ಕೋವಿಡ್ ಗಂಡಸರಿಗೆ ಹೆಚ್ಚು ಮಾರಕವೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಬೇರೆಲ್ಲಾ ವಿಷಯದಲ್ಲಿಯೂ ಮಹಿಳೆಯರನ್ನು ಅಬಲರೆನ್ನಬಹುದು. ಅದರೆ ಕೋವಿಡ್‌ ವಿಷಯದಲ್ಲಿ ಬಂದಾಗ ಮಹಿಳೆಯರೇ ಸಬಲರು. ಆ ಸೋಂಕಿನಿಂದ ಗೆದ್ದು ಬರುವವರಲ್ಲಿ ಅವರೇ ಹೆಚ್ಚಂತೆ. ಇದು ಅವರಿಗೆ ನಿಸರ್ಗ ಇತ್ತ ವರವಿಬಹುದು. ಏಕೆಂದರೆ ಗಂಡಸರು ಹಾಗೂ ಹೆಂಗಸರ ರೋಗಪ್ರತಿರೋಧಕತೆಯಲ್ಲಿ ನಿರ್ಣಾಯಕವಾದ ವ್ಯತ್ಯಾಸಗಳಿವೆ ಎಂಬ ಸುದ್ದಿಯನ್ನು ಮೊನ್ನೆ ಸೈನ್ಸ್‌ ಪತ್ರಿಕೆ ವರದಿ ಮಾಡಿದೆ. ರೋಗಪ್ರತಿರೋಧಕತೆಯಲ್ಲಿ ಹೀಗೊಂದು ಲಿಂಗಭೇದ ಸ್ಪಷ್ಟವಾಗಿದೆ ಎಂದು ಅಮೆರಿಕೆಯ ಯೇಲ್‌ ವಿಶ್ವವಿದ್ಯಾನಿಲಯದ ವೈದ್ಯ ವಿಜ್ಞಾನಿಗಳಾದ ಅಕಿಕೋ ಇವಸಾಕಿ ಮತ್ತು ತಕೆಹಿರೊ ತಕಹಾಶಿ ವರದಿ ಮಾಡಿದ್ದಾರೆ.

