ಎಐ ಶೃಂಗ, ನಿರುದ್ಯೋಗ ಮತ್ತು ಶೈಕ್ಷಣಿಕ ವ್ಯವಸ್ಥೆ

ದಿಲ್ಲಿಯಲ್ಲಿ ನಡೆದ ಎಐ ಶೃಂಗದಲ್ಲಿ ಅಮೆರಿಕ, ಇಂಗ್ಲೆಂಡ್‌, ಬ್ರೆಜಿಲ್‌, ಆಸ್ಟ್ರೇಲಿಯ, ಆಸ್ಟ್ರಿಯ, ಚೀನಾ, ಕೆನಡಾ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ 89 ರಾಷ್ಟ್ರಗಳು ಎಐ ಸಂಪನ್ಮೂಲಗಳ ಪ್ರಜಾಪ್ರಭುತ್ವೀಕರಣ, ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತು, ಸುರಕ್ಷಿತ ಮತ್ತು ನಂಬಿಕಾರ್ಹ ಎಐ, ಸಾಮಾಜಿಕ ಪ್ರವೇಶಾವಕಾಶ, ಮಾನವ ಸಂಪನ್ಮೂಲದ ಪುನಶ್ಚೇತನ ಇತ್ಯಾದಿ ಒಳಗೊಂಡ ಒಪ್ಪಂದಕ್ಕೆ ಸಹಿ ಹಾಕಿವೆ. ಜತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಬಹುಮುಖ್ಯ ಖನಿಜಗಳ ಕೇಂದ್ರೀಕರಣದ ವಿರುದ್ಧದ ಅಮೆರಿಕ ನೇತೃತ್ವದ ʻಪ್ಯಾಕ್ಸ್‌ ಸಿಲಿಕಾ ಇನಿಷಿಯೇಟಿವ್‌ʼ ಅನ್ನು ಭಾರತ ಸೇರಿದೆ. ಪ್ರಧಾನಿ ʻಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ; ಅದರ ನಾಯಕʼ ಎಂದು ಘೋಷಿಸಿದ್ದಾರೆ. ಆದರೆ, ಯುವ ಜನರ ನಿರುದ್ಯೋಗ ಸಮಸ್ಯೆ, ವಿಶ್ವವಿದ್ಯಾನಿಲಯಗಳ ಆರ್ಥಿಕ-ಬೌದ್ಧಿಕ ಪರಿಸ್ಥಿತಿ, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಮೂಲಸೌಲಭ್ಯಗಳ ಕೊರತೆ ಇತ್ಯಾದಿ ಬಗ್ಗೆ ಅವರು ಮಾತನ್ನಾಡಿಲ್ಲ.

ಶೃಂಗದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತ(ಐವೈಸಿ)ರು ಪ್ರತಿಭಟನೆ ನಡೆಸಿದ್ದು, ʻರಾಷ್ಟ್ರೀಯ ಕಾರ್ಯಕ್ರಮವನ್ನು ಕಾಂಗ್ರೆಸ್‌ ಕೊಳಕು ಮತ್ತು ನಾಚಿಕೆಗೇಡು ರಾಜಕೀಯಕ್ಕೆ ಬಳಸಿಕೊಂಡಿ ದೆʼ ಎಂದು ಪ್ರಧಾನಿ ಹರಿಹಾಯ್ದಿದ್ದಾರೆ. ಪ್ರತಿಭಟಿಸಿದ ಐವರನ್ನು ದಿಲ್ಲಿ ಹೈಕೋರ್ಟಿಗೆ ಹಾಜರುಪಡಿಸಿದಾಗ, ʻಪ್ರತಿಭಟನೆಯು ಸಾರ್ವಜನಿಕ ವ್ಯವಸ್ಥೆ ಮೇಲಿನ ಸ್ಪಷ್ಟ ದಾಳಿʼ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಕ್ಟೋಬರ್‌ 3-14, 2010ರಂದು ದಿಲ್ಲಿಯಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದಾಗ, ʻಘಟನೆಯಿಂದ ಅಂತಾರಾಷ್ಟ್ರೀಯ ಸಮುದಾಯದ ಎದುರು ದೇಶದ ಮಾನ ಹೋಗಿದೆʼ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಟೀಕಿಸಿರಲಿಲ್ಲ.

