ಐಟಿ ಕಾಯಿದೆ: ಹೈಕೋರ್ಟ್ ಕದ ತಟ್ಟಿದ ವಾಟ್ಸ್ ಆಪ್

ನಿಗೂಢಲಿಪಿ(ಎನ್‍ಕ್ರಿಪ್ಷನ್)ಯನ್ನು ಬಹಿರಂಗಗೊಳಿಸುವುದು ನಾಗರಿಕರ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದಿರುವ ವಾಟ್ಸ್ ಆಪ್, ನೂತನ ಐಟಿ ಕಾಯಿದೆಯನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಯಾವ ಮೂಲಭೂತ ಹಕ್ಕು ಕೂಡ ನಿರಂಕುಶವಲ್ಲ ಎಂದು ಹೇಳಿದೆ.
ಹೊಸ ಐಟಿ ಕಾಯಿದೆಯಿಂದ ನಾಗರಿಕರ ಖಾಸಗಿತನದ ಹಕ್ಕು ಹಾಗೂ ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಕೆ.ಎಸ್.ಪುಟ್ಟಸ್ವಾಮಿ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದಿದೆ. ಮಧ್ಯಸ್ಥ ಕಂಪನಿಗಳು ಮಾಹಿತಿಯನ್ನು ಸೃಷ್ಟಿಸಿದವರ ಗುರುತನ್ನು ನೀಡುವುದು ಅವರ ಖಾಸಗಿತನದ ಉಲ್ಲಂಘನೆಯಾಗಲಿದೆ ಎಂದು ವಾಟ್ಸ್‍ಆಪ್ ಅರ್ಜಿಯಲ್ಲಿ ಹೇಳಿದೆ.

ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಮೂಲಭೂತ ಹಕ್ಕುಗಳಿಗೂ ನಿರ್ಬಂಧಗಳಿರುತ್ತವೆ ಎಂದು ನ್ಯಾಯಾಲಯವೇ ಹೇಳಿದೆ. ವಾಟ್ಸ್‍ಆಪ್ ಹೊಸ ಕಾಯಿದೆಯನ್ನು ತಡೆಯಲು ಕೊನೆಯ ಘಳಿಗೆಯಲ್ಲಿ ಈ ಪ್ರಯತ್ನ ನಡೆಸಿದೆ ಎಂದಿದೆ.

ಏತನ್ಮಧ್ಯೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲ ಮಧ್ಯಸ್ಥ ಕಂಪನಿಗಳು ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸಬೇಕೆಂದು ಸೂಚಿಸಿದೆ. ಕಾಯಿದೆ ಪ್ರಕಾರ, 50 ಲಕ್ಷಕ್ಕಿಂತ ಅಧಿಕ ಗ್ರಾಹಕರಿರುವ ಸಾಮಾಜಿಕ ವೇದಿಕೆಗಳಿಗೆ ಹೊಸ ಕಾಯಿದೆ ಅನ್ವಯಿಸಲಿದೆ.

ಐಟಿ ಕಾಯಿದೆ ಕಠೋರವಾಗಿದ್ದು, ಮೋದಿ ಸರ್ಕಾರ ಸಾಮಾಜಿಕ ಮಾಧ್ಯಮದ ಪೊಲೀಸ್ ವ್ಯವಸ್ಥೆ ಸೃಷ್ಟಿಸಲು ಹೊರಟಿದೆ ಎಂದು ಕಾಂಗ್ರಸ್ ಟೀಕಿಸಿದೆ. ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಮೋದಿ ಸರ್ಕಾರ ಐಟಿ ಮಂತ್ರಾಲಯವನ್ನು ಸಾಮಾಜಿಕ ವೇದಿಕೆಗಳ ಪ್ರಧಾನ ಪೊಲೀಸ್ ಠಾಣೆಯನ್ನಾಗಿಸಿದೆ ಎಂದು ಹೇಳಿದ್ದಾರೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top