ಸಿಇಟಿ, ನೀಟ್‌ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಕೋಚಿಂಗ್ : ʼಗೆಟ್‌-ಸೆಟ್‌ ಗೋʼ ವ್ಯವಸ್ಥೆಗೆ CM ಯಡಿಯೂರಪ್ಪ ಚಾಲನೆ

ಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ʼಗೆಟ್‌-ಸೆಟ್‌ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್‌-ಸೆಟ್‌ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; ‘ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಉಪ ಕ್ರಮದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ; ಸಮಗ್ರ ಕಲಿಕಾ ವ್ಯವಸ್ಥೆ‌ (ಎಲ್‌ಎಂಎಸ್) ಕೂಡ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರ ಕೈಗೊಂಡ ಕ್ರಮಗಳು ಮೆಚ್ವುವಂತಹದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು

ಈ ಸಂದರ್ಭದಲ್ಲಿ ʼಗೆಟ್‌ ಸೆಟ್‌ ಗೋʼ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು; ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ʼಗೆಟ್‌ ಸೆಟ್‌ ಗೋʼ ಮೂಲಕ ಕೋಚಿಂಗ್‌ ವ್ಯವಸ್ಥೆ ಇರುತ್ತದೆ’ ಎಂದರು.

ಐಐಟಿಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಹೆಜ್ಜೆ ಇಡಲಾಗುತ್ತಿದೆ. ಜೆಇಇ, ನೀಟ್‌ ಪರೀಕ್ಷೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚು ರಾಂಕ್‌ಗಳನ್ನು ಪಡೆಯುವ ನಿಟ್ಟಿನಲ್ಲಿ ಇದು ಸಹಕಾರಿ ಆಗಲಿದೆ. ಜತೆಗೆ; ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಗೆಟ್‌ ಸೆಟ್‌ ಗೋ ಮೂಲಕ ಅಧ್ಯಯನ ಮಾಡಬಹುದು ಎಂದು ಡಿಸಿಎಂ ಹೇಳಿದರು.

ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ʼಗೆಟ್‌ ಸೆಟ್‌ ಗೋʼ ಕೋಚಿಂಗ್‌ ವ್ಯವಸ್ಥೆ ರೂಪಿಸಲಾಗಿದ್ದು, ಇದರಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅತ್ಯಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೋಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಇಡೀ ದೇಶದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇಂಥ ಉಪಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಆಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಗೆಟ್‌ ಸೆಟ್‌ ಗೋʼ ಆನ್‌ಲೈನ್‌ ಫ್ಲಾಟ್‌ಫಾರಂಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಕರ್ನಾಟಕವೂ ಸೇರಿದಂತೆ ಸಿಇಟಿ ಬರೆಯಲಿಚ್ಚಿಸುವ ದೇಶದ ಯಾವ ವಿದ್ಯಾರ್ಥಿ ಬೇಕಾದರೂ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್‌ ಮಾಡಬಹುದು. ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ಗೆಟ್‌ ಸೆಟ್‌ ಗೋ ಆಪ್‌ ಮೂಲಕ ಕೋಚಿಂಗ್‌ ಪಡೆಯಬಹುದು. ಈ ಆಪ್‌ ಅಂಡ್ರಾಯಿಡ್‌, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್‌ ಆಪ್ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಇದೆ‌. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟ್, ಗೂಗಲ್ ಪ್ಲೇಸ್ಟೋರ್ ಆಯಂಡ್ರಾಯ್ಡ್ ಆಪ್ GetCETGO ಮೂಲಕ ಮಾಹಿತಿ ಪಡೆಯಬಹುದು ಹಾಗೂ ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.

ಕಳೆದ ವರ್ಷ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆಯವರೇ ಈ ವರ್ಷವೂ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಕೋವಿಡ್‌ ಸಂಕಷ್ದದಿಂದ ಹೊರಬಾರದ ಹಿನ್ನೆಲೆಯಲ್ಲಿ ಸರಕಾರ ʼಗೆಟ್‌-ಸೆಟ್‌ ಗೋʼ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅತ್ಯುತ್ತಮ ಕೋಚಿಂಗ್‌ ನೀಡಲಾಗುವುದು ಎಂದು ಅವರು ತಿಳಿಸಿದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top