ಈ ಬಾರಿ ದಸರಾಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ….

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಹಾವಳಿಯಿಂದ ಈ ಬಾರಿ ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಶಿಫಾರಸು ಮಾಡಿದೆ. ಅ.17ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೆ 200 ಜನ, ಅ.26ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ 300 ಜನರಿಗೆ ಪ್ರವೇಶ ನೀಡಬೇಕೆಂದು ನಿರ್ಧಾರಿಸಲಾಗಿದೆ. ಗಣ್ಯರು, ಸಿಬ್ಬಂದಿ, ಕಲಾವಿದರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಈ ಸಂಖ್ಯೆಯಲ್ಲಿ ಸೇರಿದ್ದಾರೆ. ವರ್ಚುಯಲ್ (ಆನ್‌ಲೈನ್) ಆಗಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ನೇತೃತ್ವದ ಮೂವರ ಸದಸ್ಯರ ಸಮಿತಿಯು ತನ್ನ ವರದಿಯಲ್ಲಿ ನಮೂದಿಸಿದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಅ.14ರ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರುವ ವರದಿ ನೀಡಬೇಕು ಎಂದು ತಿಳಿಸಲಾಗಿದೆ. ದಸರೆ ವೇಳೆ ದಿನ-ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇವಲ 50 ಮಂದಿಗೆ ಅವಕಾಶ ನೀಡಬೇಕು. ಸ್ಥಳೀಯ ಕಲಾವಿದರಿಗೆ ಮಾತ್ರ ಅವಕಾಶ ನೀಡಿ, ಕಾರ್ಯಕ್ರಮವನ್ನು 2ಗಂಟೆಗೆ ಸೀಮಿತಗೊಳಿಸಬೇಕು ಎಂದು ಹೇಳಿದೆ. ದಸರೆ ಆಚರಣೆ ಸಂದರ್ಭದಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿ ಅಂಬಾವಿಲಾಸ ಅರಮನೆ ಹಾಗೂ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಇತರ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು. ಸಮಿತಿ ಸದಸ್ಯ ಡಾ.ಲೋಕೇಶ್, ಸದಸ್ಯ ಕಾರ್ಯದರ್ಶಿ ಡಾ.ಮಹಮ್ಮದ್ ಷರೀಫ್ ಇದ್ದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top