ಕೋವಿಡ್‌ ಹತ್ತೊಂಭತ್ತು ಅಥವಾ ಸಾರ್ಸ್‌ ಕೋವಿ 2 ಸೋಂಕು ಪ್ರಪಂಚದಲ್ಲಿ ಹರಡಲು ಆರಂಭವಾದಾಗಿನಿಂದಲೂ ಅದು ಯಾರನ್ನು ಗುರಿಯಾಗಿಸಿಕೊಂಡಿದೆ ಎನ್ನುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆಯಷ್ಟೆ. ಇದುವರೆಗೂ ಈ ರೋಗ ಸೋಂಕಿದ ಸಂಖ್ಯೆ ಹಾಗೂ ಅದರಿಂದಾಗಿ ಖಾಯಿಲೆ ಬಂದು ನರಳಿದವರ ಹಾಗೂ ಸತ್ತವರ ಸಂಖ್ಯೆಯನ್ನು ಗಮನಿಸಿದರೆ, ಇದು ಬಹುತೇಕ ತುಸು ವಯಸ್ಸಾದವರನ್ನೂ, ಡಯಾಬಿಟೀಸ್‌, ರಕ್ತದೊತ್ತಡ, ಶ್ವಾಸಕೋಶದ ಖಾಯಿಲೆಗಳು ಇರುವವರಿಗೆ ಹೆಚ್ಚು ಮಾರಕವಾಗಿದ್ದು ಕಂಡು ಬಂದಿದೆ. ಬೇರೆ ರೋಗಗಳೆಲ್ಲವೂ ಸಣ್ಣ ಮಕ್ಕಳನ್ನು ಹೆಚ್ಚು ಬಲಿ ತೆಗೆದುಕೊಳ್ಳುವಂಥವಾದರೂ, ಕೋವಿಡ್‌ ಹತ್ತೊಂಬತ್ತು ಮಾತ್ರ ಹಿರಿಯ ನಾಗರೀಕರತ್ತಲೇ ಗುರಿ ಇಟ್ಟಂತಿದೆ. ಈ ರೋಗಕ್ಕೆ ಬಲಿಯಾದವರಲ್ಲಿ ವಯಸ್ಸಾದವರೇ ಹೆಚ್ಚು. ಹಾಗಿದ್ದರೂ, ಮೂವತ್ತು ವರ್ಷಕ್ಕಿಂತಲೂ ವಯಸ್ಸು ಹೆಚ್ಚಾದ ರೋಗಿಗಳನ್ನು ಗಮನಿಸಿದರೆ, ಗಂಡಸರ ಮೇಲೆಯೇ ಈ ರೋಗಕ್ಕೆ ಸಿಟ್ಟು ಇರುವಂತೆ ತೋರುತ್ತದೆ. ವಯಸ್ಸಾದವರಲ್ಲಿ ರೋಗದಿಂದ ಬಳಲಿದವರಲ್ಲಿ ಹೆಂಗಸರ ಸಂಖ್ಯೆ ಬಹಳ ಕಡಿಮೆ. ಹೆಚ್ಚೂ ಕಡಿಮೆ ಅರ್ಧದಷ್ಟು ಮಾತ್ರ. ಕೋವಿಡ್‌ ನಿಂದ ಸತ್ತ ಎಲ್ಲ ರೋಗಿಗಳನ್ನೂ ಪರಿಗಣಿಸಿದರೆ, ಒಟ್ಟಾರೆ ಬಾಧಿತ ಗಂಡಸರಲ್ಲಿ ಶೇಕಡ ೪.೭ರಷ್ಟೂ, ಬಾಧಿತ ಹೆಂಗಸರಲ್ಲಿ ಶೇಕಡ ೨.೮ರಷ್ಟು ಮಂದಿಯೂ ಸಾವನ್ನಪ್ಪಿದ್ದು ಕಂಡು ಬರುತ್ತದೆ. ಇವರೆಲ್ಲರಿಗೂ ವೈರಸ್ಸು ಸೋಂಕಿತ್ತು.

ಅಂದರೆ ಕೋವಿಡ್‌ ರೋಗ ಉಲ್ಬಣವಾಗುವುದು ಗಂಡಸರಿಗಿಂತಲೂ, ಹೆಂಗಸರಲ್ಲಿ ಕಡಿಮೆಯೇ? ಇದೇಕೆ ಹೀಗೆ? ಇದು ಇವಸಾಕಿ ಮತ್ತು ತಕಹಾಶಿಯವರ ಪ್ರಶ್ನೆ. ಮೇಲ್ನೋಟಕ್ಕೆ ಈ ವ್ಯತ್ಯಾಸ ಸಮಾಜದಲ್ಲಿ ಗಂಡಸರು ಹಾಗೂ ಹೆಂಗಸರ ನಡುವೆ ಇರುವ ಭೇದಗಳಿಂದಾಗಿ ಇರಬಹುದು ಎನಿಸುತ್ತದೆ. ಉದಾಹರಣೆಗೆ, ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ಹಲವು ಉದ್ಯೋಗಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ. ಹಾಗೆಯೇ, ಹಲವು ಸಮಾಜಗಳಲ್ಲಿ ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚು ಜನಸಂಪರ್ಕಕ್ಕೆ ಬರುವುದೂ ಉಂಟು. ಇವೆಲ್ಲ ಕಾರಣಗಳಿಂದಾಗಿ ಬಹುಶಃ ಈ ವ್ಯತ್ಯಾಸ ತೋರಬಹುದು. ಆದರೆ ಒಂದು ವೇಳೆ ಇದು ಅವರ ಲಿಂಗದಿಂದಾಗಿ ಉಂಟಾದ ಭೇದವೆಂದರೆ ಅದಕ್ಕೆ ತಕ್ಕಂತ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದು ಅವರ ತರ್ಕ.

