ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್ ನೇಷನ್, ಒನ್ ಸಬ್ಸ್ಕ್ರಿಪಕ್ಷನ್; ಒಎನ್ಒಎಸ್). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಂಥ ಗಿಲೀಟು ಕೆಲಸದ ಮೂಲಕ ಸರ್ಕಾರ ತಾನೇ ನೋ ಸಾಧನೆ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಲ್ಲದೇ ಬೇರೇನೂ ಅಲ್ಲ.
ಏನಿದು ʻಒಂದು ದೇಶ, ಒಂದು ಚಂದಾʼ?: ಜಗತ್ತಿನೆಲ್ಲೆಡೆಯ ಸಂಶೋಧಕರು-ಪ್ರಾಧ್ಯಾಪಕರು ತಮ್ಮ ಅನ್ವೇಷಣೆ ಇಲ್ಲವೇ ಲೇಖನ-ಪ್ರಬಂಧಗಳನ್ನು ಪ್ರಕಟಿಸಲು ಪ್ರತಿಷ್ಠಿತ ಜರ್ನಲ್ಗಳನ್ನು ಆಧರಿಸಿರುತ್ತಾರೆ. ಇಂಥ ಪ್ರಕಟಣೆಗಳು ವೃತ್ತಿಯಲ್ಲಿ ಪದೋನ್ನತಿ, ವೇತನ-ಭತ್ಯೆ ಹೆಚ್ಚಳ, ಗೌರವ ಇತ್ಯಾದಿಗೆ ಅಗತ್ಯ ಇರುತ್ತದೆ. ಆದರೆ, ಈ ಉದ್ಯಮ ಲಾಭಕೋರತನದ್ದು ಮತ್ತು ಕೆಲವೇ ಕೆಲವು ಅಂತಾರಾಷ್ಟ್ರೀಯ ಪ್ರಕಾಶನಗಳ ಕೈಯಲ್ಲಿ ಸಿಲುಕಿಕೊಂಡಿದೆ. ಆಕ್ಸ್ಫರ್ಡ್ನಂಥ ವಿಶ್ವವಿದ್ಯಾನಿಲಯಗಳ ಜರ್ನಲ್ಗಳಲ್ಲಿ ಲೇಖನ-ಪ್ರಬಂಧ ಪ್ರಕಟಣೆ ಪ್ರತಿಷ್ಠೆಯ ವಿಷಯ. ʻಒಎನ್ಒಎಸ್ ಮೂಲಕ 30ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರಕಟಣೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 13,000 ಜರ್ನಲ್ಗಳಲ್ಲಿ ಪ್ರಕಟವಾಗಿರುವ ಸಂಶೋಧನ ಲೇಖನಗಳು ಸರ್ಕಾರದ ವಿಶ್ವ ವಿದ್ಯಾನಿಲಯಗಳು ಮತ್ತು ಸಾರ್ವಜನಿಕ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 18 ದಶಲಕ್ಷ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಲಭ್ಯವಾಗಲಿವೆ. ಇದರಿಂದ ವೈಜ್ಞಾನಿಕ ಜ್ಞಾನಕ್ಕೆ ಪ್ರವೇಶಾವಕಾಶವಲ್ಲದೆ, ಅನ್ವೇಷಕ ಪ್ರವೃತ್ತಿ ಯನ್ನು ಉತ್ತೇಜಿಸಬಹುದು,ʼ ಎಂದು ಸರ್ಕಾರ ಹೇಳಿಕೊಂಡಿದೆ. ಇದಕ್ಕಾಗಿ ತೆರಬೇಕಿರುವ ಶುಲ್ಕ 715 ದಶಲಕ್ಷ ಡಾಲರ್ ಅಥವಾ 6,000 ಕೋಟಿ ರೂ.; ಚಂದಾ ಅವಧಿ ಜನವರಿ 2025ರಿಂದ ಮೂರು ವರ್ಷ. ಎನ್ಡಿಎ 3.0 ಸರ್ಕಾರ ಇದೊಂದು ಮಹಾನ್ ಕ್ರಾಂತಿಕಾರಿ ನಡೆ ಎಂದು ಪೋಷಿಸಿಕೊಂಡಿದೆ. ಇದು ನಿಜವೇ?
