ಈ ರಂಗವಲ್ಲಿಯಾಟ

ದಿವ್ಯಾ ಮಂಡೀರ

 

ಸಾವು ನೆಮ್ಮದಿಯಂತೆ
ಸುದೀರ್ಘ ಕತ್ತಲಲ್ಲಿ ನಿಶ್ಚಲವಾಗಿ ಮಲಗುವುದಂತೆ
ವಾಸ್ತವತೆಯ ಭೀಕರ ಕತ್ತಲನ್ನು ಮರೆತು
ಪ್ರೀತಿ, ಬದುಕು, ಹರಯ, ದ್ವೇಷ-ರೋಷಗಳ
ನಡುವೆ ಒಮ್ಮೆ ಸತ್ತು ನೋಡು ಎಂದಿದ್ದ
ಕವಿಯನ್ನೊಮ್ಮೆ ಕೇಳಬೇಕೆನ್ನಿಸಿದೆ

*

ಇದು ಹೊಲಿಗೆ ಸಂಬಂಧಗಳು ಇಲ್ಲಿ ಬದುಕಬೇಕು
ನೋವು, ನಿರಾಸೆ, ಭರವಸೆ, ಕನಸುಗಳನ್ನು ಕೇಳಿಕೊಳ್ಳಬೇಕು
ಈ ದ್ವಂದ್ವಗಳಿಗೆ ಒಂದಿಷ್ಟು ಉತ್ತರ
ಜಡ್ಡುಗಟ್ಟಿದ ಕಲ್ಲುಬಂಡೆಗೆಲ್ಲಿ ತಿಳಿಯಬೇಕು
ಕಲ್ಲುಬಾಳೆಯ ನವಿರು ಭಾವಗಳು
ರಾತ್ರಿಗಳು ಖಾಲಿಯಾಗುತ್ತಲೇ ಇವೆ
ಎದೆಯೊಳಗಿನ ಸಣ್ಣ ಭಯಕ್ಕೆ ಹರೆಯದ್ದು ನಿರ್ಲಿಪ್ತ ನಗು

*

ಒಳ್ಳೆಯತನವನ್ನು ಸಾಭೀತುಪಡಿಸಬೇಕೆಂದೇನಿಲ್ಲ
ಮನಃಸಾಕ್ಷಿಗೆ ಗೊತ್ತಿದೆ ಈ ರಂಗವಲ್ಲಿಯಾಟ
ನಿಗೂಢ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಕೇಳಿಕೋ
ಕಲ್ಲುಬಂಡೆಯಂತಿರೋ ಭಗವಂತನಲ್ಲಿ
ಇಲ್ಲಿ ನನ್ನದು ವಿಚಿತ್ರ ಅಹಂಕಾರ
ಹಸಿದಷ್ಟೂ ಉಪವಾಸ.

Journalist,Translator,avid bibliophile

Leave a Reply

Your email address will not be published. Required fields are marked *

Back To Top