ಸೂಪರ್ ಹಿಟ್ ಸಿನೆಮಾ ʼತ್ರಿ ಈಡಿಯಟ್ಸ್ʼ ಸಿನೆಮಾದಲ್ಲಿ ಆಮಿರ್ ಖಾನ್ ಅವರ ಪಾತ್ರದ ನಿಜರೂಪ- ಲಡಾಖಿನ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಸೋನಂ ವಾಂಗ್ಚುಕ್. ಜನವರಿ 26, 2023 ರಿಂದ ಲಡಾಖಿನ ತೆರೆದ ಬಯಲಿನಲ್ಲಿ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ 5 ದಿನ ನಿರಶನ ಮಾಡಿದ್ದ ವಾಂಗ್‌ಚುಕ್, ಈಗ ʻದೆಹಲಿ ಚಲೋʼ ಆರಂಭಿಸಿದ್ದಾರೆ. ಅವರ ತಂಡದ ಪಾದಯಾತ್ರೆಯು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೆಹಲಿಯ ರಾಜ್‌ಘಾಟಿನಲ್ಲಿ ಕೊನೆಗೊಳ್ಳಲಿದೆ. ಅವರ ಬೇಡಿಕೆ ಇದು-ಲಡಾಖಿಗೆ ರಾಜ್ಯದ ಸ್ಥಾನಮಾನ, ಹೆಚ್ಚುವರಿ ಲೋಕಸಭೆ ಸ್ಥಾನ, ನಿರುದ್ಯೋಗ ನಿವಾರಣೆ ಮತ್ತು ಸಂವಿಧಾನದ 6ನೇ ಪರಿಶಿಷ್ಟಕ್ಕೆ ಸೇರ್ಪಡೆ.
ಲಡಾಖ್ ಎಂದರೆ?: 86,904 ಚದರ ಕಿಮೀ ವಿಸ್ತೀರ್ಣವಿರುವ 2ನೇ ಅತಿ ದೊಡ್ಡ ಹಾಗೂ ಅತ್ಯಂತ ಕಡಿಮೆ ಜನಸಂಖ್ಯೆ (2011ರ ಜನಗಣತಿ ಪ್ರಕಾರ, 2.74 ಲಕ್ಷ) ಇರುವ ಕೇಂದ್ರಾಡಳಿತ ಪ್ರದೇಶ. ಲೆಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳು. ಜಗತ್ತಿನ ಅತಿ ಎತ್ತರದ ಪ್ರದೇಶಗಳಲ್ಲಿ ಒಂದು. ತಂಪಾದ ಮರುಭೂಮಿ ವ್ಯವಸ್ಥೆ ಇರುವ ಲಡಾಖಿನಲ್ಲಿ ವಾರ್ಷಿಕ ಮಳೆ ಪ್ರಮಾಣ ಕೇವಲ 4 ಇಂಚು. ಈ ಪ್ರದೇಶ ತನ್ನ ನೀರಿನ ಅಗತ್ಯಗಳಿಗೆ ಹಿಮನದಿಗಳನ್ನು ಆಶ್ರಯಿಸಿದೆ. ಹವಾಮಾನ ಬದಲಾವಣೆಯಿಂದ ಹಿಮ ನದಿಗಳು ಶೀಘ್ರವಾಗಿ ಕರಗುತ್ತಿರುವುದರಿಂದ, ಲಡಾಖ್ ಸಂಕಷ್ಟಕ್ಕೆ ಸಿಲುಕಿದೆ. ವನ್ಯ ಯಾಕ್, ಹಿಮ ಚಿರತೆಯಂಥ ಸಸ್ತನಿಗಳಲ್ಲದೆ, ವೈವಿಧ್ಯಮಯ ಸಸ್ಯ ಸಂಪತ್ತು ಹೊಂದಿದೆ. ಈ ಪರಿಸರಕ್ಕೆ ಸೂಕ್ತವಾದ ಸಂಸ್ಕೃತಿ ಹಾಗೂ ಜೀವನಾಧಾರಗಳು ವಿಕಸನಗೊಂಡಿವೆ. ಇವು ಭಾರಿ ಮಾನವ ಚಟುವಟಿಕೆ ಯನ್ನು ಸಹಿಸಲಾರವು. ಉನ್ನತ ಎತ್ತರ ಪ್ರದೇಶದ ಪಶುಸಾಕಣೆ, ಕೃಷಿ ಮತ್ತು ವ್ಯಾಪಾರಗಳು ಶತಮಾನದಿಂದ ಲಡಾಖಿ ಆರ್ಥಿಕತೆ ಮತ್ತು ಸಮಾಜದ ಆಧಾರವಾಗಿದ್ದವು.