ಒಎನ್ಒಎಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಕಾಲ ಮಾತುಕತೆ ನಡೆದಿದ್ದು, ಆರಂಭದಲ್ಲಿದ್ದ 70 ಪ್ರಕಾಶಕರಲ್ಲಿ ಉಳಿದುಕೊಂಡವರು 30 ಮಂದಿ ಮಾತ್ರ. ಒಮ್ಮೆಲೆ ಎಲ್ಲ ಜರ್ನಲ್ಗಳ ಚಂದಾ ತೆಗೆದುಕೊಳ್ಳುವುದರಿಂದ, ಅಪಾರ ಮೊತ್ತ ಉಳಿಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಮೊದಲು ವಿಶ್ವವಿದ್ಯಾನಿಲಯ/ಸಂಶೋಧನಾ ಸಂಸ್ಥೆಗಳು ಅಥವಾ ಗ್ರಂಥಾಲಯ ಒಕ್ಕೂಟಗಳು ತಮಗೆ ಬೇಕಿರುವ ಜರ್ನಲ್ಗಳನ್ನು ಖರೀದಿಸುತ್ತಿದ್ದವು ಇಲ್ಲವೇ ಚಂದಾ ಪಡೆದುಕೊಳ್ಳುತ್ತಿದ್ದವು. ಒಮ್ಮೆಲೇ ಚಂದಾದಿಂದ ದೇಶದಲ್ಲಿನ 6,300 ಸರ್ಕಾರಿ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಪ್ರಾಮುಖ್ಯತೆಯ ವಿದ್ಯಾಲಯಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಒಎನ್ಒಎಸ್ ವೇದಿಕೆ ಮೂಲಕ ಈ ಜರ್ನಲ್ಗಳನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಮೊದಲು ವಾರ್ಷಿಕ ಅಂದಾಜು 1,500 ಕೋಟಿ ರೂ. ವೆಚ್ಚವಾಗುತ್ತಿತ್ತು. ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆ ಗಳು ವೈಜ್ಞಾನಿಕ ಜರ್ನಲ್ಗಳಿಗೆ ನೀಡುವ ಚಂದಾ ವೆಚ್ಚದ ಕಡಿತಗೊಳಿಸುವಿಕೆ ಸಂಬಂಧ ದೇಶದ ಮೂರು ಪ್ರಮುಖ ವೈಜ್ಞಾನಿಕ ಅಕಾಡೆಮಿಗಳು ನೇಮಿಸಿದ್ದ ತಜ್ಞರ ಸಮಿತಿಯು ಏಕೈಕ ರಾಷ್ಟ್ರೀಯ ಚಂದಾ ಮೂಲಕ ವೆಚ್ಚವನ್ನು ತಾರ್ಕಿಕೀ ಕರಣಗೊಳಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಈ ಮೊದಲು ನೀಡಲಾಗುತ್ತಿತ್ತು ಎನ್ನಲಾದ 1,500 ಕೋಟಿ ರೂ. ಮೊತ್ತ ಉತ್ಪ್ರೇಕ್ಷೆಯದು. ವಿಶ್ವವಿದ್ಯಾನಿಲಯಗಳು-ಸಂಶೋಧನೆ ಸಂಸ್ಥೆಗಳಿಗೆ ನೀಡುತ್ತಿರುವ ವಾರ್ಷಿಕ ಅನುದಾನ ವರ್ಷೇವರ್ಷೇ ಕುಸಿಯುತ್ತಿದ್ದು, ಇಷ್ಟು ದೊಡ್ಡ ಮೊತ್ತವನ್ನು ಶೈಕ್ಷಣಿಕ ಸಂಸ್ಥೆಗಳು ಚಂದಾಕ್ಕಾಗಿ ಖರ್ಚುಮಾಡುವುದು ಸಾಧ್ಯವೇ ಇಲ್ಲ ಎನ್ನುವುದು ಈ ಕ್ಷೇತ್ರದಲ್ಲಿರುವವರ ಅನಿಸಿಕೆ.