ಆದರೆ ನಿಜವಾಗಿಯೂ ಈ ವ್ಯತ್ಯಾಸ ಗಂಡಸರು ಮತ್ತು ಹೆಂಗಸರ ದೇಹ ವ್ಯತ್ಯಾಸದಿಂದಾಗಿ ಆಗುತ್ತಿದೆಯೇ ಎನ್ನುವುದನ್ನು ತಿಳಿಯುವುದು ಹೇಗೆ? ಇದು ಬಹುಶಃ ಬೆಣ್ಣೆಯಿಂದ ರೋಮವನ್ನು ಹೆಕ್ಕಿದಷ್ಟೆ ಸುಲಭ ಎನ್ನಬಹುದು. ಇಂತಹ ಪ್ರಯತ್ನವನ್ನು ಕೈಗೊಂಡ ಇವಸಾಕಿ ಮತ್ತು ತಕಹಾಶಿ, ಗಂಡಸರು ಹಾಗೂ ಹೆಂಗಸರ ರೋಗ ಪ್ರತಿರೋಧ ವ್ಯವಸ್ಥೆಯ ಮೇಲೆ ಕಣ್ಣಾಡಿಸಿದ್ದಾರೆ. ಅಲ್ಲೇನಾದರೂ ವ್ಯತ್ಯಾಸ ಕಾಣುತ್ತದೆಯೋ ಎಂದು ಹುಡುಕಾಡಿದ್ದಾರೆ.

ರೋಗ ಪ್ರತಿರೋಧ ವ್ಯವಸ್ಥೆ ಎಂದರೆ ಇನ್ನೇನಲ್ಲ. ಯಾವುದೇ ವೈರಸು ಅಥವಾ ಬ್ಯಾಕ್ಟೀರಿಯಾ ಅಥವಾ ದೇಹದ್ದೇ ಅಲ್ಲದ ಯಾವುದೇ ವಸ್ತು ಶರೀರದೊಳಗೆ ನುಸುಳಿತೆನ್ನಿ. ಆಗ ದೇಹ ಅದನ್ನು ಹೊರದೂಡಲು ಅಥವಾ ಕೊಲ್ಲಲು ಪ್ರಯತ್ನಿಸುತ್ತದೆ. ಈ ಯತ್ನದಲ್ಲಿ ಭಾಗಿಯಾಗುವ ಜೀವಕೋಶಗಳು ಹಾಗೂ ಕ್ರಿಯೆಗಳನ್ನೇ ಒಟ್ಟಾರೆ ರೋಗಪ್ರತಿರೋಧ ಕ್ರಿಯೆ ಎನ್ನುತ್ತೇವೆ. ವೈರಸ್‌ ಪ್ರವೇಶಕ್ಕೆ ಈ ವ್ಯವಸ್ಥೆ ತೋರುವ ಪ್ರತಿಕ್ರಿಯೆಗಳು, ಗಂಡು ಮತ್ತು ಹೆಣ್ಣಿನಲ್ಲಿ ಒಂದೇ ತೆರನಾಗಿರುವುದಿಲ್ಲವಂತೆ.