ಶೃಂಗದ ಉದ್ದೇಶಗಳೇನು?: ಎಐ ಕುರಿತ ಮೊದಲ ಸಭೆ 2023ರಲ್ಲಿ ಇಂಗ್ಲೆಂಡಿನ ಬ್ಲೆಟ್‌ಚ್ಲೆ ಪಾರ್ಕ್‌ನಲ್ಲಿ ನಡೆಯಿತು. 2024ರಲ್ಲಿ ಸಿಯೋಲ್‌; ಇಮ್ಯಾನ್ಯುಯೆಲ್‌ ಮ್ಯಾಕ್ರನ್ 2025ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು; ಸಹ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ. ಎಐಗೆ ಸಂಬಂಧಿಸಿದಂತೆ ʻಸುರಕ್ಷತೆ ಮೊದಲುʼ ಕಾರ್ಯನೀತಿಯನ್ನು ಅಮೆರಿಕದ ಉಪಾ ಧ್ಯಕ್ಷ ಜೆ.ಡಿ. ವ್ಯಾನ್ಸ್‌ ತಳ್ಳಿಹಾಕಿದರು; ಅನ್ವೇಷಣೆ, ಸಂಶೋಧನೆ ಹಾಗೂ ತಂತ್ರಜ್ಞಾನದ ವಾಣಿಜ್ಯೀಕರಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದ್ದರು. ಎಐ ಹೆಚ್ಚು ಜನರಿಗೆ ತಲುಪಬೇಕು; ಪಾಶ್ಚಿಮಾತ್ಯ ಎಲ್‌ಎಲ್‌ಎಂ(ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್)‌ಗಳಲ್ಲಿ ದಕ್ಷಿಣದ ದೇಶಗಳ ಭಾಷೆಗಳ ಪ್ರಾತಿನಿಧಿತ್ವ ಕಡಿಮೆ ಇದ್ದು, ಅದನ್ನು ವಿಸ್ತರಿಸಬೇಕು ಮತ್ತು ಈ ತಂತ್ರಜ್ಞಾನ ʼಸುರಕ್ಷಿತ ಹಾಗೂ ನಂಬಿಕಾರ್ಹʼ ಆಗಬೇಕು. ಎಐ ಮೂಲಸೌಲಭ್ಯ ನಿರ್ಮಾಣ-ಸಂಶೋಧನೆಗೆ ದೇಶ ಸೂಕ್ತ ಎಂದು ಬಿಂಬಿಸುವುದು, ಎಐನಲ್ಲಿ ಹೂಡಿಕೆಗೆ ದೇಶಿ ಉದ್ಯಮಿಗಳನ್ನು ಉತ್ತೇಜಿಸುವುದು ಮತ್ತು ದೇಶದಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ವಿಶೇಷವಾಗಿ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವುದು ದಿಲ್ಲಿ ಶೃಂಗಸಭೆಯ ಉದ್ದೇಶ ವಾಗಿತ್ತು. ದೇಶದ ಮೊಟ್ಟ ಮೊದಲ ಎಲ್ಎಲ್‌ಎಂ‌ ಸರ್ವಂ, ಇದೇ ವೇಳೆ ಅನಾವರಣಗೊಂಡಿತು. ರಿಲಯನ್ಸ್‌ ದೇಶಿ ಎಐಗೆ 10 ಲಕ್ಷ ಕೋಟಿ ರೂ. ಮತ್ತು ಗೂಗಲ್‌ ದತ್ತಾಂಶ ಉಗ್ರಾಣ/ಎಐ ಯೋಜನೆಗೆ 15 ಶತಕೋಟಿ ಡಾಲರ್‌ ಹೂಡಿಕೆ, ಓಪನ್‌ ಎಐ-ಟಾಟಾ ಗ್ರೂಪ್‌, ಆಂಥ್ರೋಪಿಕ್-ಇನ್ಫೋಸಿಸ್‌ ಹಾಗೂ ಯೊಟ್ಟ ಡೇಟಾ ಸರ್ವೀಸಸ್‌-ಎನ್‌ವಿಡಿಯಾ ಒಪ್ಪಂದ ಮಾಡಿಕೊಂಡವು. ಆಂಥ್ರೋಪಿಕ್‌ ಮಾರ್ಚ್‌ 2023ರಲ್ಲಿ ʻಕ್ಲಾಡ್‌ʼ ಎಲ್‌ಎಲ್ಎಂ ಅನಾವರಣಗೊಳಿಸಿತು. ಫೆಬ್ರವರಿ 2026ರಲ್ಲಿ ಬಿಡುಗಡೆಗೊಳಿಸಿದ ʻಕ್ಲಾಡ್‌ ಸಾನೆಟ್‌ 4.6ʼ ಐಟಿ ಲೋಕದಲ್ಲಿ ಕಂಪನ ಸೃಷ್ಟಿಸಿತ್ತು; ಓಪನ್‌ ಎಐ ಸೇರಿದಂತೆ ಹಲವು ಕಂಪನಿಗಳ ಸ್ಟಾಕ್‌ಗಳು ನೆಲ ಕಚ್ಚಿದವು.