ಬೇರೆ ದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿದರೆ, ಒಎನ್ಒಎಸ್ ಕುರಿತು ಹೇಷಾರವ ಅಗತ್ಯವಿಲ್ಲ ಎನ್ನುವುದು ಅರಿವಾಗಲಿದೆ. ಶ್ರೀಮಂತ ದೇಶಗಳಲ್ಲಿ ವಿಶೇಷವಾಗಿ, ಅಮೆರಿಕದಲ್ಲಿ ಬಹುತೇಕ ವಿಶ್ವವಿದ್ಯಾನಿಲಯಗಳು ಪ್ರಮುಖ ವಾಣಿಜ್ಯ ಪ್ರಕಾಶನ ಸಂಸ್ಥೆಗಳ ಜರ್ನಲ್ಗಳ ಚಂದಾ ನವೀಕರಣ ಮಾಡಿಸಿಲ್ಲ. ಇದಕ್ಕೆ ಕಾರಣ, ಚಂದಾ ದುಬಾರಿ ಎನ್ನುವುದಲ್ಲ; ಬದಲಿಗೆ, ತಮ್ಮ ವಿಶ್ವವಿದ್ಯಾನಿಲಯಗಳ ಸಂಶೋಧನೆಗೆ ಜಗತ್ತಿನ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು ಎನ್ನುವ ಆಶಯ ಈಡೇರುತ್ತಿಲ್ಲ ಎಂದು ಅವು ಚಂದಾ ನವೀಕರಣಕ್ಕೆ ಮುಂದಾಗಿಲ್ಲ. ಇದರಿಂದ ವೈಲಿ, ಎಲ್ಸೆಲ್ವಿಯರ್, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ (ಎಐಪಿ), ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್, ಸ್ಪ್ರಿಂಗರ್ ನೇಚರ್, ಅಮೆರಿಕನ್ ಕೆಮಿಕಲ್ ಸೊಸೈಟಿ, ಸೇಜ್, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ಟೇಲರ್ ಆಂಡ್ ಫ್ರಾನ್ಸಿಸ್ ಇತ್ಯಾದಿ ಪ್ರಕಾಶನ ಸಂಸ್ಥೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಬಿಟಿ) ಒಎನ್ಒಎಸ್ ಮೂಲಕ ತಂದಿರುವುದು ಇದೇ ಪ್ರಕಾಶನ ಸಂಸ್ಥೆಗಳ ಜರ್ನಲ್ಗಳನ್ನು. ಪಾಶ್ಚಿಮಾತ್ಯ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಚಂದಾ ನವೀಕರಣಗೊಳಿಸದೆ ಇರುವ ಪ್ರವೃತ್ತಿ 2004ರಿಂದ ಆರಂಭವಾಯಿತು. ಹಾರ್ವರ್ಡ್ ವಿಶ್ವವಿದ್ಯಾನಿಲಯವು ಎಲ್ಸೆಲ್ವಿಯರ್ ಜತೆಗಿನ ಒಪ್ಪಂದವನ್ನು ವಜಾಗೊಳಿಸಿತು ಮತ್ತು ಜರ್ನಲ್ಗಳಿಗೆಂದು ಮೀಸಲಿಟ್ಟ ಅನುದಾನವನ್ನು ಕಡಿತಗೊಳಿಸಿತು. ಆನಂತರ ಅಮೆರಿಕ, ಕೆನಡಾ ಹಾಗೂ ಯುರೋಪಿನ 90 ವಿಶ್ವವಿದ್ಯಾನಿಲಯಗಳು ಮತ್ತು ಗ್ರಂಥಾಲಯಗಳು ಜರ್ನಲ್ಗಳ ಚಂದಾ ನವೀಕರಿಸಿಲ್ಲ. ಮತ್ತು, ಈ ವಿಶ್ವವಿದ್ಯಾನಿಲಯಗಳಿಗೆ ಹಣದ ಕೊರತೆಯಿಲ್ಲ!