ಈಗ, ಲಡಾಖಿನ ಸ್ಥಿತಿ ಗಂಭೀರವಾಗಿದೆ. ಈ ಮೊದಲು ತಲುಪಲು ಸಾಧ್ಯವಿಲ್ಲದ ಸ್ಥಳಗಳನ್ನೆಲ್ಲ ಚೀನಾದ ಸೇನೆ ಮುಟ್ಟಿದೆ. ಗ್ಯಾಲ್ವನ್‌ನಲ್ಲಿ ಜೂನ್ 2020ರಲ್ಲಿ ನಡೆದ ಭಾರತೀಯ ಮತ್ತು ಚೀನಾ ಸೇನೆಯ ಘರ್ಷಣೆ ಬಳಿಕ ಮಾಡಿಕೊಂಡ ಒಪ್ಪಂದದ ಪ್ರಕಾರ, ಪೂರ್ವ ಲಡಾಖಿನ ಕೆಲವು ಪ್ರದೇಶಗಳು ಅಥವಾ ಪ್ಯಾಟ್ರೋಲಿಂಗ್ ಬಿಂದುಗಳಿಗೆ ಭಾರತೀಯ ಸೇನೆಗೆ ಪ್ರವೇಶವಿಲ್ಲದಂತೆ ಆಗಿದೆ. ಈ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟರು.
ನಿರಶನ: ವಾಂಗ್ಚುಕ್ ಜಗತ್ತಿನ ಅತ್ಯಂತ ಎತ್ತರದ ಮೋಟಾರು ರಸ್ತೆಯಾದ ಕಾರ್ದುಂಗ್ ಲಾ ಪಾಸ್‌ನಲ್ಲಿ ನಿರಶನಕ್ಕೆ ಸಿದ್ಧತೆ ನಡೆಸಿದ್ದರು. ಅನುಮತಿ ನಿರಾಕರಿಸಿದ್ದರಿಂದ, ಜನವರಿ 26, 2023 ರಂದು ತಮ್ಮ ಶಾಲೆಯಲ್ಲೇ ಸತ್ಯಾಗ್ರಹ ಆರಂಭಿಸಿದರು. ಜನರು ತೆರೆದ ಬಯಲಿನಲ್ಲಿ, ಮೂಳೆಯನ್ನು ಕೊರೆಯುವ -40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಬೀದಿಗಳಲ್ಲಿ ನಿರಶನ ಮಾಡಿದರು. ಜನವರಿ 31ರಂದು ಲೆಹ್‌ನಲ್ಲಿ 2000 ಜನ ಸೇರಿದ್ದರು. ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಜನ ನಿರಶನಕ್ಕೆ ಕೈಜೋಡಿಸಿದರು.
ಇದಕ್ಕೆ 2 ವಾರ ಮೊದಲು ಲಡಾಖಿನ ಎರಡು ಪ್ರಮುಖ ರಾಜಕೀಯ-ಧಾರ್ಮಿಕ ಸಂಘಟನೆಗಳಾದ ಲೆಹ್, ಲಡಾಖ್ ಉನ್ನತ ಸಮಿತಿ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್, ಸ್ಥಾನಮಾನದ ವಿಷಯವನ್ನು ಪರಿಶೀಲಿಸಲು ಕೇಂದ್ರ ನೇಮಿಸಿದ್ದ ಸಮಿತಿಯನ್ನು ತಿರಸ್ಕರಿಸಿದ್ದವು. ಸಮಿತಿಯ ಕಾರ್ಯಸೂಚಿ ಅಸ್ಪಷ್ಟವಾಗಿದೆ ಮತ್ತು ತಮ್ಮ ನಿರ್ದಿಷ್ಟ ಬೇಡಿಕೆಗಳನ್ನು ಪರಿಗಣಿಸಿಲ್ಲ ಎಂದು ಸಮಿತಿ ಹೇಳಿತು. ಸರ್ಕಾರ ಸುರಕ್ಷತೆಯ ನೆಪದಲ್ಲಿ ವಾಂಗ್ಚುಕ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯಿತು. ʻಲೆಹ್ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಬಾರದು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದುʼ ಎಂದು ಮುಚ್ಚಳಿಕೆ ಬರೆಸಿಕೊಂಡಿತು. ಅಪರಾಧ ಹಿನ್ನೆಲೆ ಇರುವವರು ಮಾತ್ರ ಇಂಥ ಮುಚ್ಚಳಿಕೆ ಬರೆದುಕೊಡುತ್ತಾರೆ. ಪ್ರತಿಭಟನೆ ಹಾಗೂ ಭಿನ್ನಾಭಿಪ್ರಾಯಕ್ಕೆ ಪ್ರತಿಕ್ರಿಯಿಸುವ ಹೊಸ ವಿಧಾನ ಇದಾಗಿದೆ.