ವಿಶ್ವ ನಾಯಕ ಆಗುವುದು ಸಾಧ್ಯವೇ?: ಎಐ ವ್ಯವಸ್ಥೆಗೆ 6 ಅಂಶಗಳು ಅಗತ್ಯ- ಹಾರ್ಡ್‌ವೇರ್‌, ಮೂಲಭೂತ ಸೌಕರ್ಯ, ತರಬೇತಾದ ಭಾರಿ ಪ್ರಮಾಣದ ಎಐ ಮಾದರಿ (ಫೌಂಡೇPax silica initiativeಷನಲ್‌ ಮಾಡೆಲ್; ಉದಾಹರಣೆಗೆ, ಜಿಪಿಟಿ 4, ಲಾಮಾ, ಜೆಮಿನಿ ಇತ್ಯಾದಿ), ದತ್ತಾಂಶ, ಐಡಿಪಿ(ಆಂತರಿಕ ಅಭಿವೃದ್ಧಿ ಚೌಕಟ್ಟು, ಇಂಟರ್ನಲ್‌ ಡೆವಲಪರ್‌ ಪ್ಲಾಟ್‌ಫಾರಂ) ಮತ್ತು ಅಪ್ಲಿಕೇಷನ್‌ ಲೇಯರ್(7ನೇ ಪದರ; ಒಎಸ್‌ಐ ಮತ್ತು ಟಿಸಿಪಿ/ಐಪಿ ಮಾದರಿಯಲ್ಲಿ ಮೇಲಿನ ಪದರ).‌ ಸಮಸ್ಯೆಯೇನೆಂದರೆ, ದೇಶದಲ್ಲಿ ಉನ್ನತ ಶ್ರೇಣಿಯ ಚಿಪ್‌ ಉತ್ಪಾದನೆ ಆಗು ತ್ತಿಲ್ಲ; ಅಮೆರಿಕ ಮತ್ತು ಚೀನದಲ್ಲಿ ಇರುವ ಮೂಲಭೂತ ಮಾದರಿಗಳು ಇಲ್ಲ; ದತ್ತಾಂಶ ಸಂಗ್ರಹಿಸಲು ವಿದೇಶದ ಕ್ಲೌಡ್‌ ವ್ಯವಸ್ಥೆಯನ್ನು ಆಧರಿಸಿದ್ದೇವೆ ಮತ್ತು ಉನ್ನತ ಸಂಶೋಧನೆ ಪರಿಸರ ಇಲ್ಲ. ಆದರೆ, ನಮ್ಮದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಪನ್‌ ಎಐ ಮಾರುಕಟ್ಟೆ. ಇದು ವಿದೇಶದ ಬಿಗ್‌ ಟೆಕ್‌ ಕಂಪನಿಗಳನ್ನು ಆಕರ್ಷಿಸುತ್ತಿದೆ.

ನಿರುದ್ಯೋಗ ಸಮಸ್ಯೆ ಮತ್ತು ಪ್ರತಿಭಟನೆ: ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಳಿದ್ದು ಒಂದು ಸರಳ ಪ್ರಶ್ನೆ- ಉದ್ಯೋಗಗಳು ಎಲ್ಲಿವೆ? ನಿಶಸ್ತ್ರರಾಗಿ, ಕಾನೂನನ್ನು ಉಲ್ಲಂಘಿಸದೆ ನಿರುದ್ಯೋ ಗ ಕುರಿತ ಅಂಕಿಅಂಶಗಳಿರುವ ಫಲಕಗಳನ್ನು ಪ್ರದರ್ಶಿಸಿದರು; ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಶೃಂಗಸಭೆಯಿಂದ ಏನಾಗಲಿದೆ ಎಂಬುದನ್ನು ತಿಳಿದು ಕೊಳ್ಳುವ ಹಕ್ಕು ಹೊಂದಿರುತ್ತಾರೆ. ಉತ್ತರದಾಯಿತ್ವ ಇಲ್ಲದ ಸರ್ಕಾರ ಜನರಿಂದ ಮಾಹಿತಿ-ಅಂಕಿಅಂಶಗಳನ್ನು ಮುಚ್ಚಿಡುತ್ತದೆ; ದೇಶದ ಶೇ.83ರಷ್ಟು ನಿರುದ್ಯೋಗಿಗಳು 15-29 ವರ್ಷ ವಯಸ್ಸಿನವರು. ಅಂದರೆ, ಆರರಲ್ಲಿ ಐವರಿಗೆ ಕೆಲಸವಿಲ್ಲ. ʻಜನಸಂಖ್ಯಾ ಲಾಭಾಂಶʼ(ಡೆಮಾಗ್ರಫಿಕ್‌ ಡಿವಿಡೆಂಡ್) ಇರುವ ದೇಶದಲ್ಲಿ ನಿರುದ್ಯೋಗವೇ ಲಾಭಾಂಶವಾಗಿದೆ (ಇಂಡಿಯಾ ಎಂಪ್ಲಾಯ್‌ಮೆಂಟ್‌ ರಿಪೋರ್ಟ್, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಐಎಚ್‌ಡಿ, 2024). ಪದವೀಧರರಲ್ಲಿ ನಿರುದ್ಯೋಗ ಪ್ರಮಾಣ ಶೇ.29; ಹೆಚ್ಚು ಓದಿದವರಿಗೆ ಕೆಲಸ ಸಿಗು ವ ಸಾಧ್ಯತೆ ಕಡಿಮೆ ಆಗಿದೆ. ಪ್ರತಿ ವರ್ಷ 12-15 ದಶಲಕ್ಷ ಯುವಜನರು ಕಾರ್ಮಿಕ ಬಲಕ್ಕೆ ಸೇರ್ಪಡೆಯಾಗುತ್ತಾರೆ. ಆದರೆ, ಆರ್ಥಿಕತೆ ವಾರ್ಷಿಕ 5 ರಿಂದ 8 ದಶಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಉಳಿದವರು ಜೆಪ್ಟೋ, ಬ್ಲಿಂಕಿಟ್‌, ಬಿಗ್‌ಬ್ಯಾಸ್ಕೆಟ್‌ ಇತ್ಯಾದಿ ವಿಮೆ ಸೇರಿದಂತೆ ಯಾವುದೇ ಸಾಮಾಜಿಕ ಸುರಕ್ಷೆ ಇಲ್ಲದ ಗಿಗ್ ಕೆಲಸಕ್ಕೆ ಸೇರುತ್ತಾರೆ. ಹೀಗಿದ್ದರೂ, ಸರ್ಕಾರ ಉದ್ಯೋಗ ಸೃಷ್ಠಿ ಬಗ್ಗೆ ಕೊಚ್ಚಿಕೊಳ್ಳುತ್ತದೆ!

