ಭಾರತ ಗ್ರಾಮೀಣ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಜೀವ

                                                                                                                                                                                                           ಜೆ.ಸಿ.ಕುಮಾರಪ್ಪ

ಸಂತೋಷ ಕೌಲಗಿ

ಜನಪದ ಸೇವಾ ಟ್ರಸ್ಟ್

ಮೇಲುಕೋಟೆ-571431

೧೯೨೯ರ ಮೇ ತಿಂಗಳಿನ ೯ ನೇ ದಿನ. ಅಹಮದಾಬಾದಿನಲ್ಲಿ ಸುಡು ಬೇಸಿಗೆ. ಮಧ್ಯಾಹ್ನ ೨.೩೦. ಸಾಬರಮತಿ ಆಶ್ರಮದ ಮರದ ಕೆಳಗೆ ಸಗಣಿ ಸಾರಿಸಿದ ನೆಲದ ಮೇಲೆ ಹಿರಿಯರೊಬ್ಬರು ಕುಳಿತು ನೂಲುತ್ತಿ ದ್ದಾರೆ. ಸುಡುಬಿಸಿಲಿನಲ್ಲೂ ಸೂಟು-ಬೂಟುಧಾರಿಯಾಗಿದ್ದ ಯುವಕನೊಬ್ಬ ಅವರು ನೂಲುವುದನ್ನೇ ದಿಟ್ಟಿಸುತ್ತ ನಿಂತಿದ್ದಾನೆ. ೨.೩೦ ಕ್ಕೆ ಸರಿಯಾಗಿ ಆ ಹಿರಿಯರು “ನೀವು ಕುಮಾರಪ್ಪ ಅವರೇ?”ಎಂದು ಕೇಳುತ್ತಾರೆ. ಅಲ್ಲಿಯವರೆಗೂ ನೂಲುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿಲ್ಲದೆ, ನೂಲುವುದನ್ನೇ ನೋಡುತ್ತ ನಿಂತಿದ್ದ ಸೂಟುಬೂಟುಧಾರಿಗೆ ತನ್ನನ್ನು ಮಾತನಾಡಿಸಿದ್ದು ಗಾಂಧೀಜಿ ಎಂದು ಗೊತ್ತಾಗುತ್ತದೆ. ತಡಬಡಾಯಿಸುತ್ತ ಮರು ಯೋಚನೆ ಮಾಡದೆ ಸಗಣಿ ನೆಲದ ಮೇಲೆಯೇ ಕೂರುತ್ತಾರೆ. ಮುಂದಿನ ೩೧ ವರ್ಷಗಳ ಕಾಲ ಗಾಂಧಿ ಅನುಯಾಯಿಯಾಗಿ, ತನ್ನನ್ನು ಗ್ರಾಮೀಣ ಭಾರತದ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಸಂಕಲ್ಪ ಶಕ್ತಿಯ ಆ ವ್ಯಕ್ತಿ ಜೆ.ಸಿ.ಕುಮಾರಪ್ಪ.
ತಮಿಳುನಾಡಿನ ಸುಶಿಕ್ಷಿತ ಕುಟುಂಬದಿAದ ಬಂದ ಜೋಸೆಫ್ ಕಾರ್ನಿಲಿಯಸ್ ಕುಮಾರಪ್ಪ,  ಇಂಗ್ಲೆಂಡ್ ಮತ್ತು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಓದಿದವರು. ಗಾಂಧಿಯವರ ವಿಚಾರದಿಂದಾಗಿ ಗ್ರಾಮ ಸಂಸ್ಕೃತಿ ಎಂದರೆ ಸರಳ ಜೀವನ ಮತ್ತು ಉದಾತ್ತ ಚಿಂತನೆ ಎಂದು ಅರಿತ ಕುಮಾರಪ್ಪ, ವಿಕೇಂದ್ರಿಕೃತ ಮತ್ತು ಮನುಷ್ಯನಿಗೊಂದು ಗೌರವ ತರುವ ಯುಕ್ತ ತಂತ್ರಜ್ಞಾನಗಳ ಶೋಧನೆ ಮತ್ತು ಈ ವಿಚಾರಕ್ಕೊಂದು ತಾತ್ವಿಕ ನೆಲೆಗಟ್ಟು