ಆನಂತರ, ದೆಹಲಿಯ ಜಂತರ್ ಮಂತರ್‌ನಲ್ಲಿ ಫೆಬ್ರವರಿ 2023ರಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ʻಭಾರತ ಸರ್ಕಾರದಿಂದ ಪ್ರತಿಕ್ರಿಯೆ ಬರುತ್ತದೆ ಎಂದುಕೊಂಡಿ ದ್ದೆವು. ಆದರೆ, ಯಾರೂ ನಮ್ಮನ್ನು ಸಂಪರ್ಕಿಸಿಲ್ಲʼ ಎಂದಿದ್ದರು. ಸ್ಥಳೀಯ ಉದ್ಯೋಗ ಮತ್ತು ಭೂಮಿ-ಸಂಸ್ಕೃತಿಯ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ಹೇಳಿತು.
ಆರಂಭದಲ್ಲಿ 21 ದಿನ ನಿರಶನ ಮಾಡಲು ನಿರ್ಧರಿಸಿದ್ದರೂ, ಅದು 66 ದಿನ ಮುಂದುವರಿಯಿತು. ಬಳಿಕ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಾನತುಗೊಂಡಿತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಳವಳಿಯನ್ನು ಪುನಾರಂಭಿಸಲಾಗುವುದು ಎಂದು ಹೇಳಿದ್ದರು. ʻನೀರ್ಗಲ್ಲು ನದಿಗಳು ಕರಗುತ್ತಿದ್ದು, ಸರೋವರ-ಜಲಮೂಲಗಳು ವಿಸ್ತರಣೆ ಆಗುತ್ತಿವೆ. ಈ ಸಂಬಂಧ ಕಾಳಜಿ ವಹಿಸಿʼ ಎಂದು ಪ್ರಧಾನಿಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಇಲ್ಲಿ ಉಗ್ರವಾದದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಎಚ್ಚರಿಸಿದ್ದರು. ಅವರ ಸಂದೇಶ ʻಆಲ್ ಈಸ್ ನಾಟ್ ವೆಲ್ʼ ಚಳವಳಿಗೆ ಕಾರಣವಾಯಿತು.
ಪ್ರತಿಭಟನೆಯಿಂದ ಎಚ್ಚೆತ್ತ ಸರ್ಕಾರ, ಲಡಾಖಿನ ಲೆಫ್ಟಿನೆಂಟ್ ಜನರಲ್ ಆರ್.ಕೆ. ಮಾಥುರ್ ಅವರನ್ನು ವರ್ಗಾಯಿಸಿ, ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ(83) ಅವರನ್ನು ನೇಮಿಸಿತು. ಸೇನೆಯಲ್ಲಿ ಸೇವೆ ಸಲ್ಲಿಸಿದವರಾದ್ದರಿಂದ, ಅವರಿಗೆ ಲಡಾಖಿನ ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದು ಜನ ಭಾವಿಸಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯದ ಕೈ ತಿರುಚುವಿಕೆಯಿಂದ ಹೆಚ್ಚೇನೂ ಬದಲಾವಣೆ ಆಗಲಿಲ್ಲ.
ಲಡಾಖಿನಲ್ಲಿ ಪ್ರಜಾಪ್ರಭುತ್ವವಿಲ್ಲ; ಜನಪ್ರತಿನಿಧಿಗಳಿಲ್ಲದೆ ಇರುವುದರಿಂದ ಜನರು ಅಧಿಕಾರಿಗಳ ಕಪಿಮುಷ್ಟಿಗೆ ಸಿಲುಕಿದ್ದಾರೆ. ಸೇನೆಯ ದೃಷ್ಟಿಯಿಂದ ಲಡಾಖ್ ಬಹಳ ಮುಖ್ಯವಾದುದು; ಒಂದೆಡೆ ಚೀನಾ, ಇನ್ನೊಂದೆಡೆ ಪಾಕಿಸ್ತಾನ ಇದೆ. ಸೋನಂ ವಾಂಗ್ಚುಕ್ ಪ್ರಕಾರ, ʻಲಡಾಖಿಗೆ ಕಾರ್ಖಾನೆಗಳ ಅಗತ್ಯವಿಲ್ಲ. ಇಲ್ಲಿ ನೀರ್ಗಲ್ಲುಗಳು ಬಹಳ ವೇಗವಾಗಿ ಕರಗುತ್ತಿವೆ. ಕಾಶ್ಮೀರ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ, ಹೆದ್ದಾರಿ ಪಕ್ಕದ 17 ನೀರ್ಗಲ್ಲು ನದಿಗಳು ವೇಗವಾಗಿ ಕರಗಿಹೋಗಿವೆ. ನೀರ್ಗಲ್ಲು ನದಿ, ಪರ್ವತ, ಭೂಮಿ ಹಾಗೂ ಸ್ಥಳೀಯರ ರಕ್ಷಣೆಯಲ್ಲದೆ, ಲಡಾಖನ್ನು 6ನೇ ಪರಿಶಿಷ್ಟಕ್ಕೆ ಸೇರಿಸಬೇಕು; ಸ್ಥಳೀಯರು ಅಭಿವೃದ್ಧಿ ಮೇಲೆ ನಿಯಂತ್ರಣ ಸಾಧಿಸಲು ಸ್ವಾಯತ್ತೆಯನ್ನು ಖಾತ್ರಿಪಡಿಸಬೇಕು ಎನ್ನುವುದು ನಮ್ಮ ಬೇಡಿಕೆ. ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಭಾರಿ ಕುಸಿತ ಆಗಿದೆ. 5 ಚದರ ಕಿಮೀ ಪರಿಸರ ಸೂಕ್ಷ್ಮ ಪ್ರದೇಶಕ್ಕೆ 5 ತಿಂಗಳಲ್ಲಿ 6 ಲಕ್ಷ ಪ್ರವಾಸಿಗಳು ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮದ ಕಥೆ ಇದಾದರೆ, ಗಣಿಗಾರಿಕೆ ಮತ್ತು ಉದ್ಯಮಗಳು ಅದರ ಮೇಲೆ ಮಾಡುವ ಆಘಾತವನ್ನು ಊಹಿಸಿಕೊಳ್ಳಿʼ ಎಂದು ಹೇಳಿದ್ದರು. ಇಡೀ ಹಿಮಾಲಯ ಶ್ರೇಣಿ ಹವಾಮಾನ ಬದಲಾವಣೆಯಿಂದ ಪರಿಣಾಮಕ್ಕೀಡಾಗಿದೆ.