ಪ್ರತಿಭಟನೆ ಸಂವಿಧಾನ ವಿರೋಧಿಯಲ್ಲ; ಜಾಗತಿಕ ಶೃಂಗಸಭೆಗಳ ಹೊರಗೆ ನಡೆಯುವ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಲಕ್ಷಣ. 1999ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯುಟಿಒ ಶೃಂಗದಲ್ಲಿ ಕಾರ್ಮಿಕ ಹಕ್ಕು ಉಲ್ಲಂಘನೆ ಮತ್ತು ಅಸಮಾನತೆ ವಿರೋಧಿಸಿ, 40,000 ಜನ ಮೆರವಣಿಗೆ ನಡೆಸಿದರು. ಇದನ್ನು ನಾಗರಿಕ ಸಮಾಜದ ನಿರ್ಣಾಯಕ ಕ್ಷಣವೆಂದು ಪರಿಗಣಿಸಲಾಗಿದೆ. ಜಿನೇವಾದ ಜಿ 8, ಲಂಡನ್ನಿನ ಜಿ 20 ಸಮಾವೇಶ, ಕೋಪನ್‌ಹೇಗನ್‌, ಗ್ಲ್ಯಾಸ್ಗೋ ಮತ್ತಿತರ ಕಡೆ ನಡೆದ ಹವಾಮಾನ ಶೃಂಗಸಭೆಗಳು ಹಾಗೂ ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕಾರ್ಮಿಕ ಸಂಘಗಳ ಸದಸ್ಯರು ಮೆರವಣಿಗೆ ಮಾಡುತ್ತಾರೆ; ಇಂಥ ಪ್ರತಿಭಟನೆಗಳು ನೀತಿ ನಿರೂಪಣೆಗೆ ಮಹತ್ವದ ಕಾಣಿಕೆ ನೀಡಿವೆ. ಜೊತೆಗೆ, ಫ್ರೈಡೇಸ್‌ ಫಾರ್‌ ಫ್ಯೂಚರ್‌, ಆಕ್ಯುಪೈ ಮತ್ತಿತರ ಯುವಜನರ ನೇತೃತ್ವದ ಚಳವಳಿಗಳು ಹವಾಮಾನ ಬದಲಾವಣೆ, ಅಸಮಾನತೆ ಮತ್ತು ಉದ್ಯೋಗ ಕುರಿತ ಜಾಗತಿಕ ನೀತಿಗಳನ್ನು ಮರುರೂಪಿಸಿವೆ. ಇವರನ್ನು ಯಾರೂ ರಾಷ್ಟ್ರ ವಿರೋಧಿ, ಅಭಿವೃದ್ಧಿ ವಿರೋಧಿ ಎನ್ನುವುದಿಲ್ಲ. ಈ ಹಣೆಪಟ್ಟಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸುವ ಭಾರತೀಯ ನಾಗರಿಕರಿಗೆ ಮೀಸ ಲಾಗಿದೆ ಎನ್ನಿಸುತ್ತದೆ. ಯುವ ಕಾಂಗ್ರೆಸ್ ಮಾನ್ಯತೆ ಪಡೆದ ಸಂಘಟನೆ. ಅದರ ಸದಸ್ಯರು ಸಂವಿಧಾನದ 19ನೇ ವಿಧಿ ನೀಡಿದ ಹಕ್ಕನ್ನು ಚಲಾಯಿಸಿದರು. ಅವರನ್ನು ʻರಾಷ್ಟ್ರವಿರೋಧಿʼ ಎನ್ನುವುದು ಗಣತಂತ್ರದ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ತನ್ನ ಸಾಧನೆಗಳಲ್ಲಿ ವಿಶ್ವಾಸ ಹೊಂದಿರುವ ಸರ್ಕಾರ, ಪ್ರಶ್ನೆಗಳನ್ನು ಸ್ವಾಗತಿಸಬೇಕೇ ಹೊರತು ಪ್ರಶ್ನಿಸುವವರನ್ನು ಹತ್ತಿಕ್ಕಬಾರದು.