ಈ ನಿರ್ಧಾರದ ಹಿಂದೆ ಇರುವುದು– ಜ್ಞಾನಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಸಿಗಬೇಕು ಎನ್ನುವ ಕಾಳಜಿ. ಪ್ರಕಾಶನ ಸಂಸ್ಥೆಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಸಂಶೋಧನೆಯನ್ನು ಅಡಗಿಸಿಡುವುದನ್ನು ಹೆಚ್ಚಿನ ವಿಶ್ವವಿದ್ಯಾನಿಲಯಗಳು ಒಪ್ಪಿಕೊ ಳ್ಳುತ್ತಿಲ್ಲ. ಈ ಪ್ರಕಾಶನ ಸಂಸ್ಥೆಗಳು ಭಾರೀ ಲಾಭ ಗಳಿಸುತ್ತಿವೆ. 2019ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ಎಲ್ಸೆಲ್ವಿಯರ್ನ ಚಂದಾ ನವೀಕರಿಸದಿರಲು ನಿರ್ಧರಿಸಿತು. ಈ ಸಂಬಂಧ ಹಲವು ತಿಂಗಳು ಮಾತುಕತೆ ನಡೆದು, ʻವಿಶ್ವವಿದ್ಯಾನಿಲಯದ ಸಂಶೋಧನೆಗಳಿಗೆ ಜಾಗತಿಕ ಪ್ರವೇಶಾವಕಾಶ ನೀಡಬೇಕು ಮತ್ತು ಲಾಭಕೋರತನಕ್ಕೆ ಕಡಿವಾಣ ಹಾಕಬೇಕು; ವಿಶ್ವವಿದ್ಯಾನಿಲಯದ 10 ಕ್ಯಾಂಪಸ್ನಲ್ಲಿನ ಸಂಶೋಧನೆಗಳು ತಕ್ಷಣ ಯಾವುದೇ ವೆಚ್ಚವಿಲ್ಲದೆ ವಿಶ್ವ ದೆಲ್ಲೆಡೆ ಲಭ್ಯವಾಗಿ, ಸಂಶೋಧನೆಯ ವೇಗವರ್ಧನೆ ಆಗಬೇಕು; ಓದುಗನಿಗೆ ಯಾವುದೇ ವೆಚ್ಚವಿಲ್ಲದೆ, ಸಂಶೋಧನೆಗಳು ತಲುಪಬೇಕುʼ ಎನ್ನುವ ಶರತ್ತನ್ನು ಎಲ್ಸೆಲ್ವಿಯರ್ ಒಪ್ಪಲಿಲ್ಲ. ಅಮೆರಿಕದಲ್ಲಿ ಪ್ರತಿವರ್ಷ ಆಗುವ ಒಟ್ಟು ಪ್ರಕಟನೆಯಲ್ಲಿ ಕ್ಯಾಲಿಫೋರ್ನಿಯಾ ವಿವಿ ಪಾಲು ಶೇ.10. ಇದಲ್ಲದೆ, ಎಲ್ಸೆಲ್ವಿಯರ್ ಲೇಖಕರಿಂದ ಪ್ರಕಟಣೆಗೆ ಶುಲ್ಕ ಸಂಗ್ರಹಿಸುತ್ತಿತ್ತು; ಇದರೊಟ್ಟಿಗೆ ಚಂದಾ ಮೊತ್ತವೂ ಸೇರಿ, ಸಂಸ್ಥೆಯ ಲಾಭ ಇನ್ನಷ್ಟು ಉಬ್ಬುತ್ತಿತ್ತು. ಇದರಿಂದಾಗಿ ಒಟ್ಟು ಖರ್ಚು ಹೆಚ್ಚುತ್ತಿದೆ ಎಂದು ವಿಶ್ವವಿದ್ಯಾನಿಲಯ ಪ್ರಕಟಣೆ ಯಲ್ಲಿ ಹೇಳಿತು. ವಿಶ್ವವಿದ್ಯಾನಿಲಯದ ಸಂಶೋಧನೆಗಳು ಮುಕ್ತವಾಗಿ ಮತ್ತು ಸಮಾನವಾಗಿ ಅತಿ ಹೆಚ್ಚು ಓದುಗರಿಗೆ ಸಿಗಬೇಕು ಎಂಬ ಶರತ್ತನ್ನು ಎಲ್ಸೆಲ್ವಿಯರ್ ಪೂರೈಸಲಿಲ್ಲ ಎಂಬ ಕಾರಣ ನೀಡಿ ಎಂಐಟಿ(ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕೂಡ ಒಂದು ವರ್ಷದ ಬಳಿಕ ಇದೇ ದಾರಿ ಹಿಡಿಯಿತು.