ದೀರ್ಘ ಕಾಲದ ಬೇಡಿಕೆ: ಲಡಾಖಿಗಳು ಕೇಂದ್ರಾಡಳಿತ ಪ್ರದೇಶ ಸ್ಥಾನಮಾನಕ್ಕಾಗಿ ಬಹಳ ಕಾಲದಿಂದ ಕಾಯ್ದಿದ್ದರು. 2019ರಲ್ಲಿ ಕೇಂದ್ರ ಸರ್ಕಾರ ಈ ಸ್ಥಾನಮಾನ ನೀಡಿದಾಗ, ಸಂಭ್ರಮದ ಅಲೆ ಎದ್ದಿತು. ಆದರೆ, ಈ ಉಬ್ಬರ ಬಹಳ ದಿನ ಉಳಿಯಲಿಲ್ಲ. 1000 ವರ್ಷ ಸ್ವತಂತ್ರ ರಾಜ್ಯವಾಗಿದ್ದ ಲಡಾಖ್, ಬಳಿಕ ಜಮ್ಮು-ಕಾಶ್ಮೀರದೊಂದಿಗೆ ಸೇರಿಕೊಂಡಿತು. ಈ ನೆನಪು ಲಡಾಖಿಗಳ ಮನಸ್ಸಿನಿಂದ ಇನ್ನೂ ಅಳಿಸಿಲ್ಲ. ತಾವು ದಿಲ್ಲಿಯಿಂದ ಆಳಿಸಿಕೊಳ್ಳುತ್ತಿದ್ದೇವೆ ಎಂಬ ನೋವು ಅವರನ್ನು ಕಾಡುತ್ತಿದೆ. ಬಿಜೆಪಿ ಸರ್ಕಾರವು ವಿಶೇಷ ಸಾಂವಿಧಾನಿಕ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಿತು. ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ(ಎಎಚ್‌ಡಿಸಿ) ಚುನಾವಣೆಗೆ ಮುನ್ನ ಆರನೇ ಪರಿಶಿಷ್ಟದ ಆಶ್ವಾಸನೆ ನೀಡಲಾಯಿತು(ಈಶಾನ್ಯದ ರಾಜ್ಯಗಳಿಗೆ ನೀಡಿರುವಂಥದ್ದು). ಈ ಬೇಡಿಕೆ ಇಂದಿಗೂ ಈಡೇರಿಲ್ಲ. ಜಮ್ಮು-ಕಾಶ್ಮೀರದಿಂದ ಲಡಾಖ್‌ನ್ನು ಬೇರ್ಪಡಿಸಿದ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಇದೆ. ಹಿಂದೆ ವಿಧಿ 370ರ ಜಾರಿಯನ್ನು ಬೆಂಬಲಿಸಿದ್ದವರು ಈಗ, ಈಮೊದಲು ನಮ್ಮ ಪರಿಸ್ಥಿತಿ ಉತ್ತಮವಾಗಿತ್ತು ಎನ್ನುತ್ತಿದ್ದಾರೆ.