ಎಐ ಯಾರಿಗೆ ಲಾಭ?: ʻಎಐ ಒಟ್ಟು ಜಾಗತಿಕ ಉದ್ಯೋಗಗಳಲ್ಲಿ ಶೇ.40 ರ ಮೇಲೆ ಪರಿಣಾಮ ಬೀರಬಹುದು. ಅದು ಹೆಚ್ಚಿನ ಸನ್ನಿವೇಶಗಳಲ್ಲಿ ಒಟ್ಟಾರೆ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ,ʼ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಕಾರ್ಯನಿರ್ವಾಹಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ದಾವೋಸ್‌ನಲ್ಲಿ ಹೇಳಿದರು. 2030 ರ ವೇಳೆಗೆ 92 ದಶಲಕ್ಷ ಉದ್ಯೋಗಗಳು ಜಾಗತಿಕವಾಗಿ ಸ್ಥಳಾಂತರಗೊಳ್ಳುತ್ತವೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿ 2025, ಜನರೇಟಿವ್‌ ಎಐ ಒಂದರಿಂದಲೇ 300 ದಶಲಕ್ಷ ಪೂರ್ಣಾವಧಿ ಉದ್ಯೋಗಗಳು ಯಾತ್ರೀಕರಣಗೊಳ್ಳಲಿವೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್, 2030ರ ವೇಳೆಗೆ 12 ದಶಲಕ್ಷ ಭಾರತೀಯ ಕಾರ್ಮಿಕರು ಉದ್ಯೋಗವನ್ನು ಬದಲಿಸಬೇಕಾಗ ಬಹುದು ಎಂದು ಮೆಕಿನ್ಸೆ ಹಾಗೂ ದೇಶದಲ್ಲಿ ಮುಂದಿನ 3ರಿಂದ 5 ವರ್ಷದಲ್ಲಿ ಶೇ.20ರಷ್ಟು ಆರಂಭಿಕ ಮಟ್ಟದ ಐಟಿ ಉದ್ಯೋಗಗಳು ಸ್ವಯಂಚಾಲಿತ ಆಗಬಹುದು ಎಂದು ಅರ್ನ್ಟ್ಸ್‌ ಅಂಡ್‌ ಯೂಂಗ್‌-ನಾಸ್ಕಾಂ 2024 ವರದಿ ಹೇಳಿದೆ. ಇವು ಯುವಜನರಿಗೆ ಮೊದಲ ಸಂಬಳ ಮತ್ತು ಆರ್ಥಿಕ ಘನತೆ ನೀಡುವ ಉದ್ಯೋಗಗಳು.

ನೊಬೆಲ್ ಪುರಸ್ಕೃತ, ಮಸಾಚುಸೆಟ್ಸ್‌ ತಾಂತ್ರಿಕ ಇನ್‌ಸ್ಟಿಟ್ಯೂಟ್‌ನ ಅರ್ಥಶಾಸ್ತ್ರಜ್ಞ ಡರೆನ್ ಅಸೆಮೊಗ್ಲು ಹೇಳುವುದು: ಎಐಯಿಂದ ಆಗಬಹುದಾದ ಉತ್ಪಾದಕತೆಯನ್ನು ಉತ್ಪ್ರೇಕ್ಷಿಸಿ ಹೇಳಲಾಗುತ್ತದೆ; ಆದರೆ, ಉದ್ಯೋಗ ನಷ್ಟದ ಪರಿಣಾಮಗಳನ್ನು ಕುಗ್ಗಿಸಲಾಗಿದೆ. ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್, ʻಅನಿಯಂತ್ರಿತ ಎಐ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆʼ ಎನ್ನುತ್ತಾರೆ. ಕಾರ್ನೆಗಿ ಮೆಲ್ಲಾನ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಮೈಕ್ರೋಸಾಫ್ಟ್ ನ ಸಂಶೋಧಕರು ನಡೆಸಿದ ಹೊಸ ಅಧ್ಯಯನದ ಪ್ರಕಾರ, ʻವಿಮರ್ಶಾತ್ಮಕ ಚಿಂತನೆ ಅಗತ್ಯ ವಿರುವ ಸನ್ನಿವೇಶಗಳಲ್ಲಿ ತಮ್ಮ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೆಳೆಯರಿಗೆ ಹೋಲಿಸಿದರೆ, ಎಐ ಅವಲಂಬಿತರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಡಿಮೆ ಪರಿಣತಿ ಹೊಂದಿರುತ್ತಾರೆʼ. ಪ್ರತಿವರ್ಷ ನಮ್ಮ ವಿಶ್ವವಿದ್ಯಾನಿಲಯಗಳು ಚಾಟ್‌ ಜಿಪಿಟಿಯನ್ನು ಪ್ರಾಂಪ್ಟ್ ಮಾಡಬಲ್ಲ ಲಕ್ಷಗಟ್ಟಲೆ ಪದವೀಧರರನ್ನು ಉತ್ಪಾದಿಸುತ್ತವೆ; ಆದರೆ, ಅವರು ಸಂವಾದವನ್ನು ರೂಪಿಸಿ, ಮುನ್ನಡೆಸಲಾರರು. ಕೋಡ್ ರಚಿಸಬಹುದು; ಆದರೆ, ಸಮಸ್ಯೆಯನ್ನು ಪರಿಹರಿಸಲಾರರು. ಮಾಹಿತಿಯನ್ನು ಸಂಗ್ರಹಿಸಬಲ್ಲರು; ಆದರೆ, ಜ್ಞಾನವನ್ನು ಸಂಶ್ಲೇಷಿಸಲಾರರು. ನಮ್ಮ ಶಿಕ್ಷಣ ಕಾರ್ಯನೀತಿಯನ್ನು ರೂಪಿಸುವವರು ಉತ್ತರಿಸಬೇಕಾದ ಮುಖ್ಯ ಪ್ರಶ್ನೆಯೆಂದರೆ, ಕಾರ್ಮಿಕರನ್ನು ಅನಗತ್ಯವಾಗಿಸಬಲ್ಲ ಎಐ ವ್ಯವಸ್ಥೆಗೆ ನಮ್ಮ ಯುವಜನರು ಬೌದ್ಧಿಕ ದಾಸರಾಗ ದಂತೆ ತಡೆಯುವುದು ಹೇಗೆ? ಇದು ಉದ್ಯೋಗದ ಸಂಖ್ಯೆಯನ್ನು ಮೀರಿದ, ಗಂಭೀರ ಪ್ರಶ್ನೆ. ದಿಲ್ಲಿಯ ಶೃಂಗಕ್ಕೆ ಬಂದಿದ್ದ ಬಿಲ್‌ ಗೇಟ್ಸ್‌, ಸ್ಯಾಮ್‌ ಆಲ್ಟ್‌ಮನ್‌ ಮತ್ತಿತರರು ವ್ಯಾಪಾರಿ ಗಳು; ದೇಶ ಚಾಟ್‌ ಜಿಪಿಟಿಯ 2ನೇ ದೊಡ್ಡ ಮಾರುಕಟ್ಟೆ ಮತ್ತು ಎಐ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಈ ಮಾರುಕಟ್ಟೆ ಅವರಿಗೆ ಮುಖ್ಯ.

ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ: ಫಿನ್‌ಲ್ಯಾಂಡ್ ಮತ್ತು ಸಿಂಗಾಪುರಗಳು ಯಾಂತ್ರೀಕರಣದಿಂದ ಪ್ರಭಾವಿತವಾಗದ ಮತ್ತು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಹಾಗೂ ಹೊಂದಿಕೊಳ್ಳುವಿಕೆ ಕೌಶಲಗಳನ್ನು ಆಧರಿಸಿದ ಶಿಕ್ಷಣವನ್ನು ಪರಿಚಯಿಸಿವೆ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದನ್ನು ತಾತ್ವಿಕವಾಗಿ ಅಂಗೀಕರಿಸಿದೆ. ಆದರೆ, ಅನುಷ್ಠಾನದಲ್ಲಿ ವಿಳಂಬ, ಸಂಪನ್ಮೂಲ ಕೊರತೆ ಮತ್ತು ವಿದ್ಯೆಯನ್ನು ಕೊಳ್ಳಬಲ್ಲವರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳಿಗೆ ಸೀಮಿತವಾಗಿದೆ. ʻಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ; ಅದರ ನಾಯಕ ಮತ್ತು ಅದನ್ನು ರೂಪಿ ಸುತ್ತಿದೆʼ ಎಂದು ಪ್ರಧಾನಿ ಘೋಷಿಸುತ್ತಾರೆ. ಆದರೆ, ಅಮೆರಿಕ 2025 ರಲ್ಲಿ ಎಐಗೆ 400 ಶತಕೋಟಿ ಡಾಲರ್‌ ಖರ್ಚು ಮಾಡಿದೆ ಮತ್ತು 2026ರಲ್ಲಿ ಮೊತ್ತ 650 ಶತಕೋಟಿ ಡಾಲರ್‌ಗೆ ಏರಬಹುದು. ಚೀನಾ 125 ಶತಕೋಟಿ ಡಾಲರ್ ಖರ್ಚು ಮಾಡಿದೆ. ಆದರೆ, ನಾವು 13 ಶತ ಕೋಟಿ ಡಾಲರಿಗಿಂತ ಕಡಿಮೆ ವೆಚ್ಚ ಮಾಡಿದ್ದೇವೆ. ಶಿಕ್ಷಣ ಮತ್ತು ಸಂಶೋಧನೆಗೆ ಆಯ ವ್ಯಯದಲ್ಲಿ ನೀಡುವ ಅನುದಾನ ಕಡಿಮೆ ಇದೆ. ನಾವು ಐಟಿ ಕೂಲಿಗಳನ್ನು ಉತ್ಪಾದಿಸುತ್ತಿದ್ದಾಗ, ಚೀನಾ ತಾಂತ್ರಿಕ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿತು. ನಮ್ಮ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಪ್ರಾಧ್ಯಾಪಕರು ಮತ್ತು ಶಿಕ್ಷಕರ ಗುಣಮಟ್ಟದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿದರೆ, ಶಿಕ್ಷಣ ಕ್ಷೇತ್ರದ ಭಯಾನಕ ಸ್ಥಿತಿ ಅನಾವರಣಗೊಳ್ಳುತ್ತದೆ. ಯುಜಿಸಿ ಇತ್ತೀಚೆಗೆ 32 ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ವಿವಿಗಳಲ್ಲಿ ಬೋಧಕರು-ಸಿಬ್ಬಂದಿ ಕೊರತೆ ಇದೆ; ಅನುದಾನ ಸಾಲುತ್ತಿಲ್ಲ; ಸಂಶೋಧನೆ ಗುಣ ಮಟ್ಟ ಪಾತಾಳ ತಲುಪಿದೆ. ರಾಜಕಾರಣಿಗಳು ಪಕ್ಷಾತೀತವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. 2021-22ರ ವರದಿ ಪ್ರಕಾರ, ಒಟ್ಟು ವಿಶ್ವವಿದ್ಯಾನಿಲಯಗಳಲ್ಲಿ ಸರ್ಕಾರದ ಪಾಲು ಶೇ. 58.6 ಮತ್ತು ಇವುಗಳಲ್ಲಿ ಶೇ.73.7 ರಷ್ಟು ದಾಖಲಾತಿಯಿದೆ. ಹೆಚ್ಚು ಶುಲ್ಕ ವಿಧಿಸುವ ಸ್ವಾಯತ್ತ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಪ್ರಮಾಣ ಶೇ.26.3 ಇದ್ದು, ಕ್ರಮೇಣ ಹೆಚ್ಚುತ್ತಿದೆ. ಒಟ್ಟು ಕಾಲೇಜುಗಳಲ್ಲಿ ಶೇ.78.5ರಷ್ಟು ಅನುದಾನರಹಿತ ಮತ್ತು ಖಾಸಗಿ ಅನುದಾನದಿಂದ ನಡೆಯುತ್ತಿವೆ. ದೇಶದ ಉನ್ನತ ಶಿಕ್ಷಣ ಖಾಸಗಿ ಕ್ಷೇತ್ರದ ಹಿಡಿತದಲ್ಲಿದೆ. ಇವು ‌ʻಮೆರಿಟ್ʼ ಹೆಸರಿನಲ್ಲಿ ಸಮಾಜದ ಬಹುಸಂಖ್ಯಾತರಿಗೆ ಬಾಗಿಲು ಮುಚ್ಚಿವೆ.