ಉದಾಹರಣೆಗೆ, ವೈರಸ್ಸು ದೇಹವನ್ನು ಪ್ರವೇಶಿಸಿದಾಗ ಎರಡು ವಿಧದ ಕ್ರಿಯೆಗಳು ಅರಂಭವಾಗುತ್ತವೆ. ಮೊದಲನೆಯದನ್ನು ಇಂಟರ್‌ ಫೆರಾನ್‌ ಕ್ರಿಯೆ ಎನ್ನೋಣ. ಇದರಲ್ಲಿ ಇಂಟರ್‌ ಫೆರಾನ್‌ ಎನ್ನುವ ವಸ್ತುಗಳನ್ನು ಒಂದು ಬಗೆಯ ಬಿಳಿಕೋಶಗಳು ಸ್ರವಿಸುತ್ತವೆ. ಈ ಇಂಟರ್‌ ಫೆರಾನುಗಳು ರಕ್ತದಲ್ಲಿರುವ, ವೈರಸ್ಸನ್ನು ಹಿಡಿದು ತಿನ್ನುವ ಇಲ್ಲವೇ ವೈರಸ್ಸನ್ನು ಕಟ್ಟಿ ಹಾಕುವಂತಹ ಪ್ರೊಟೀನುಗಳನ್ನು ಸೃಷ್ಟಿಸುವ ಮತ್ತೊಂದು ಗುಂಪಿನ ಬಿಳಿಕಣಗಳಿಗೆ ಸೂಚನೆ ನೀಡುತ್ತವೆ. ಈ ಸೂಚನೆಯ ಫಲವಾಗಿ ಎರಡನೆಯ ಕ್ರಿಯೆ ಆರಂಭವಾಗುತ್ತದೆ. ವೈರಸ್ಸನ್ನು ಕಟ್ಟಿ ಹಾಕುವಂತಹ ರಕ್ತಕೋಶಗಳು ಹಾಗೂ ಪ್ರೊಟೀನುಗಳ ತಯಾರಿಕೆ ಭರದಿಂದ ಸಾಗುತ್ತದೆ. ಇದನ್ನು ಸೈಟೊಕೈನ್‌ ಕ್ರಿಯೆ ಎನ್ನುತ್ತಾರೆ.

ವೈರಸ್‌ ತಗುಲಿದ ಮೇಲೆ ತೋರುವ ಈ ಎರಡೂ ಕ್ರಿಯೆಗಳ ತೀವ್ರತೆ ಹಾಗೂ ಅವು ಕಾಣಿಸಿಕೊಳ್ಳುವ ಸಮಯ ಗಂಡು ಮತ್ತು ಹೆಣ್ಣಿನಲ್ಲಿ ಬೇರೆ, ಬೇರೆಯಂತೆ. ಕೋವಿಡ್‌ ಹತ್ತೊಂಭತ್ತರ ಸೋಂಕಿನ ಆರಂಭದಲ್ಲಿ ಈ ಸೈಟೊಕೈನು ಪ್ರೊಟೀನುಗಳ ಪ್ರಮಾಣ ಗಂಡಸರ ರಕ್ತದಲ್ಲಿ ಹೆಂಗಸರ ರಕ್ತದಲ್ಲಿ ಇರುವುದಕ್ಕಿಂತಲೂ ಹೆಚ್ಚು ಇರುತ್ತದೆ. ಇಂಟರ್‌ ಫೆರಾನ್‌ ಪ್ರಮಾಣ ಕಡಿಮೆ ಇರುತ್ತದೆ. ಹೆಂಗಸರ ರಕ್ತದಲ್ಲಿ ಇಂಟರ್‌ ಫೆರಾನ್‌ ಪ್ರಮಾಣ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಬಹುಶಃ ಇದು ಗಂಡಸರಲ್ಲಿ ಕೋವಿಡ್‌ ಖಾಯಿಲೆ ತೀವ್ರವಾಗಿ ಕಾಣುವುದಕ್ಕೆ ಕಾರಣವಿರಬಹುದು ಎನ್ನುವುದು ಇವಸಾಕಿ ಮತ್ತು ತಕಹಾಶಿಯವರ ಊಹೆ. ಏಕೆಂದರೆ ಇಂಟರ್‌ ಫೆರಾನುಗಳಲ್ಲಿ ಮೊದಲು ಕಾಣಿಸಿಕೊಂಡು ವೈರಸ್ಸುಗಳ ಪ್ರವೇಶದ ಸೂಚನೆಯನ್ನು ನೀಡುವ ಇಂಟರ್‌ ಫೆರಾನ್‌ ೧ ಎನ್ನುವದರ ಪ್ರಮಾಣವನ್ನು ಕುಗ್ಗಿಸುವಂತಹ ಪ್ರತಿಕಾಯಗಳು ತೀವ್ರತೆರನ ಖಾಯಿಲೆ ಬಂದ ಗಂಡಸರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಹೆಂಗಸರಲ್ಲಿ ಕಡಿಮೆ.