ಕೈಗಾರಿಕೆಗಳ ಹೆಚ್ಚಳ: ಜಮ್ಮು-ಕಾಶ್ಮೀರದ ಭಾಗವಾಗಿದ್ದಾಗ ಲಡಾಖಿಗೆ 370ನೇ ವಿಧಿಯಡಿ ರಕ್ಷಣೆ ಮತ್ತು ವಿಶೇಷ ಸ್ಥಾನಮಾನ ಇತ್ತು. ಬೇರೆ ರಾಜ್ಯದವರಿಗೆ ಭೂಮಿ ಖರೀದಿ ಹಾಗೂ ಉದ್ಯಮ ಆರಂಭಿಸಲು ಅವಕಾಶ ಇರಲಿಲ್ಲ. ಆಗಸ್ಟ್ 5, 2019ರಂದು ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವಾಗಿ ಮತ್ತು ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವಾಗಿ ವಿಭಜಿಸಲಾಯಿತು. ಲಡಾಖಿನಲ್ಲಿ ಹೊರಗಿನವರಿಗೆ ಭೂಮಿ ಖರೀದಿ-ಉದ್ಯಮ ಆರಂಭಿಸಲು ಅವಕಾಶ ನೀಡಲಾಯಿತು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆ(ಎಂಎಸ್‌ಎಂಇ) ತಯಾರಿಸಿದ ವರದಿ, ʼಲೆಹ್ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಿತಿಗತಿʼ ಪ್ರಕಾರ, ಲಡಾಖಿನಲ್ಲಿ ಕಲ್ಲು ಮತ್ತು ಖನಿಜ ಗಣಿಗಾರಿಕೆಗೆ ವಿಫುಲ ಅವಕಾಶವಿದೆ. ಚಿನ್ನ, ಜಿಪ್ಸಂ, ಆರ್ಸೆನಿಕ್, ಸುಣ್ಣದ ಕಲ್ಲು, ನಿಕ್ಕಲ್, ಯುರೇನಿಯಂ ಮತ್ತಿತರ ಖನಿಜಗಳ ನಿಕ್ಷೇಪ ಇದೆ. ಪ್ರಸ್ತುತ ಕರಕುಶಲ ವಸ್ತು ಹಾಗೂ ಜವಳಿ, ಸಣ್ಣ ಕೈಗಾರಿಕೆಗಳು ಮಾತ್ರ ಇದ್ದು, ಉಳಿದ ಸೇವಾ ವಲಯದ ಅಭಿವೃದ್ಧಿಗೆ ಅವಕಾಶವಿದೆ.ʼ ಖನಿಜ ನಿಕ್ಷೇಪ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸರ್ವೇಕ್ಷಣೆ ನಡೆಸಿದೆ.
ಆಗಸ್ಟ್ 2019ರ ಬಳಿಕ 1006 ಕೈಗಾರಿಕೆಗಳು ಆರಂಭವಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಲೋಕಸಭೆ-ರಾಜ್ಯಸಭೆಗೆ ಮಾಹಿತಿ ನೀಡಿತ್ತು(ಏಪ್ರಿಲ್ 15, 2023). ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿದ ಕಾರ್ಗಿಲ್ ಹಾಗೂ ಲೆಹ್ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಕಾರ್ಯಸಾಧ್ಯತೆ ವರದಿ ಪ್ರಕಾರ, ʻವಿದ್ಯುತ್, ಕುಶಲ ಕಾರ್ಮಿಕರು, ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ, ಕಚ್ಚಾ ವಸ್ತು ಲಭ್ಯತೆ-ಪೂರೈಕೆಯಲ್ಲಿ ಕೊರತೆಯಿದೆ ಹಾಗೂ ಸಾಗಣೆಗೆ ಹೆಚ್ಚು ವೆಚ್ಚ ತಗಲುತ್ತದೆʼ.
ಪ್ರದೇಶವೊಂದನ್ನು ಸಂವಿಧಾನದ ವಿಧಿ 244ರಡಿ 5 ಅಥವಾ 6ನೇ ಪರಿಶಿಷ್ಟಕ್ಕೆ ಸೇರಿಸಿದರೆ, ಅದು ಸ್ವಾಯತ್ತವಾಗುತ್ತದೆ. ಸ್ವಾಯತ್ತ ಜಿಲ್ಲಾ ಮಂಡಳಿಗೆ ಕಾನೂನು ರಚನೆ, ಯಾರಿಗೆ ಜಮೀನು ನೀಡಬೇಕು/ನೀಡಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ಸಿಗುತ್ತದೆ. ಈ ಮಂಡಳಿಯಲ್ಲಿ ಸರ್ಕಾರ ನೇಮಿಸಿದವರೂ ಇರುತ್ತಾರೆ. ʻಲಡಾಖಿನಲ್ಲಿ ವಾರ್ಷಿಕ ಮಳೆ ಪ್ರಮಾಣ 4 ಇಂಚಿಗಿಂತ ಕಡಿಮೆ ಇದೆ. ಹಿಮನದಿಗಳೇ ಕುಡಿಯುವ ನೀರಿನ ಆಧಾರ. ಸ್ಥಳೀಯರು ದಿನಕ್ಕೆ 5 ಲೀಟರಿಗಿಂತ ಕಡಿಮೆ ನೀರು ಬಳಸುತ್ತಾರೆ. ಇಂಥ ಪ್ರದೇಶದಲ್ಲಿ ಕೈಗಾರಿಕೆ-ಕಾರ್ಮಿಕರಿಗೆ ನೀರು ಪೂರೈಸುವುದು ಹೇಗೆ?,ʼ ಎಂದು ಸೋನಂ ಪ್ರಶ್ನಿಸುತ್ತಾರೆ.
