ಅಹಂಕಾರವಿಲ್ಲದ ಅಸಲಿ ಕಾಳಜಿಯ ದೀದಿ

                                                                                                                                                                                               ಸಂಘಮಿತ್ರಾ ದೇಸಾಯಿ

 

 

ಸಂತೋಷ ಕೌಲಗಿ

ಜನಪದ ಸೇವಾ ಟ್ರಸ್ಟ್

ಮೇಲುಕೋಟೆ-571431

ಸಂಘಮಿತ್ರಾ ದೇಸಾಯಿ ಅವರಿಗೆ ಈಗ 72 ವರ್ಷ. ವೃದ್ಧಾಪ್ಯ ಕಾಡುತ್ತಿದೆ. ದೇಹ ಸುಸ್ತಾದಂತೆ ತೋರುತ್ತದೆ. ಆದರೆ, ಒಳಗಿನ ಚೈತನ್ಯ ತನ್ನ ಯೌವನವನ್ನು ಕಳೆದುಕೊಂಡಿಲ್ಲ. ತೆಳ್ಳಗಿನ, ಗೌರ ವರ್ಣದ, ಬಿಳಿ ಕೂದಲಿನ ಸಂಘಮಿತ್ರ ದೇಸಾಯಿ ಅವರನ್ನು ಎಲ್ಲರೂ ಪ್ರೀತಿಯಿಂದ ಕರೆಯುವುದು “ದೀದಿ’ ಎಂದು. ನೀವು ಅವರೊಂದಿಗೆ ಕೆಲವು ತಾಸು ಇದ್ದರೆ, ಅವರು ತೋರಿಸುವ ಕಾಳಜಿ ಮತ್ತು ಪ್ರೀತಿಯಿಂದ ನೀವೇ ಅವರನ್ನು ಸಹಜವಾಗಿ ದೀದಿ ಎಂದು ಕರೆಯಲು ಆರಂಭಿಸುತ್ತೀರಿ.

ಸಂಘಮಿತ್ರ ದೇಸಾಯಿ ದೇಶ ಹೆಮ್ಮೆ ಪಡಬಹುದಾದ ಕುಟುಂಬದಿಂದ ಬಂದವರು. ಮಹಾತ್ಮ ಗಾಂಧಿಯವರ ಆಪ್ತ ಕಾರ್ಯದರ್ಶಿ ಆಗಿದ್ದ ಮಹದೇವ ದೇಸಾಯಿ ಅವರ ಪುತ್ರ, ದಿ. ನಾರಾಯಣ ದೇಸಾಯಿ ಅವರ ಮಗಳು. ಮಹದೇವ ದೇಸಾಯಿ 25 ವರ್ಷಗಳ ಕಾಲ ಮಹಾತ್ಮ ಗಾಂಧಿಯವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದರು. ಅಂಥವರ ಮೊಮ್ಮಗಳಾದ ಸಂಘಮಿತ್ರಾ, ಒಂದು ದೊಡ್ಡ ಪರಂಪರೆಯ ರಾಯಭಾರಿ. ಸತ್ಯ, ಅಹಿಂಸೆ ಮತ್ತು ಹೋರಾಟ ಅವರ ಬದುಕಿನ ಭಾಗ.  ಕೋಲ್ಕತಾ ವಿಶ್ವವಿದ್ಯಾಲಯದಿಂದ ವೈದ್ಯ ಪದವಿ ಪಡೆದ  ಸಂಘಮಿತ್ರಾ, ಹಲವು ವರ್ಷ ಬನಾರಸ್‌ನಲ್ಲಿ ವೈದ್ಯೆಯಾಗಿ ಕೆಲಸ ಮಾಡಿದರು. ಅವರ ಪತಿ ಸುರೇನ್ ಭೌತಶಾಸ್ತçದ ವಿಜ್ಞಾನಿ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ. ಆದರೆ, ಅವರಿಬ್ಬರಿಗೂ ತಮ್ಮ ಬದುಕಿನ ಹುಡುಕಾಟ ಬೇರೆ, ಮಾಡಬೇಕಾದ ಕೆಲಸ ಬೇರೆ ಇದೆ ಎನ್ನಿಸಿತು. ಒಂದು ದಿನ ತಮ್ಮ ಉದ್ಯೋಗವನ್ನು ಬಿಟ್ಟು ನಾರಾಯಣ ದೇಸಾಯಿ ಅವರು ಗುಜರಾತಿನ ವೇಢಚಿಯಲ್ಲಿ ಪ್ರಾರಂಭಿಸಿದ್ದ ಸಂಪೂರ್ಣ ಕ್ರಾಂತಿ ವಿದ್ಯಾಲಯ’ಕ್ಕೆ ಬಂದು ಇಳಿದರು. ಅದು 1980. ಅಲ್ಲಿಂದ ಇಬ್ಬರದೂ ಸತತ ಹೋರಾಟದ ಬದುಕು.

