ಗಾಂಧಿ ಹಾದಿಯ ನಿಜವಾದ ಪಥಿಕ ಮಾಧವ ಸಹಸ್ರಬುದ್ಧೆ

                                                                                                                                                                                                          ಮಾಧವ ಸಹಸ್ರಬುದ್ಧೆ

ಸಂತೋಷ ಕೌಲಗಿ

ಜನಪದ ಸೇವಾ ಟ್ರಸ್ಟ್

ಮೇಲುಕೋಟೆ-571431

ಸುಮಾರು ಹತ್ತು ವರ್ಷದ ಹಿಂದೆ ನಿವೃತ್ತಿಯ ಅಂಚಿನಲ್ಲಿದ್ದ ಒಬ್ಬ ಎಂಜಿನಿಯರ್‌ಗೆ ಸದಾಶಿವರಾವ್ ಭೋಸ್ಲೆ ಅವರ ಪರಿಚಯವಾಯಿತು. ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ವಾಸ ಮಾಡುವ 90 ವರ್ಷದ ಭೋಸ್ಲೆ, ಆ ವಯಸ್ಸಿನಲ್ಲೂ ಹೊಲಕ್ಕೆ ಹೋಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ 1 ತಾಸು ನೂಲು ತೆಗೆಯುತ್ತಿದ್ದರು. ಸ್ವಾತಂತ್ರ್ಯಯ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಶಾಸಕನಾಗಿ ಆಯ್ಕೆಗೊಂಡು, ಆನಂತರ ಭ್ರಮನಿರಸನಾಗಿ ನನ್ನ ಕೆಲಸ ಇದಲ್ಲ ಎಂದು ನಿರ್ಧರಿಸಿ, ಹಳ್ಳಿಗೆ ಹಿಂದಿರುಗಿ ಹೊಲದಲ್ಲಿ ದುಡಿಯುತ್ತ ವಿದಾಯಕ ಕೆಲಸ ಮಾಡುತ್ತಿದ್ದರು.

ಬದುಕಿನ ಅಂತಿಮ ಘಟ್ಟದಲ್ಲಿರುವ ಈ ವ್ಯಕ್ತಿ ಇಷ್ಟೊಂದು ಚಟುವಟಿಕೆ-ಉಲ್ಲಾಸದಿಂದ ಇರುವುದನ್ನು ಕಂಡ ಎಂಜಿನಿಯರ್‌ಗೆ ನೂಲು ತೆಗೆಯುವುದನ್ನು ಕಲಿತುಕೊಳ್ಳಬೇಕು ಎನಿಸಿತು. ಭೋಸ್ಲೆ ಅವರಲ್ಲಿ ಉಳಿದು, ಕೆಲವು ದಿನಗಳಲ್ಲಿ ನೂಲು ತೆಗೆಯುವುದನ್ನು ಕರಗತ ಮಾಡಿಕೊಂಡ ಆ ಯುವಕನೇ ಮಾಧವ ಸಹಸ್ರಬುದ್ದೆ. ನಿವೃತ್ತಿ ಬಳಿಕ ನೂಲುಗಾರಿಕೆಯನ್ನು ಬದುಕಿನ ಭಾಗವನ್ನಾಗಿ ಸ್ವೀಕರಿಸಿರುವ ಸಹಸ್ರಬುದ್ಧೆ, ಗಾಂಧಿ ತಲೆಮಾರಿನೊಂದಿಗೆ ಮಾಯವಾಗಿ ಹೋಗುತ್ತಿದ್ದ ಚರಕದಿಂದ ನೂಲು ತೆಗೆಯುವ ಕಲೆ ಮತ್ತು ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ. ಅವರು ನೂಲುವುದನ್ನು ನೋಡಿದ ಅನೇಕರು ಪ್ರೇರಿತರಾಗಿದ್ದಾರೆ. ದೇಶದ ಯಾವುದೇ ಮೂಲೆಯಿಂದ ಆಹ್ವಾನ ಬಂದರೂ ಅಲ್ಲಿಗೆ ಹೋಗುವ ಸಹಸ್ರಬುದ್ಧೆ, ನೂಲು ತೆಗೆಯುವ ಕಾರ್ಯಾಗಾರವನ್ನು ನಡೆಸುತ್ತಾರೆ. ಎರಡು ಸಾವಿರಕ್ಕೂ ಅಧಿಕ ಜನರು ನೂಲುವ ಕಾಯಕದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ. “ಪ್ರತಿ ದಿನ ಒಂದು ಗಂಟೆ ಕಾಲ ನೂಲುವುದರಿಂದ ನಿಮಗೆ ಅರಿವೆಗೆ ಬೇಕಾದಷ್ಟು ನೂಲನ್ನು ತೆಗೆಯಬಹುದು. ಇದು ನಿಜವಾದ ಆತ್ಮ ನಿರ್ಭರತೆ. ನೂಲುತ್ತ ನೂಲುತ್ತ ನೀವು ಬೇರೆಯದೇ ಲೋಕಕ್ಕೇ ಹೋಗಿಬಿಡುತ್ತೀರಿ. ಅದು ನಿಮ್ಮನ್ನು ಹೊಸ ಮನುಷ್ಯರನ್ನಾಗಿ ಮಾಡುತ್ತದೆ. ಆ ಮನುಷ್ಯ ಸರಳ, ಶ್ರಮದ, ಪಾರದರ್ಶಕವಾದ ಆತ್ಮತೃಪ್ತಿಯ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾನೆ,’ ಎನ್ನುತಾರೆ ಸಹಸ್ರಬುದ್ಧೆ.