ಲಡಾಖ್ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳು, ಶಸ್ತ್ರಸಜ್ಜಿತ ಯೋಧರ ಉಪಸ್ಥಿತಿ ಮತ್ತು ಪ್ರವಾಸೋದ್ಯಮದ ಪದಾಘಾತದಿಂದ ಬಳಲುತ್ತಿದೆ. ಸ್ವಾಭಾವಿಕ ಸಂಪನ್ಮೂಲಗಳ ಗಣಿಗಾರಿಕೆ, ಜಲ-ಸೌರ ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ಹೆಚ್ಚಿದೆ. ಹೊಸ ವಿಮಾನನಿಲ್ದಾಣ ಹಾಗೂ ಈವರೆಗೆ ಸ್ಪರ್ಶಿಸದ ಝನಾಸ್ಕಾರ್ ಪ್ರಾಂತ್ಯದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದೆ. ಲಡಾಖ್ ಈಗಾಗಲೇ ಭೂಕುಸಿತ, ಸವಕಳಿ, ಘನ ತ್ಯಾಜ್ಯ ಸಂಗ್ರಹ, ವನ್ಯಜೀವಿಗಳಿಗೆ ಸಂಕಷ್ಟ ಮತ್ತು ಗೋಮಾಳದಂಥ ಸಾರ್ವಜನಿಕ ಆಸ್ತಿಗಳು ಪರಭಾರೆಯಿಂದ ಹೈರಾಣಾಗಿದೆ. ಲಡಾಖನ್ನು ʻಇಂಗಾಲ ತಟಸ್ಥʼ ಗೊಳಿಸುವ ನೆಪದಲ್ಲಿ 13 ಗಿಗಾವ್ಯಾಟ್ ಸಾಮರ್ಥ್ಯದ ಭಾರಿ ಸೌರ ಯೋಜನೆಗೆ 2023ರ ಆಯವ್ಯಯದಲ್ಲಿ 20,000 ಕೋಟಿ ರೂ. ನೀಡಲಾಗಿದೆ. ಲಡಾಖಿನಲ್ಲಿ 1995ರಿಂದಲೇ ಎಎಚ್‌ಡಿಸಿ ಇತ್ತು. ಆದರೆ, ಪುಣೆಯ ಕಲ್ಪವೃಕ್ಷ್‌ನ 2019ರ ಅಧ್ಯಯನದ ಪ್ರಕಾರ, ಹೆಚ್ಚಿನ ನಿರ್ಧಾರಗಳು ಶ್ರೀನಗರ ಹಾಗೂ ದೆಹಲಿಯಲ್ಲಿ ಆಗುತ್ತಿದ್ದವು.
ದಿಲ್ಲಿ ಚಲೋ ಆರಂಭ: ವಾಂಗ್ಚುಕ್ ನೇತೃತ್ವದ ಪಾದಯಾತ್ರೆ ಸೆಪ್ಟೆಂಬರ್ 1 ರಂದು ಎನ್‌ಡಿಎಸ್ ಸ್ಮಾರಕ ಕ್ರೀಡಾ ಸಂಕೀರ್ಣದಿಂದ ಪ್ರಾರಂಭವಾಗಿದೆ. ʻಗೃಹ ಸಚಿವ ಅಮಿತ್ ಶಾ ಅವರು ನಮ್ಮ ಬೇಡಿಕೆ ಗಳನ್ನು ತಿರಸ್ಕರಿಸಿದ್ದರಿಂದ ಮಾತುಕತೆ ವಿಫಲವಾಯಿತು. ಆದರೆ, ಮಾತುಕತೆ ಪುನಾರಂಭಿಸಲು ಕೇಂದ್ರ ಆಸಕ್ತಿ ಹೊಂದಿದೆ ಎಂದು ನಮಗೆ ನಂತರ ತಿಳಿದುಬಂತು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತು. ನಮ್ಮ ಬೇಡಿಕೆಗಳನ್ನು ಪೂರೈಸಲು ಸಮಯ ಬೇಕಾಗುತ್ತದೆ ಎಂದು ಗೊತ್ತಿದೆ. ಆದರೆ, ಅದನ್ನು ಸಾಧಿಸಲು ಈ ಚಳವಳಿಯನ್ನು ಜೀವಂತವಾಗಿಡಬೇಕಿದೆ. ಲಡಾಖ್‌ನ ಭವಿಷ್ಯವನ್ನು ಭದ್ರಪಡಿಸಲು ಸುದೀರ್ಘ ಮತ್ತು ಸಮರ್ಪಿತ ಹೋರಾಟಕ್ಕೆ ಬದ್ಧವಾಗಿದ್ದೇವೆ ಎಂಬುದನ್ನು ಸಹ ಲಡಾಖಿಗಳಿಗೆ ತೋರಿಸಿಕೊಡಲು ದಿಲ್ಲಿ ಚಲೋ ಹಮ್ಮಿಕೊಂಡಿದ್ದೇವೆ,ʼ ಎಂದು ಅವರು ಹೇಳಿದರು. ವಾಂಗ್ಚುಕ್ ನಾಲ್ಕು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ 28 ದಿನಗಳ ನಿರಶನವನ್ನು ಸದ್ಯ ಮುಂದೆ ಹಾಕಿದ್ದಾರೆ.