ಅಪಾರದರ್ಶಕ ಒಪ್ಪಂದ: ʻಒಂದು ದೇಶ,ಒಂದು ಚಂದಾʼ ಕ್ರಾಂತಿಕರ ನಡೆ ಎನ್ನುತ್ತಿರುವ ಪರಿಣತರ ಸಮಿತಿಗೆ ಇದು ಗೊತ್ತಿರಲಿಲ್ಲವೇ? ಎಂಐಟಿ ಇಲ್ಲವೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಸಂಶೋಧಕರ ಲೇಖನ ಪ್ರಕಟಿಸಲು ಕಂಡುಕೊಂಡ ಪರ್ಯಾಯ ಮಾರ್ಗಗಳ ಬಗ್ಗೆ ಗಮನ ಹರಿಸಲಿಲ್ಲವೇಕೆ? ಸಂಶೋಧನೆ ಲೇಖನಗಳು-ಪ್ರಬಂಧಗಳಿಗೆ ಮುಕ್ತ ಪ್ರವೇಶಾವಕಾಶ ಖಾತ್ರಿಗೊಳಿಸಲು, ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆಯೇ? ದೇಶದ ಎಲ್ಲ ನಾಗರಿಕರಿಗೂ ಜ್ಞಾನ, ಮಾಹಿತಿ ಮತ್ತು ಸಂಪನ್ಮೂಲಕ್ಕೆ ಸಮಾನ, ಮುಕ್ತ ಪ್ರವೇಶಾವಕಾಶ ಒದಗಿಸುವುದು ಮತ್ತು ಮುಂಗಾಣ್ಕೆ ಇರುವ ವಿಜ್ಞಾನ ಚೌಕಟ್ಟು ಒದಗಿಸುವುದು ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣಾ ಕಾರ್ಯನೀತಿ(ಎಸ್ಟಿಐಪಿ) 2020ರ ಪ್ರಾಥಮಿಕ ಉದ್ದೇಶ ಎಂದು ಸರ್ಕಾರ ಹೇಳುತ್ತದೆ. ಆದರೆ, ಈ ಸಂಬಂಧ ಏನಾದರೂ ಕೆಲಸ ಮಾಡಿದೆಯೇ? ಇಲ್ಲ. ಗ್ರಂಥಪಾಲಕರು ಹಾಗೂ ವಿಜ್ಞಾನಿಗಳ ಪ್ರಕಾರ, ಸರ್ಕಾರ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಖಾತ್ರಿ ಪಡಿಸಲು ಬೇರೆ ಮಾರ್ಗ ಗಳನ್ನು ಪ್ರೋತ್ಸಾಹಿಸಬಹುದಿತ್ತು. ವಿದೇಶಿ ಪ್ರಕಾಶನ ಸಂಸ್ಥೆಗಳಿಗೆ ಚಂದಾ ರೂಪದಲ್ಲಿ ದುಬಾರಿ ಹಣ ನೀಡುವುದು ಸಮರ್ಪಕವಲ್ಲ.
ಒಪ್ಪಂದ ಅಪಾರದರ್ಶಕವಾಗಿರುವುದರಿಂದ, ಪಾವತಿಸಿದ ಚಂದಾ ಎಷ್ಟು ಎಂಬುದು ಬಹಿರಂಗಗೊಳ್ಳುವುದಿಲ್ಲ. ಹೆಚ್ಚಿನ ಪ್ರಕಾಶಕರು ಲೇಖಕರಿಂದ ಶುಲ್ಕ ಸಂಗ್ರಹಿಸಿ, ಲೇಖನಗಳು ಆನ್ಲೈನ್ನಲ್ಲಿ ಮುಕ್ತವಾಗಿ ಸಿಗುವಂತೆ ಮಾಡುತ್ತಿದ್ದಾರೆ. ಲೇಖಕರಿಗೆ ಲೇಖನ ಪರಿಷ್ಕರಣೆ ಶುಲ್ಕ(ಎಪಿಸಿ) ದುಬಾರಿಯಾಗಿ ಪರಿಣಮಿಸಿದೆ. ಸರ್ಕಾರದ ಚಂದಾ ಒಪ್ಪಂದದಿಂದ ಪ್ರಕಾಶಕರಿಗೆ ಎರಡೂ ಕಡೆಯಿಂದ ಹಣ ಸಿಗಲಿದೆ. ಈ ಸಮಸ್ಯೆಯನ್ನು ಸರ್ಕಾರ ಹೇಗೆ ಬಗೆಹರಿಸಲಿದೆ ಎಂಬುದು ಗೊತ್ತಿಲ್ಲ. ಈ ಸಂಬಂಧ ಪ್ರಕಾಶಕರೊಂದಿಗೆ ಸರ್ಕಾರ ಮಾತನ್ನಾಡಿದೆಯೇ?
