ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್ಲೈನ್ನಲ್ಲೇ ‘ಲೈವ್’ ಪ್ರದರ್ಶನ ಕಂಡಿವೆ. ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದಾಗ ಯಕ್ಷಗಾನ ಪ್ರೇಕ್ಷಕರಿಗೆ ಆಸರೆಯಾಗಿದ್ದು ಆನ್ಲೈನ್. ಬಡಗುತಿಟ್ಟಿನ ಮೊದಲ ಆನ್ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ ಹೆಗ್ಗಳಿಕೆಯ ಬೆಂಗಳೂರಿನ ‘ಟೀಂ ಉತ್ಸಾಹಿ’, ಒಂದು ಹೆಜ್ಜೆ ಮುಂದೆ ಹೋಗಿ, ಯಕ್ಷಗಾನ ಗುರುಗಳಿಗೆ ಸನ್ಮಾನವನ್ನೂ ಏರ್ಪಡಿಸಿತ್ತು, ಆನ್ಲೈನ್ನಲ್ಲಿ ಪ್ರಸಾರ ಮಾಡಿದೆ. ತಿಂಗಳಿಗೆ ಕನಿಷ್ಠ ಎರಡು ಪ್ರದರ್ಶನಗಳನ್ನು ಆನ್ಲೈನ್ನಲ್ಲೇ ಈ ತಂಡವು ಪ್ರದರ್ಶಿಸಿದೆ. ಪ್ರಖ್ಯಾತ ಹವ್ಯಾಸಿ,ವೃತ್ತಿ ಕಲಾವಿದರಾದ ಎ.ಪಿ.ಪಾಠಕ್, ಸುಬ್ರಾಯ ಹೆಬ್ಬಾರ್, ಪಲ್ಲವ ಗಾಣಿಗ ಹೇರಂಜಾಲು, ನಾರಾಯಣ ಹೆಬ್ಬಾರ್, ಶ್ರೀನಿವಾಸ ಪ್ರಭು, ಮನೋಜ್ ಆಚಾರ್, ವಿನಯ ಶೆಟ್ಟಿ, ಪ್ರಶಾಂತ ವರ್ಧನ, ಮಂಜು ಹವ್ಯಕ, ನಾಗೇಶ್ ಜಿ.ಎಸ್., ವಿನಯ ಹೊಸ್ತೋಟ, ಶಿಥಿಲ್ ಶೆಟ್ಟಿ, ಮಾನಸ ಉಪಾಧ್ಯ, ನಿಹಾರಿಕಾ ಭಟ್, ಭರತ್ರಾಜ್ ಪರ್ಕಳ ಮುಂತಾದವರ ತಂಡದವರು ಪ್ರದರ್ಶನ ನೀಡುತ್ತಿದ್ದಾರೆ.
Courtesyg: Google (photo)