ಇದು ಮೇಲ್ನೋಟಕ್ಕೆ ಕಾಣುವ ವ್ಯತ್ಯಾಸಗಳಷ್ಟೆ? ಇವುಗಳಿಗೆ ಮೂಲವೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆನ್ನಿ. ಆದರೆ ಅದು ಗಂಡು ಹಾಗೂ ಹೆಣ್ಣು ಲಿಂಗವರ್ಣತಂತುಗಳಲ್ಲಿರುವ ವ್ಯತ್ಯಾಸದಿಂದಾಗಿ ಇರಬಹುದು ಎನ್ನುವುದು ಇವಸಾಕಿ ಮತ್ತು ತಕಹಾಶಿಯವರ ತರ್ಕ. ಗಂಡಸರಲ್ಲಿ ಇರುವ ಇಪ್ಪತ್ತಮೂರು ಜೋಡಿ ವರ್ಣತಂತುಗಳಲ್ಲಿ ಒಂದು ಜೋಡಿ ಹೆಂಗಸರಲ್ಲಿ ಇರುವುದರಂತೆ ಇರುವುದಿಲ್ಲ. ಇದನ್ನು ಲಿಂಗ ವರ್ಣ ತಂತು ಎನ್ನುತ್ತಾರೆ. ಗಂಡಸರಲ್ಲಿ ಈ ಜೋಡಿಯಲ್ಲಿ ಒಂದು ಪುಟ್ಟದಾಗಿ ಇರುತ್ತದೆ. ಹೆಂಗಸರಲ್ಲಿ ಈ ಜೋಡಿಯ ಎರಡೂ ವರ್ಣತಂತುಗಳೂ ಒಂದೇ ತೆರನಾಗಿ ಇರುತ್ತವೆ. ಅಂದರೆ ಈ ಹೆಣ್ಣಿನ ಲಿಂಗ ವರ್ಣತಂತುಗಳಲ್ಲಿ ಇರುವ ಜೀನ್‌ ಗಳು ಎಲ್ಲವೂ ಜೋಡಿಯಾಗಿದ್ದರೆ, ಗಂಡಸರಲ್ಲಿ ಅವುಗಳಲ್ಲಿ ಕೆಲವು ಒಂಟಿಯಾಗಿರಬಹುದು. ಈ ಕಾರಣದಿಂದಾಗಿಯೇ ಅವುಗಳ ಚಟುವಟಿಕೆಯಲ್ಲಿಯೂ ವ್ಯತ್ಯಾಸ ಇರಬಹುದು. ಜೊತೆಗೆ ಇಂಟರ್‌ ಫೆರಾನ್‌ ತಯಾರಿಕೆಯನ್ನು ಪ್ರಚೋದಿಸುವ ಕೆಲವು ಜೀನ್‌ ಗಳು ಈ ವರ್ಣತಂತುಗಳ ಮೇಲೆಯೇ ಇರುವುದರಿಂದಾಗಿ, ವೈರಸ್‌ ಪ್ರತಿಕ್ರಿಯೆಯ ವೇಳೆ ದೇಹದ ರೋಗ ಪ್ರತಿರೋಧ ವ್ಯವಸ್ಥೆಯ ಚಟುವಟಿಕೆಯಲ್ಲಿರುವ ವ್ಯತ್ಯಾಸವನ್ನು ಇದು ಇನ್ನಷ್ಟು ಹೆಚ್ಚು ಮಾಡಿರಬಹುದು.