ಒದಗಿಸಲು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟರು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗಾಂಧೀಜಿಯವರ ವಿಚಾರಗಳಿಗೆ ಸೈದ್ಧಾಂತಿಕ ನೆಲೆಗಟ್ಟು ಒದಗಿಸಿ ಕೊಟ್ಟವರಲ್ಲಿ ಅವರು ಪ್ರಮುಖರು. ಸಮಾಜದಲ್ಲಿ ಶ್ರಮಜೀವಿಗಳದೇ ಬಹುಸಂಖ್ಯೆ. ಅವರೇ ಸಮಾಜಕ್ಕೆ ಮುಖ್ಯ ಆಧಾರ. ಅವರೊಡನೆ ನಮ್ಮ ಜೀವನ ಸುಮಧುರವಾಗಿ ಬೆರೆತು ಹೋಗಬೇಕು. ಬುದ್ಧಿ ಜೀವಿಗಳ ಪ್ರತ್ಯೇಕ ವರ್ಗ ನಿರ್ಮಾಣವಾಗಬಾರದು. ಶ್ರಮಿಕರ ಬೆನ್ನ ಮೇಲೆ ಸವಾರಿ ಮಾಡುವ ನಾಗರಿಕ ಸಮಾಜ ಮನುಷ್ಯರಿಗೆ ಭೂಷಣವಲ್ಲ ಎಂಬುದನ್ನು ಖಚಿತವಾಗಿ “ಕಾಯಕದ ತತ್ವಜ್ಞಾನ’ ಪುಸ್ತಕದಲ್ಲಿ ಪ್ರತಿಪಾದಿಸಿದರು. “ಗ್ರಾಮೀಣ ಚಳವಳಿ ಏಕೆ?” ಎಂಬ ಪುಸ್ತಕ ಬರೆದರು. ಗಾಂಧೀಜಿಯವರ ಆರ್ಥಿಕ ವಿಚಾರಗಳಿಗೆ ಸರಿಯಾದ ರೂಪ ಕೊಟ್ಟ ಅವರ ಪುಸ್ತಕ “ಶಾಶ್ವತ ಅರ್ಥಶಾಸ್ತ್ರ’ ಅತ್ಯಂತ ಸುಪ್ರಸಿದ್ಧ ಕೃತಿ. ೧೯೪೫ ರಲ್ಲಿ ಪ್ರಕಟಗೊಂಡ ಈ ಪುಸ್ತಕವನ್ನು ಜನರು ಎಂದೋ ಮರೆತು ಬಿಟ್ಟಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದ ಇತಿ ಮಿತಿಗಳು ಗೊತ್ತಾದ ಬಳಿಕ ಯುವ ಜನರಿಗೆ ಈ ಪುಸ್ತಕ ಅತ್ಯಂತ ಪ್ರಿಯವಾಗಿದೆ. ಕಳೆದ ಮರ‍್ನಾಲ್ಕು ತಲೆಮಾರು ಮರೆತು ಹೋಗಿದ್ದ ಕುಮಾರಪ್ಪನವರು ಈ ತಲೆಮಾರಿಗೆ ಪ್ರಿಯವಾಗತೊಡಗಿದ್ದಾರೆ. ಏಕೆಂದರೆ, ಅವರು ಶಾಶ್ವತವಾದ್ದದ್ದನ್ನು ಹೇಳಿದ್ದಾರೆ.
ತಮ್ಮ ಬದುಕನ್ನು ಗಾಂಧಿ ಪ್ರಣೀತ ರಚನಾತ್ಮಕ ಕಾರ್ಯಗಳಿಗೆ ಮುಡುಪಿಡಲು ತೀರ್ಮಾನಿಸಿದ ಕುಮಾರಪ್ಪನವರು ವಾರ್ಧಾ ಬಳಿಯ ಮಗನವಾಡಿಯಲ್ಲಿ ನೆಲೆಸಿ, ಗ್ರಾಮೋದ್ಯೋಗ ಸಂಘದ ಹೊಣೆ ಹೊತ್ತು ಕೊಂಡರು. ಗ್ರಾಮೀಣ ಭಾರತದಲ್ಲಿ ಭೂಮಿ ಉಳ್ಳವರಿಗಾಗಲಿ, ಭೂಹೀನರಿಗಾಗಲಿ ಕೃಷಿ ಕೇವಲ ೪-೫ ತಿಂಗಳು ಕೆಲಸ ಒದಗಿಸುತ್ತದೆ. ಮಿಕ್ಕಂತೆ ಅವರಿಗೆ ಜೀವನೋಪಾಯವೇ ಇಲ್ಲ. ಅದಕ್ಕೆ ಪರಿಹಾರ ಖಾದಿ ಮತ್ತು ಗ್ರಾಮೋದ್ಯೋಗದಲ್ಲಿದೆ ಎಂಬ ಅಚಲ ನಂಬಿಕೆಯಿಂದ ಮುಂದಿನ ೨೫ ವರ್ಷ ಈ ಕ್ಷೇತ್ರಗಳ ಉನ್ನತಿಗಾಗಿ ದುಡಿದ ಅವರು, ೧೯೬೦ ಜನವರಿ ೩೦ ರಂದು ಗಾಂಧೀಜಿಯವರ ಹನ್ನೆರಡನೇ ಪುಣ್ಯತಿಥಿಯಂದು ಸ್ವರ್ಗಸ್ಥರಾದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top