ಉನ್ನತ ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ: ದೇಶದ ವೈಜ್ಞಾನಿಕ-ಶೈಕ್ಷಣಿಕ ಕ್ಷೇತ್ರದಿಂದ ಗಮನಾರ್ಹ ಎನ್ನಬಹುದಾದ ಸಂಶೋಧನೆ-ಲೇಖನ/ಪ್ರಬಂಧ ಪ್ರಕಟಣೆ ಆಗುತ್ತಿದೆಯೇ? ಉತ್ತರ ನಿರಾಶಾದಾಯಕವಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆಯಾಗುತ್ತಿದೆ. ಇದರಿಂದ ಮೂಲಸೌಲಭ್ಯ ಹಾಗೂ ಮಾನವ ಸಂಪನ್ಮೂಲದ ತೀವ್ರ ಕೊರತೆಯುಂಟಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್, ಪಿಯು, ಪದವಿ, ಸ್ನಾತಕೋತ್ತರ, ವೈದ್ಯ ಮತ್ತು ವೃತ್ತಿಪರ ಶಿಕ್ಷಣ ಸೇರಿದಂತೆ ಎಲ್ಲ ಹಂತಗಳಲ್ಲಿ ಬೋಧಕರ ಕೊರತೆ ಇದೆ. ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಪ್ರಕಾರ, ದೇಶದಲ್ಲಿ 460 ರಾಜ್ಯ ವಿವಿಗಳು, 128 ಡೀಮ್ಡ್ ವಿವಿ, 56 ಕೇಂದ್ರೀಯ ವಿವಿ ಮತ್ತು 430 ಖಾಸಗಿ ವಿವಿ ಸೇರಿ ಒಟ್ಟು 1,168 ವಿಶ್ವವಿದ್ಯಾನಿಲಯಗಳು, 23 ಐಐಟಿಗಳು, 21 ಐಐಎಂಗಳಿವೆ. ಜೊತೆಗೆ, ಭಾರತೀಯ ವಿಜ್ಞಾನ ಸಂಸ್ಥೆಯಂಥ ಉನ್ನತ ಶಿಕ್ಷಣ ಸಂಸ್ಥೆಗಳಿವೆ. 15.98 ಲಕ್ಷ ಶಿಕ್ಷಕರು, 4.33 ಕೋಟಿ ವಿದ್ಯಾರ್ಥಿಗಳನ್ನು ಒಳಗೊಂಡ ಜಗತ್ತಿನ ಅತ್ಯಂತ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ನಮ್ಮದು. ನಂತರದ ಸ್ಥಾನ ಇಂಡೋನೇಷ್ಯಾ ಹಾಗೂ ಅಮೆರಿಕಕ್ಕೆ ಸಲ್ಲುತ್ತದೆ. ಕರ್ನಾಟಕದಲ್ಲಿ ಖಾಸಗಿ ಸೇರಿದಂತೆ 59 ವಿಶ್ವವಿದ್ಯಾನಿಲಯಗಳು, 630 ಎಂಜಿನಿಯರಿಂಗ್ ಕಾಲೇಜುಗಳಿವೆ. ಈ ವ್ಯವಸ್ಥೆಗೆ ಬೇಕಿರುವಷ್ಟು ಅನುದಾನ ಲಭ್ಯವಾಗುತ್ತಿಲ್ಲ. ದೇಶವೊಂದರ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಅನುದಾನ ನೀಡಬೇಕು ಎಂಬುದು ಸ್ಥಾಪಿತ ಸತ್ಯ. ಆದರೆ, ಕೇಂದ್ರ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವುದು ಜಿಡಿಪಿಯ ಶೇ.2.7; ಇದರಲ್ಲಿ ಉನ್ನತ ಶಿಕ್ಷಣಕ್ಕೆ 47,620 ಕೋಟಿ ರೂ. ಅನುದಾನ ನೀಡಲಾಗಿದೆ. ಕರ್ನಾಟಕ ಶಿಕ್ಷಣಕ್ಕೆ ನೀಡಿದ ಅನುದಾನ 1.20 ಲಕ್ಷ ಕೋಟಿ ರೂ. ಆದರೆ, ನಾರ್ವೆ ಜಿಡಿಪಿಯ ಶೇ. 