ಮೀರುವುದು ಕ್ರಿಯಾಪದ
– ವೆಂಕಟ್ರಮಣ ಗೌಡ ಬರೆಯುವುದಿದೆ ಕಥೆಯೊಂದನು ಅವಳೆದೆಯೊಳಗಿನ ಹೂದೋಟವ ತಂದಿರಿಸಿ ಸುಡು ಹಗಲಲಿ ಮೆರೆಸಿ ಮಧುರಾತ್ರಿಯನು ಎಲ್ಲ ಮರೆಯುವಂತೆ ಆಹಾ ಎನ್ನಬೇಡ ರಮ್ಯತೆಯ ಅಧಿದೇವತೆಯೆ, ಮರೆಯುವುದೆಂದರೆ ಇಲ್ಲಿ ನೆನಪುಗಳ ಅಗ್ನಿಪರೀಕ್ಷೆ ಕೇಳು ರಮ್ಯದೇವತೆಯೆ, ಸುಂದರ ಸುಳ್ಳುಗಳ ಹೊದ್ದ ನಿನ್ನಂತಲ್ಲ ಅವಳು ಅವಳೊಳಗಿವೆ ನಿನ್ನ ಬಿನ್ನಾಣವನೆಲ್ಲ ಬಯಲಿಗಿಳಿಸುವ ನಿಗಿನಿಗಿ ಕ್ರಿಯಾಪದಗಳು ಕಥೆ ಬರೆಯುವುದೆಂದರೂ ಹೀಗೆಯೇ ಕ್ರಿಯಾಪದಗಳ ನಡುವೆ ಕನಲುವುದು ಮೊಗೆಮೊಗೆದು ನೆನಪುಗಳೊಳಗೆ ಬಂಧಿಯಾಗುವುದು ವಿಫಲ ಪ್ರೇಮದ ಅಸಹನೀಯತೆಯಲ್ಲಿ ಬೆಳಗುವುದು ಬರೆಯುವುದಿದೆ ಕಥೆಯೊಂದನು ಬರೆಯಲನುವಾಗುವುದನ್ನೇ ಕಾದು ಮೀರುವುದನ್ನು