ವಯಸ್ಸಾಗುತ್ತ ಹೋದ ಹಾಗೆ ಈ ಎರಡು ವರ್ಣತಂತುಗಳಲ್ಲಿರುವ, ಹಾಗೂ ರೋಗ ಪ್ರತಿರೋಧದಲ್ಲಿ ಪಾಲ್ಗೊಳ್ಳುವ ಜೀನ್‌ ಗಳ ಚಟುವಟಿಕೆಗಳೂ ಕುಗ್ಗುತ್ತವೆ. ಆದರೆ ಗಂಡಸರಲ್ಲಿ ಇದು ತುಸು ಬೇಗನೆ, ಒಂದೈದಾರು ವರ್ಷಗಳ ಮೊದಲೇ ಕಡಿಮೆಯಾಗುತ್ತದೆ. ಹೆಂಗಸರಲ್ಲಿ ಸ್ವಲ್ಪ ನಿಧಾನವಾಗಿ ಕುಗ್ಗುತ್ತದೆಯಾದ್ದರಿಂದ ಅರವತ್ತರಿಂದ ಅರವತ್ತನಾಲ್ಕು ವಯಸ್ಸಿನೊಳಗೆ ಗಂಡಸರಲ್ಲಿ ಆಗುವಷ್ಟು ವ್ಯತ್ಯಾಸ ಹೆಂಗಸರಲ್ಲಿ ಕಾಣುವುದಿಲ್ಲ. ವೃದ್ಧರಲ್ಲಿ ಗಂಡಸರೇ ಹೆಚ್ಚು ಬಲಿಯಾಗುತ್ತಿರುವುದಕ್ಕೆ ಇದುವೂ ಕಾರಣವಿರಬಹುದು.

ಇದರ ಜೊತೆಗೇ ಗಂಡು ಹಾಗೂ ಹೆಣ್ಣುಗಳಲ್ಲಿ ಇರುವ ಹಾರ್ಮೋನುಗಳ ನಡುವಣ ವ್ಯತ್ಯಾಸವೂ ಕಾರಣವಿರಬಹುದು ಎನ್ನುತ್ತದೆ ಈ ವೈದ್ಯರ ಜೋಡಿ. ಗಂಡು ಹಾಗೂ ಹೆಣ್ಣುಗಳ ಗುಣಗಳನ್ನು ಹಾರ್ಮೋನುಗಳು ನಿರ್ಧರಿಸುತ್ತವಷ್ಟೆ. ಈ ಹಾರ್ಮೋನುಗಳಲ್ಲಿ ಒಂದಿನ್ನೊಂದರ ಪ್ರಮಾಣ ಎಷ್ಟಿದೆ ಎನ್ನುವುದು ಆಯಾ ಲಿಂಗವನ್ನು ನಿರ್ಧರಿಸುತ್ತವೆ. ಅದಷ್ಟೇ ಅಲ್ಲ. ಅವು ಇತರೆ ಜೀವಕೋಶಗಳ ಚಟುವಟಿಕೆಗಳನ್ನೂ ಪ್ರಭಾವಿಸಬಲ್ಲುವು. ಉದಾಹರಣೆಗೆ, ಕೋವಿಡ್‌ ಅಧ್ಯಯನಕ್ಕಾಗಿ ವಿಶೇಷವಾಗಿ ಬೆಳೆಸಿ, ಪ್ರಯೋಗದಲ್ಲಿ ಬಳಸಿದ ಇಲಿಗಳಲ್ಲಿ ಗಂಡುಗಳೇ ಹೆಚ್ಚು ಮರಣಿಸಿದ್ದುವು. ಬಹುಶಃ ಹೆಣ್ಣುಗಳಲ್ಲಿನ ಹಾರ್ಮೋನುಗಳು ಅವನ್ನು ರಕ್ಷಿಸಿದ್ದಿರಬಹುದು ಎನ್ನುತ್ತಾರೆ ಇವಸಾಕಿ ಮತ್ತು ತಹಕಾಶಿ. ಇದಕ್ಕೆ ಕಾರಣ; ಹೆಣ್ಣುಗಳಲ್ಲಿ ಹೆಚ್ಚಿರುವ ಇಸ್ಟ್ರೋಜನ್‌ ಎನ್ನುವ ಹಾರ್ಮೋನು. ಇದು ಜೀವಕೋಶಗಳ ಮೇಲೆ ಇರುವ ಎಸಿಇ-೨ ಎನ್ನುವ ಪ್ರೊಟೀನು ತಯಾರಿಕೆಯನ್ನು ಹೆಚ್ಚೂ, ಕಡಿಮೆ ಮಾಡಬಲ್ಲುದು. ಇಸ್ಟ್ರೋಜನ್‌ ಹೆಚ್ಚಿದ್ದಾಗ ಈ ಪ್ರೊಟೀನಿನ ತಯಾರಿಕೆ ಕಡಿಮೆಯಂತೆ. ವಿಶೇಷ ಎಂದರೆ, ವೈರಸ್ಸುಗಳು, ಅದರಲ್ಲೀಯೂ ಕೋವಿಡ್‌ ೧೯ ಉಂಟು ಮಾಡುವ ಕೊರೊನಾ ವೈರಸ್ಸುಗಳು ಜೀವಕೋಶಗಳೊಳಗೆ ನುಸುಳಲು ಉಪಯೋಗಿಸುವುದು ಈ ಪ್ರೊಟೀನನ್ನೇ. ಹೀಗಾಗಿ ಕೋವಿಡ್‌ ರೋಗದ ವೇಳೆ ಇದು ವಿಶೇಷವಾಗಿ ಗಂಡಸರನ್ನೇ ಬಲಿಯನ್ನಾಗಿಸುತ್ತದೆ ಎಂದು ಇವರು ತರ್ಕಿಸಿದ್ದಾರೆ.