6.6, ಚಿಲಿ ಶೇ.6.5, ಇಸ್ರೇಲ್ 6.2, ಆಸ್ಟ್ರೇಲಿಯ ಶೇ.6.1 ಹಾಗೂ ಇಂಗ್ಲೆಂಡ್-ಅಮೆರಿಕ ಶೇ.6ರಷ್ಟು ಅನುದಾನ ನೀಡುತ್ತವೆ. ಕರ್ನಾಟಕದಲ್ಲಿ ಎಲ್ಲ ಹಂತಗಳಲ್ಲಿ 1,41,358 ಶಿಕ್ಷಕರ ಕೊರತೆಯಿದೆ. ಕೇಂದ್ರೀಯ ವಿವಿಗಳಲ್ಲಿ ಪ್ರಾಧ್ಯಾಪಕರ ಕೊರತೆ ಪ್ರಮಾಣ ಶೇ.59.8, ಸಹಪ್ರಾಧ್ಯಾಪಕರು ಶೇ.46 ಹಾಗೂ ಸಹಾಯಕ ಪ್ರಾಧ್ಯಾಪಕರ ಕೊರತೆ ಶೇ.20.7ರಷ್ಟು ಇದೆ. ಅಷ್ಟು ಮಾತ್ರವಲ್ಲದೆ, ವೈದ್ಯಕೀಯ, ಐಐಟಿ, ಐಐಎಂ, ವೃತ್ತಿಪರ-ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲೂ ಬೋಧಕರ ಕೊರತೆ ತೀವ್ರವಾಗಿದೆ. ಎಲ್ಲೆಡೆ ಅತಿಥಿ ಶಿಕ್ಷಕರರದ್ದೇ ಕಾರುಬಾರು; ಆದರೆ, ಅವರಿಗೆ ಮಾನವಂತ ಬದುಕಿಗೆ ಅಗತ್ಯವಿರುವಷ್ಟು ಗೌರವವೇತನ ನೀಡದೆ, ಅವಮಾನಿಸಲಾಗುತ್ತಿದೆ.
ಪಿಎಚ್.ಡಿಗೆ ದಾಖಲಾಗುವವರು ಮತ್ತು ಮುಗಿಸಿದವರದ್ದು ಇನ್ನೊಂದು ಕಥೆ. ದೇಶದಲ್ಲಿ ಉನ್ನತ ಶಿಕ್ಷಣದ ಸ್ಥಿತಿಗತಿಯನ್ನು ಪರಿಶೀಲಿಸಲು ನಡೆಸುವ ವೆಬ್ ಆಧರಿತ ಸಮೀಕ್ಷೆಯಾದ AISHE (ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ) 2021-22ರ ಪ್ರಕಾರ, ದೇಶದಲ್ಲಿ 2021-22ರಲ್ಲಿ ಪಿಎಚ್.ಡಿಗೆ ದಾಖಲಾದವರ ಸಂಖ್ಯೆ 2,12,568; ಕರ್ನಾಟಕದಲ್ಲಿ 11,193. ಪ್ರತಿ ವರ್ಷ ಸುಮಾರು 24,000 ಮಂದಿ ಪಿಎಚ್.ಡಿ ಮುಗಿಸುತ್ತಾರೆ. ತಮಿಳುನಾಡು, ಉತ್ತರಪ್ರದೇಶ ಬಿಟ್ಟರೆ ಕರ್ನಾಟಕದಿಂದ ಅತಿ ಹೆಚ್ಚು ಪಿಎಚ್.ಡಿ ಪದವೀದರರು ಹೊರಬರುತ್ತಾರೆ. ದಿಲ್ಲಿಗೆ ನಾಲ್ಕನೇ ಸ್ಥಾನ. ಪ್ರಶ್ನೆಯೇನೆಂದರೆ, ಈ ಪಿಎಚ್.ಡಿ ಪದವೀದರರು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ? ಇವರು ನಡೆಸಿದ ಸಂಶೋಧನೆ ಏನು? ಮಂಡಿಸಿದ ಪ್ರಬಂಧದಿಂದ ಸಮಾಜದ ಮೇಲೆ ಏನಾದರೂ ಗುಣಾತ್ಮಕ ಪರಿಣಾಮ ಉಂಟಾಗಿದೆಯೇ? ಇವರ ಪ್ರಬಂಧಗಳ ಗುಣಮಟ್ಟ ಹೇಗಿದೆ? ಪಿಎಚ್.