಲವೇ ಬೇರೆ ವ್ಯವಸ್ಥೆ ಇಲ್ಲ. ಸಿಡಿಎಲ್‌ ಮಾಹಿತಿ ನೀಡಲು ನಿರಾಕರಿಸುತ್ತಿದ್ದು, ಮಾಹಿತಿ ಹಕ್ಕು ಕಾಯಿದೆಯನ್ನು ಉಲ್ಲಂಘಿಸಿದೆ. ಸಿಡಿಎಲ್‌ಗೆ ನಮೂನೆಗಳ ರವಾನೆ ಪ್ರಕ್ರಿಯೆ(ಮೇಣದಲ್ಲಿ ಹಿತ್ತಾಳೆ ಠಸ್ಸೆ ಹಾಕುವಿಕೆ)1945ರಲ್ಲಿ ಆರಂಭವಾದದ್ದು; ಸಿಡಿಎಲ್‌ ಅಂತಿಮ ವರದಿಯನ್ನು ಅಂಚೆ ಮೂಲಕ ರವಾನಿಸುತ್ತದೆ. ಈ ಓಬೀರಾಯನ ಕಾಲದ ವ್ಯವಸ್ಥೆಗೆ ಕಾಯಕಲ್ಪ ಆಗಬೇಕಿದೆ.

ಸಿಡಿಎಲ್‌ ಹಾಗೂ ಔಷಧ ಉತ್ಪಾದಕರು ರಾಜ್ಯಗಳ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬಹುದಷ್ಟೇ. ಆದರೆ, ರಾಜ್ಯ ಸರ್ಕಾರಗಳು ಇಲ್ಲಿವರೆಗೆ ಈ ಕೆಲಸ ಮಾಡಿಲ್ಲ; ಅವು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಸಿಡಿಎಲ್‌ನ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ-ಉತ್ತರದಾಯಿತ್ವ ತರಬೇಕು ಮತ್ತು ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಕಾಯಿದೆ 1940ಕ್ಕೆ ತಿದ್ದುಪಡಿ ತರಬೇಕು. ಭಾರತೀಯ ಔಷಧ ಉದ್ಯಮದ ಒಟ್ಟು ಮೌಲ್ಯ 50 ಬಿಲಿಯನ್‌ ಡಾಲರ್‌ ಇದ್ದು, 2030ರೊಳಗೆ 130 ಶತಕೋಟಿ ಡಾಲರ್‌ ಮುಟ್ಟುವ ಅಂದಾಜು ಇದೆ. ಫಾರ್ಮಾ ಲಾಬಿ ಬಹಳ ಬಲಿಷ್ಠವಾದುದು. ಆದ್ದರಿಂದ, ಉದ್ಯಮಿಗಳಿಂದ, ಉದ್ಯಮಿಗಳಿಗಾಗಿ ಮತ್ತು ಉದ್ಯಮಿಗಳಿಗೋಸ್ಕರ ಇರುವ ಎನ್‌ಡಿಎ 3.0 ಸರ್ಕಾರದಲ್ಲಿ ಕಾಯಿದೆಗೆ ತಿದ್ದುಪಡಿ ಆಗುವ ಸಾಧ್ಯತೆ ಇಲ್ಲ.

ಬಳ್ಳಾರಿಯಂಥ ಘಟನೆ ಸಂಭವಿಸಿದಾಗ ಒಂದಷ್ಟು ಸದ್ದು ಆಗುತ್ತದೆ; ಬಳಿಕ ವಹಿವಾಟು ಎಂದಿನಂತೆ ಮುಂದುವರಿಯುತ್ತದೆ.

 

Journalist,Translator,avid bibliophile

Leave a Reply

Your email address will not be published. Required fields are marked *

Back To Top