ʻಚೋರ ಗುರು, ದುಷ್ಟ ಶಿಷ್ಯʼ ಎಂಬ ಮಾತಿನಂತೆ ರಾಜಕಾರಣಿಗಳಿಂದ ಇತಿಹಾಸ ಕಲಿಯುವ ಯುವಜನರು, ʻ2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತುʼ, ʻಜವಾಹರಲಾಲ್ ನೆಹರು ದೇಶ ದ್ರೋಹಿʼ ಎಂದು ಹೇಳುತ್ತಾರೆ. ವಾಟ್ಸಾಪ್ ವಿಶ್ವವಿದ್ಯಾನಿಲಯ ಬೌದ್ಧಿಕ ವಿರೋಧಿ ವಾತಾವರಣವನ್ನು ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಂಚಿಕೆ ಮತ್ತು ನಿಂದನೀಯ ಟ್ರೋಲ್ ಗೆ ಯಾರು ಆದೇಶ ನೀಡುತ್ತಾರೆ? ರಾಮಮಂದಿರ ನಿರ್ಮಾಣ, ಕುಂಭ ಮೇಳ ಮತ್ತು ಸಂಸತ್ತಿನಲ್ಲಿ ಸೆಂಗೋಲ್ ಸ್ಥಾಪನೆಯಿಂದ ದೇಶದ ಉದ್ಧಾರವಾಗಲಿದೆ ಎಂದು ನಂಬಿಸಿ ದವರು ಯಾರು? ಏಐ ಶೃಂಗದಲ್ಲಿ ನಗೆಪಾಟಲಾದ ಗಲ್ಗೋಟಿಯಾ ವಿಶ್ವವಿದ್ಯಾನಿಲಯವನ್ನು ಪ್ರಧಾನಿ 2014ರಲ್ಲಿ ʻಅತ್ಯುತ್ತಮ ಖಾಸಗಿ ವಿಶ್ವವಿದ್ಯಾನಿಲಯʼ ಎಂದು ಪ್ರಶಂಶಿಸಿದ್ದರು; ಇದೇ ಪಕ್ಷದವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಬೌದ್ಧಿಕ ವಾತಾವರಣವನ್ನು ನಾಶಮಾಡಲು ಯತ್ನಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಸ್ಥರ ಓಲೈಸುವಿಕೆ ಜಾಡ್ಯದಂತೆ ಹರಡಿದೆ. ಪ್ರಧಾನಿ ಅವರ ʻಮನ್‌ಕಿ ಬಾತ್‌ʼ ನ ರಾಜಕೀಯ ಸಮಾಜಿಕೀಕರಣದ ಅಧ್ಯಯನಕ್ಕೆ ಬೆಂಗಳೂರಿನ ಜೈನ್‌ ವಿವಿ ಹಾಗೂ ದಿಲ್ಲಿಯ ಜವಾಹರಲಾಲ್‌ ವಿವಿಯ ಇಬ್ಬರು ಪ್ರಾಧ್ಯಾ ಪಕರಿಗೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನೆ ಮಂಡಳಿ(ಐಸಿಎಸ್‌ಎಸ್‌ಆರ್‌) ಅನುದಾನ ನೀಡಿದೆ! ಮುಂದೊಂದು ದಿನ ಈ ಪ್ರಾಧ್ಯಾಪಕರು ಆಯಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರೆ ಆಶ್ಚರ್ಯಪಡಬೇಕಿಲ್ಲ!

ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಿದ ನೆಹರೂ ಅವರ ಹೆಸರಿಗೆ ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಸರ್ಕಾರ ಹೇಳುವ ʻನವಭಾರತʼ(ನ್ಯೂಇಂಡಿಯಾ) ಎಂಬ ನುಡಿಗಟ್ಟನ್ನು ನೆಹರೂ ಮಾರ್ಚ್ 1952ರಲ್ಲಿ ಖರಗ್‌ಪುರದಲ್ಲಿ ಐಐಟಿಗೆ ಅಡಿಗಲ್ಲು ಹಾಕಿದಾಗ ಬಳಸಿದರು; ʻಇವುಗಳ ಬುನಾದಿ ಮೇಲೆ ನವಭಾರತವನ್ನು ಕಟ್ಟಲಾಗುತ್ತದೆʼ ಎಂದರು. ಮಾರ್ಚ್ 1959ರಲ್ಲಿ ಬಾಂಬೆಯಲ್ಲಿ ಎರಡನೇ ಐಐಟಿಗೆ ಅಡಿಪಾಯ ಹಾಕುತ್ತ, ʼತಾಂತ್ರಿಕ ತರಬೇತಿ ಮತ್ತು ಜ್ಞಾನ ನೀಡುವ ಸಂಸ್ಥೆಗಳ ಸ್ಥಾಪನೆ ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯಕ್ಕೂ ಅತ್ಯಂತ ಮುಖ್ಯ,ʼ ಎಂದು ಹೇಳಿದ್ದರು. ವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯದೊಂದಿಗೆ ಲಲಿತಕಲೆ, ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರ ಮತ್ತು ಸಂಸ್ಕೃತಿ ಯನ್ನು ಉತ್ತೇಜಿಸಲು ಹಲವು ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿದರು. ಮೇಘನಾದ ಸಹಾ, ಪಿ.ಸಿ.ಮಹಾಲನೋಬಿಸ್, ಆಲ್ಬರ್ಟ್ ಐನ್‌ಸ್ಟೈನ್, ಬರ್ಟ್ರಾಂಡ್ ರಸ್ಸೆಲ್, ಹೆನ್ರಿ ಡೇಲ್, ಅಲೆಕ್ಸಾಂಡರ್ ಫ್ಲೆಮಿಂಗ್, ಎ.ವಿ. ಹಿಲ್ ಮತ್ತು ನೀಲ್ಸ್ ಬೋರ್‌ ಅವರಂಥ ವಿಜ್ಞಾನಿಗಳೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಆದರೆ, ಈಗ ಹಿರಿಯಣ್ಣನ ಚಾಳಿ ಮನೆಮಂದಿ ಗೆಲ್ಲ ಎನ್ನುವಂತೆ ಗಾಂಧಿ-ನೆಹರೂ ನಿಂದನೆ ವ್ಯಾಪಕವಾಗಿ ಹರಡಿಬಿಟ್ಟಿದೆ.

ಎಐ ಉಬ್ಬರ ಎಷ್ಟು ನಿಜ ಮತ್ತು ಎಷ್ಟು ದಿನ ಇರಲಿದೆ? ಕಳೆದ 10 ವರ್ಷಗಳಿಂದ ಎಐ ಕ್ಷೇತ್ರಕ್ಕೆ ಹಣ ಹರಿದಿದೆ; ಇದರಿಂದ ಉಳಿದ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗಿದೆ ಹಾಗೂ ಎಐ ನೆಪದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ತೆಗೆದುಹಾಕಿವೆ. ಶಿಕ್ಷಣ ವ್ಯವಸ್ಥೆಯ ದುರಸ್ತಿ, ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ, ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ಯೋಗ ಸೃಷ್ಟಿ, ಯುವಜನರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಎಐ ಯುಗಕ್ಕೆ ಸನ್ನದ್ಧಗೊಳಿಸುವಿಕೆ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇದಕ್ಕೆ ಸರ್ಕಾರ ಯಾವ ಸಿದ್ಧತೆ ಮಾಡಿಕೊಂಡಿದೆ? ಗಲ್ಗೋಟಿಯಾ ವಿಶ್ವವಿದ್ಯಾನಿಲಯದ ರೋಬೋ ನಾಯಿ ʻಒರಿಯಾನ್‌ʼ, ನಮ್ಮ ಕುಲಗೆಟ್ಟ ವ್ಯವಸ್ಥೆಯ ಪ್ರತೀಕ.

Journalist,Translator,avid bibliophile

Leave a Reply

Your email address will not be published. Required fields are marked *

Back To Top