ತಾವೂ ನೂಲು ತೆಗೆಯುತ್ತ, ಇತರರಿಗೂ ನೂಲು ತೆಗೆಯುವುದನ್ನು ಹೇಳಿ ಕೊಡುತ್ತ ಹೊಸ ತಲೆಮಾರಿಗೆ ಪರಿಸರದ ಪಾಠವನ್ನು ಮಾಧವ ಸಹಸ್ರಬುದ್ಧೆ ಮಾಡುತ್ತಾರೆ. ಶ್ರಮದ ಮಹತ್ವ ನಿಮಗೆ ಅರಿವಾಗುವಂತೆ ಮಾಡುತ್ತಾರೆ. ಆತ್ಮನಿರೀಕ್ಷೆಯಲ್ಲಿರುವ ಅನೇಕ ಯುವಜನರು ಇವರ ಶಿಬಿರಗಳಿಗೆ ಬರುತ್ತಾರೆ. ನೂಲು ತೆಗೆಯುವಿಕೆಯನ್ನು ಕರಗತಗೊಳಿಸಿಕೊಂಡು, ಬದುಕಿಗೆ ಹೊಸ ಅರ್ಥವನ್ನು ಕಂಡು ಕೊಳ್ಳುತ್ತಾರೆ. ಅವರು ನಡೆಸುವ ಶಿಬಿರಗಳಲ್ಲಿ ಮಾತಿಲ್ಲ. ಬರೀ ನೂಲುಗಾರಿಕೆ. ನೂಲು ತೆಗೆಯಲು ಪ್ರಾರಂಭಿಸಿದ ಮೊದಲ ಗಂಟೆಗಳು ತಲೆ ಚಿಟ್ಟು ಹಿಡಿಸುತ್ತವೆ. ಪ್ರತಿ ಎಳೆಯ ದಾರ ಕಿತ್ತು ಕಿತ್ತು ಹೋಗಿ, ಅಸಹಾಯಕ ಭಾವ ಕಾಡತೊಡಗುತ್ತದೆ. ಛಲ ಇಲ್ಲದಿದ್ದರೆ ಅಲ್ಲೇ ಚರಕಕ್ಕೆ ನಮಸ್ಕಾರ ಹಾಕಿ, ಮಂಗಳ ಹಾಡುತ್ತೀರಿ. ನೂಲುವಿಕೆಯನ್ನು ಕರಗತಗೊಳಿಸಿಕೊಳ್ಳಲೇ ಬೇಕು ಎಂಬ ದೃಢ ಸಂಕಲ್ಪ ನಿಮ್ಮದಾಗಿದ್ದರೆ, ಹೆಚ್ಚು ಹೆಚ್ಚು ಸೌಜನ್ಯದಿಂದ ವಿನೀತರಾಗುತ್ತೀರಿ. ಮುಂದಿನ ಕೆಲವೇ ಗಂಟೆಗಳಲ್ಲಿ ಹಸ್ತದಲ್ಲಿರುವ ಹತ್ತಿಯ ಉಂಡೆಯಿಂದದ ನೂಲು ಬರುತ್ತಾ ಹೋಗುತ್ತದೆ. ಬದುಕಿಗೊಂದು ಹೊಸ ಅರ್ಥ ಬರುತ್ತದೆ. ನಿಮ್ಮ ಬೆನ್ನ ಹಿಂದೆ ಯಾರೋ ನಿಂತಿರುವಂತೆ ಭಾಸವಾಗುತ್ತದೆ. ಅವರು ನಮ್ಮ ನಿಮ್ಮೆಲ್ಲರ ಪ್ರೀತಿಯ ಬಾಪೂ ಆಗಿರುತ್ತಾರೆ.ಹೊಸ ತಲೆಮಾರಿಗೆ ಬಾಪೂ ದರ್ಶನ ಮಾಡಿಸುತ್ತಿರುವ ಪುಣೆಯ ಮಾಧವ ಸಹಸ್ರಬುದ್ಧೆ ಗಾಂಧಿ ಹಾದಿಯ ನಿಜವಾದ ಪಥಿಕ.

Journalist,Translator,avid bibliophile

Leave a Reply

Your email address will not be published. Required fields are marked *

Back To Top