ಡಿ ಪ್ರಬಂಧಗಳ ನಕಲು ಸರ್ವೇಸಾಮಾನ್ಯವಾಗಿದೆ. ವಿಶ್ವವಿದ್ಯಾನಿಲಯ ಅನುದಾನ ಗಳ ಆಯೋಗ (ಯುಜಿಸಿ)ದ ಜುಲೈ 1,2023ರ ಆದೇಶದ ಪ್ರಕಾರ, ವಿಶ್ವವಿದ್ಯಾನಿಲಯ/ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇರಲು ಪಿಎಚ್.ಡಿ ಅಗತ್ಯವಿಲ್ಲ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಕ್ಕೆ ರಾಷ್ಟ್ರೀಯ ಅರ್ಹತೆ ಪರೀಕ್ಷೆ(ಎನ್ ಇಟಿ), ರಾಜ್ಯ ಅರ್ಹತೆ ಪರೀಕ್ಷೆ(ಎಸ್ಇಟಿ) ಇಲ್ಲವೇ ರಾಜ್ಯ ಮಟ್ಟದ ಅರ್ಹತೆ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ಜುಲೈ 1,2021ರಲ್ಲಿ ಯುಜಿಸಿ ಪಿಎಚ್.ಡಿಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿತ್ತು. ಶಿಕ್ಷಣ ಇಲಾಖೆ ಖಾಯಂ ನೇಮಕ ಮಾಡಿಕೊಳ್ಳದೆ ಇರುವುದರಿಂದ, ಜೀವಮಾನದ 25 ವರ್ಷಗಳನ್ನು ವ್ಯಾಸಂಗದಲ್ಲೇ ಕಳೆದಿರುವ ಇವರೆಲ್ಲರೂ ಎಲ್ಲಿಗೆ ಹೋಗಬೇಕು?
ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ಅಗತ್ಯವಿದೆ ಎನ್ನುವ ಮಾತು ಕ್ಲೀಷೆಯಾಗಿಬಿಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ದುರಸ್ತಿ ಕೆಲಸ ಬಿಟ್ಟು, ʻಒಂದು ದೇಶ, ಒಂದು ಚುನಾವಣೆʼ, ʻಒಂದು ದೇಶ, ಒಂದು ಚಂದಾʼ ಇತ್ಯಾದಿ ಮೂಲಕ ʻಕ್ರಾಂತಿʼ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಓದು ಎನ್ನುವುದು ಹಳ್ಳ ಹತ್ತಿರುವ ಸಮಯದಲ್ಲಿ ಈ ಜರ್ನಲ್ಗಳನ್ನು ಓದುವವವರು ಎಷ್ಟು ಮಂದಿ ಇದ್ದಾರು? ಇದರಿಂದ, ವಿದೇಶಿ ಪ್ರಕಾಶಕ ಸಂಸ್ಥೆಗಳ ಕಿಸೆ ತುಂಬುತ್ತದೆಯೇ ಹೊರತು ಜ್ಞಾನ ಪ್ರಸಾರ ನಡೆಯಲಿದೆ ಎಂದು ಭಾವಿಸುವುದು ಭ್ರಮೆಯಷ್ಟೇ. ಒಂದು ಭಾಷೆ, ಒಂದು ಧರ್ಮ, ಒಂದು ಚುನಾವಣೆ ……ಇತ್ಯಾದಿ ʻಒಂದುʼ ಎಂಬ ವ್ಯಸನಕ್ಕೆ ಬಿದ್ದಿರುವ ಸರ್ಕಾರದ ಈ ಉಪಕ್ರಮವು ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಸುಧಾರಣೆಗೆ
ಮಾಡಬೇಕಿರುವ ಶಸ್ತ್ರಚಿಕಿತ್ಸೆಯ ಬದಲು ಮುಲಾಮು ಹಚ್ಚಿ ಉಪಶಮನಗೊಳಿಸುವ ಪ್ರಯತ್ನದಂತಿದೆ.