ಪ್ರತಿ ದಿನ 25 ಕಿ.ಮೀ ನಡೆಯುವ ಗುರಿ ಹಾಕಿಕೊಂಡಿದ್ದು, ಬಿಜೆಪಿ ಹೊರತುಪಡಿಸಿ ಲಡಾಖ್‌ನ ಎಲ್ಲಾ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಚಳವಳಿಯನ್ನು ಬೆಂಬಲಿಸಿವೆ.
ಮುಂದಣ ದಾರಿ ಅಸ್ಪಷ್ಟ: ಈಶಾನ್ಯ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶದ ಹಲವು ಜಿಲ್ಲೆಗಳಿಗೆ 6ನೇ ಪರಿಶಿಷ್ಟದಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಪ್ರದೇಶವೊಂದರ ಜನಸಂಖ್ಯೆಯ ಶೇ.50 ಕ್ಕಿಂತ ಹೆಚ್ಚು ಮಂದಿ ಪರಿಶಿಷ್ಟ ಪಂಗಡ-ಸಮುದಾಯಕ್ಕೆ ಸೇರಿದರೆ, ಆ ಪ್ರದೇಶವನ್ನು 6ನೇ ಪರಿಶಿಷ್ಟಕ್ಕೆ ಸೇರಿಸಬಹುದು. ಲಡಾಖಿನಲ್ಲಿ ಪರಿಶಿಷ್ಟ ಪಂಗಡ-ಸಮುದಾಯಗಳ ಪ್ರಮಾಣ ಶೇ.79 ಇದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಉದ್ಯಮ ಇಲ್ಲವೇ ವಾಣಿಜ್ಯಿಕ ಪ್ರವಾಸೋದ್ಯಮ ಸೂಕ್ತವಲ್ಲ. ಭೂತಾನಿನಲ್ಲಿ ಇರುವಂತೆ ʼನಿಯಂತ್ರಿಕ ಪ್ರವಾಸೋದ್ಯಮʼ ಇರಬೇಕು ಎನ್ನುವುದು ಸ್ಥಳೀಯರ ಆಗ್ರಹ. ಭೂತಾನ್ ಅಂತಾರಾಷ್ಟ್ರೀಯ ಪ್ರವಾಸಿಗಳಿಗೆ ದಿನಕ್ಕೆ 200 ಡಾಲರ್ ಹಾಗೂ ಭಾರತೀಯರಿಗೆ 1200 ರೂ. ʻಸುಸ್ಥಿರ ಅಭಿವೃದ್ಧಿ ಶುಲ್ಕʼ ವಿಧಿಸುತ್ತದೆ. ಇದನ್ನು ಲಡಾಖಿನಲ್ಲೂ ಜಾರಿಗೊಳಿಸಬೇಕಿದೆ. 2005ರಲ್ಲಿ ನಾಗರಿಕ ಸಮಾಜದ ಸಂಘಟನೆಗಳು ಸೇರಿ ʻಲಡಾಖ್ 2025ʼ ಮುನ್ನೋಟ ದಾಖಲೆಯನ್ನು ಸಿದ್ಧಪಡಿಸಿದ್ದವು. ದುರದೃಷ್ಟವಶಾತ್, ರಾಜಕೀಯ ಮತ್ತು ಆರ್ಥಿಕ ಅಡೆತಡೆಗಳಿಂದಾಗಿ ಅದು ಕಡತದಲ್ಲೇ ಉಳಿದು ಕೊಂಡಿತು. ಈಗ ಕೇಂದ್ರಾಡಳಿತ ಕನ್ಸಲ್ಟೆನ್ಸಿ ಗುಂಪುಗಳಿಗೆ ಅಪಾರ ಹಣ ತೆತ್ತು, ಇಂಥ ದಾಖಲೆಗಳನ್ನು ರೂಪಿಸುತ್ತಿದೆ!
