ಪ್ರತಿ ಗ್ರಾಮ ಪಂಚಾಯಿತಿಗೂ ವಾರ್ಷಿಕ 1.50 ಕೋಟಿ ರೂ.ಅನುದಾನ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿ ಬದಲು ಗ್ರಾಮ ಪಂಚಾಯಿತಿಗೆ ವಹಿಸಲಾಗುತ್ತದೆ. 15ನೇ ಹಣಕಾಸು ಆಯೋಗ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹೆಚ್ಚು ಅನುದಾನ ನೀಡುವಂತೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ನೆರವು ಒದಗಿಸಲಾಗುವುದು. ಸರ್ಕಾರ ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲಿದೆ ಎಂದರು.
ಗ್ರಾಮಗಳಿಗೆ ಆರೋಗ್ಯ ವ್ಯವಸ್ಥೆ, ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಮತ್ತಿತರ ಮೂಲಸೌಲಭ್ಯ, ಕೆರೆ ಕುಂಟೆ ಸೇರಿದಂತೆ ಜಲಮೂಲಗಳ ಅಭಿವೃದ್ಧಿ ಇನ್ನಿತರ ಸೌಕರ್ಯ ಒದಗಿಸಲಾಗುವುದು.ಇದರಿಂದ ಗ್ರಾಮಗಳು ಸ್ವಾಯತ್ತ ಸರ್ಕಾರಗಳಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು. 6 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶೇ.30ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯ ಇತ್ತು. ಆದರೆ, ಸ್ವಚ್ಛ ಭಾರತ್ ಅಭಿಯಾನದಿಂದ ಇಂದು ಗ್ರಾಮದ ಎಲ್ಲ ಮನೆಯಲ್ಲೂ ಶೌಚಾಲಯಗಳನ್ನು ಕಾಣಬಹುದು ಎಂದರು.
Courtesyg: Google (photo)