ಇವೆಲ್ಲ ತರ್ಕಗಳೂ ನಿಜವೋ, ಸುಳ್ಳೋ ಗೊತ್ತಿಲ್ಲ. ಇವುಗಳಿಂದ ಕೋವಿಡ್‌ ಸೋಂಕು ಹೆಚ್ಚಾಗದಂತೆ ತಡೆಯಬಹುದೋ? ಅದೂ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಇಂತಹ ವ್ಯತ್ಯಾಸಗಳು ಇರುವಾಗ, ನಾವು ಕೋವಿಡ್‌ ಕುರಿತಂತೆ, ಅದರಲ್ಲೂ ವಿಶೇಷವಾಗಿ, ಅದರ ಲಸಿಕೆಗಳ ಫಲಾಫಲಗಳ ಪರೀಕ್ಷೆಗೆ ಕುರಿತಂತೆ ಮಾಢುವ ಪ್ರಯೋಗಗಳಲ್ಲಿ ಗಂಡಸರ ಹಾಗೂ ಹೆಂಗಸರ ಪ್ರತಿಕ್ರಿಯೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ದೇಹದಲ್ಲಿ ನಡೆಯುತ್ತಿರುವುದರ ಒಂದು ಅಂಶವನ್ನಷ್ಟೆ ನಾವು ಗಮನಿಸಿದಂತಾಗುತ್ತದೆ ಎಂದು ಈ ಜೋಡಿ ಎಚ್ಚರಿಸಿದೆ.

ಈ ಲೇಖನ ಧ್ವನಿಪತ್ರಿಕೆಯ ರೂಪದಲ್ಲಿ ಜಾಣಸುದ್ದಿ (https://www.anchor.fm/kollegala) ಯಲ್ಲಿ ಪ್ರಕಟವಾಗಿದೆ.

ಕೊಳ್ಳೇಗಾಲ ಶರ್ಮ; 1885, ಶ್ರೀ ಲಕ್ಷ್ಮಿ, 30 ಅಡಿ ರಸ್ತೆ, 6ನೇ ಮೈನು, ಹಂಪಿ ವೃತ್ತದ ಸಮೀಪ, ಹೆಬ್ಬಾಳು 2 ನೆ ಹಂತ, ಮೈಸೂರು-570017; 9886640328

Journalist,Translator,avid bibliophile

Leave a Reply

Your email address will not be published. Required fields are marked *

Back To Top