ಅಣು ವಿದ್ಯುತ್ ಸ್ಥಾವರಗಳ ಅಪಾಯಗಳನ್ನು ಬಲ್ಲವರಾಗಿದ್ದ ಸುರೇನ್, ರಾಜಸ್ಥಾನದಲ್ಲಿ ನಿರ್ಮಾಣಗೊಂಡಿದ್ದ ಅಣು ವಿದ್ಯುತ್ ಸ್ಥಾವರದ ಸುತ್ತಲಿನ ಜನರ ಆರೋಗ್ಯದ ಸ್ಥಿತಿಗತಿಯ ಅಧ್ಯಯನ ಪ್ರಾರಂಭಿಸಿದರು. ಅವರ ಅಧ್ಯಯನ ಎಷ್ಟೊಂದು ವೈಜ್ಞಾನಿಕವಾಗಿತ್ತೆಂದರೆ, ಅದನ್ನು ಯಾವ ವಿಜ್ಞಾನಿಯೂ ಅಲ್ಲಗಳೆಯಲು ಸಾಧ್ಯವಾಗಲಿಲ್ಲ. ಈ ಎಲ್ಲ ಅಧ್ಯಯನಗಳಲ್ಲಿ ಸಂಘಮಿತ್ರಾ, ಸುರೇನ್ ಜೊತೆ ಕೆಲಸ ಮಾಡಿದರು. ಈ ದಂಪತಿ ಅಣು ಸ್ಥಾವರದ ಅಪಾಯಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾದರು. ದೇಶದಲ್ಲಿ ನಡೆಯುತ್ತಿದ್ದ ಅಣು ಶಕ್ತಿ ವಿರೋಧಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಾರ್ಗದರ್ಶಕರಾದರು. ಜನಸಾಮಾನ್ಯರಿಗೆ ಅಣುಶಕ್ತಿಯ ಅಪಾಯ ಕುರಿತು ಮಾಹಿತಿ ಮುಟ್ಟಿಸಲು ಅಣುಮುಕ್ತಿ ಎಂಬ ಪತ್ರಿಕೆಯನ್ನು ಹಲವಾರು ವರ್ಷ ನಡೆಸಿದರು.

ಜನ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋದಾಗ, ಕರ‍್ಯಕರ್ತರ ತಂಡವನ್ನು ಕಟ್ಟಿಕೊಂಡು ಪರಿಹಾರ ಕೆಲಸ ಮಾಡಿದರು.  ಗುಜರಾತ್‌ನ ಭೂಕಂಪದಿAದ ಕಛ್ ಪ್ರಾಂತ್ಯ ಸಂಪೂರ್ಣ ಮಣ್ಣುಪಾಲು ಆಗಿಹೋ ದಾಗ, ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳಿಗೆ ಸರಳವಾದ ಮನೆಗಳನ್ನು ಕಟ್ಟಿಕೊಟ್ಟರು. ಖಾದಿಯ ಮೂಲಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದರು. ಖಾದಿ ಮೇಲೆ ಪ್ರೀತಿ ಮತ್ತು ಗೌರವ ಅವರಿಗೆ ರಕ್ತಗತವಾಗಿ ಬಂದಿತ್ತು. ಸಂಪೂರ್ಣ ಕ್ರಾಂತಿ ವಿದ್ಯಾಲಯದಲ್ಲಿ ಖಾದಿ ವಸ್ತ್ರ ತಯಾರಿಕಾ ತರಬೇತಿ ಹಾಗೂ ಖಾದಿ ನೂಲಿಗೆ ನೈಸರ್ಗಿಕ  ಬಣ್ಣವನ್ನು  ಹಾಕುವ ಕಲೆಯನ್ನು ಕಲಿಸತೊಡಗಿದರು. ರಾಸಾಯನಿಕ ಬಣ್ಣಗಳ ಅಪಾಯ ಮತ್ತು ಪರಿಸರದ ಮೇಲಿನ ದುಷ್ಪರಿಣಾಮ ಕುರಿತು ಅರಿವು ಮೂಡಿಸಿದರು. ಯಾರಿಗೂ ಕೇಡು ಬಯಸದ, ಎಲ್ಲರನ್ನೂ ಪ್ರೀತಿಸುವ ಜೀವ ಅದು. ಅಹಂಕಾರವಿಲ್ಲದ ಅಸಲಿ ಕಾಳಜಿಯ ವ್ಯಕ್ತಿ ಹೇಗಿರುತ್ತಾರೆ ಎಂಬುದನ್ನು ಅರಿಯಲು ಮತ್ತು ಅದನ್ನು ಅನುಭವಿಸಲು ಸಂಘಮಿತ್ರಾ ದೇಸಾಯಿ ಅವರೊಂದಿಗೆ ನಾಲ್ಕು ದಿನ ಕಳೆಯಬೇಕು.

Journalist,Translator,avid bibliophile

Leave a Reply

Your email address will not be published. Required fields are marked *

Back To Top