ಲಡಾಖಿನಲ್ಲಿ ಕೃಷಿ ಸಂಪೂರ್ಣ ಸಾವಯವ ಆಗಿರಬೇಕೆಂಬ ಎಎಚ್‌ಡಿಸಿ ನಿರ್ಧಾರಕ್ಕೆ ಕೇಂದ್ರ ಬೆಂಬಲ ನೀಡಬೇಕು. ಸೇನೆ ಸ್ಥಳೀಯರು ಬೆಳೆದ/ತಯಾರಿಸಿದ ಉತ್ಪನ್ನ/ಸರಕುಗಳನ್ನು ಖರೀದಿಸುವಂತೆ ಮತ್ತು ಅರಣ್ಯ ಹಕ್ಕು ಕಾಯಿದೆ ಬಳಸಿಕೊಂಡು ಗೋಮಾಳವೂ ಸೇರಿದಂತೆ ಸಂಪನ್ಮೂಲಗಳ ಮೇಲೆ ಸ್ಥಳೀಯರ ಹಕ್ಕು ಉಳಿಸಲು ಕೇಂದ್ರ ನೆರವಾಗಬೇಕು. ಸಮುದಾಯ ನಿರ್ವಹಣೆಯ, ಪಾರಿಸರಿಕ ವಾಗಿ ಸೂಕ್ತವಾದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು.
ಲಡಾಖಿನ ನಾಗರಿಕ ಸಮಾಜ ಹಾಗೂ ಕೆಲವು ಸರ್ಕಾರಿ ಏಜೆನ್ಸಿಗಳು ಜೀವನಾಧಾರಕ್ಕೆ ಅಗತ್ಯವಾದ ವಿಕೇಂದ್ರೀಕೃತ ಸೌರ ವಿದ್ಯುತ್ ಉತ್ಪಾದನೆ, ಆಹಾರ-ಸಾಂಸ್ಕೃತಿಕ ವೈವಿಧ್ಯದ ರಕ್ಷಣೆ, ಉದ್ಯಮ ಶೀಲತೆಗೆ ಸಂಬಂಧಿಸಿದ ಉಪಕ್ರಮಗಳನ್ನು ಆರಂಭಿಸಿವೆ. ಆದರೆ, ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳ ಮನಸ್ಥಿತಿ ಬದಲಾಗದಿದ್ದರೆ, ಯಾವುದೇ ಪ್ರಯೋಜನ ಆಗುವುದಿಲ್ಲ. ಆದರೆ, ಕೇಂದ್ರ ಸರ್ಕಾರ ಲಡಾಖಿಗೆ ರಾಜ್ಯದ ಸ್ಥಾನಮಾನ ಹಾಗೂ ಕೇಂದ್ರಾಡಳಿತ ಪ್ರದೇಶದ ಸಾಂವಿಧಾನಿಕ ರಕ್ಷಣೆ ನೀಡಲು ಸಿದ್ಧವಿಲ್ಲ.
ʻಯಶಸ್ಸಿಗೋಸ್ಕರ ಓದಬೇಡ; ಅರ್ಹತೆ ಗಳಿಸಲು ಓದು(ಕಾಮ್‌ಯಾಬ್ ಹೋನೆ ಕೆ ಲಿಯೆ ನಹಿ, ಕಾಬಿಲ್ ಹೋನೆ ಕೆ ಲಿಯೆ ಪಡೋ)ʼ ಎನ್ನುವುದು ʻತ್ರೀ ಈಡಿಯಟ್ಸ್ʼ ಸಿನೆಮಾದ ಮುಖ್ಯ ಸಂಭಾ ಷಣೆಯಲ್ಲೊಂದು. ಅರ್ಹತೆ ಎನ್ನುವುದು ಅವಹೇಳನದ ವಸ್ತುವಾಗಿರುವ ಕಾಲಘಟ್ಟವಿದು. ಆದ್ದರಿಂದಲೇ, ವಾಂಗ್ಚುಕ್ ಹೇಳುವ ಪರಿಸರ ಸೂಕ್ಷ್ಮಗಳು ಆಳುವ ಪ್ರಭುಗಳಿಗೆ ಅರ್ಥವಾಗುವುದಿಲ್ಲ. ಅವರಿಗೆ, ಅರ್ಥವಾಗುವುದು-ಅಧಿಕಾರ ಮತ್ತು ಕಾಂಚಾಣ ಮಾತ್ರ. ಆದ್ದರಿಂದಲೇ ಭೂಕುಸಿತದಿಂದ ನೆಲಸಮವಾಗಿರುವ ವಯಮಾಡಿನಲ್ಲಿ ಸುರಂಗ ಮಾರ್ಗಕ್ಕೆ ಸಿದ್ಧತೆ ನಡೆಯುತ್ತದೆ; ಎತ್ತಿನಹೊಳೆ ಯೋಜನೆಯ ಮೊದಲ ಹಂತ ಅಂತ್ಯಗೊಳ್ಳುತ್ತದೆ ಹಾಗೂ ಶರಾವತಿಯ ನೀರು ಮೇಲೆತ್ತಿ ಬೆಂಗಳೂರಿಗೆ ತರುವ ಯೋಜನೆಯ ಕಡತ ಮತ್ತೆ ಮತ್ತೆ ಮೇಲೆ ಬರುತ್ತದೆ.
-ಋತ