ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕುದುರೆಮುಖ ಸುತ್ತಮುತ್ತ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ ನದಿಗಳು ಜೀವ ಕಳೆ ಪಡೆದಿವೆ. ಆದರೆ ಧಾರಾಕಾರ ಮಳೆಯಿಂದಾಗಿ ಮಲೆನಾಡು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸೌಂದರ್ಯದ ಚಿಲುಮೆ ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಚಾರ್ಮಾಡಿ ಘಾಟಿಯಲ್ಲಿರುವ ಫಾಲ್ಸ್‌ಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಫಾಲ್ಸ್‌ಗಳು ನೋಡುಗರನ್ನು ನಿಬ್ಬೆರಗಾಗಿಸುತ್ತಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನೂರಾರು ಫಾಲ್ಸ್‌ಗಳಿದ್ದು, ಘಟ್ಟಗಳಿಂದ ಹರಿಯುವ ನೀರಿನ ತೊರೆಗಳು ಜೀವಕಳೆ ಪಡೆದುಕೊಂಡು ಪ್ರಕೃತಿ ಸೌಂದರ್ಯ ಮೇಳೈಸಿದೆ. ಮಾನ್ಸೂನ್ ವೇಳೆಯಲ್ಲಿ ಜಲಪಾತಗಳ ಸೊಬಗು ನೋಡುವುದೇ ಒಂದು ಚೆಂದದ ಅನುಭವ. ಮತ್ತೆ ಚಾರ್ಮಾಡಿ ಘಾಟ್‌ನಲ್ಲಿ ಪ್ರಕೃತಿ ಸೌಂದರ್ಯ ಹಿಂದಿರುಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
****