ಪಶ್ಚಿಮ ಬಂಗಾಳ ಹಾಗೂ ಒಡಿಷಾಕ್ಕೆ ಅಪ್ಪಳಿಸಿರುವ ಯಸ್, ಅಪಾರ ಪ್ರಾಣ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದೆ. ಒಡಿಷಾದಲ್ಲಿ ನಾಲ್ಕು ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬರು ಪ್ರಾಣ ತೆತ್ತಿದ್ದಾರೆ.
ಪೂರ್ವ ಕರಾವಳಿಯ ಪಶ್ಚಿಮ ಬಂಗಾಳ ಹಾಗೂ ಒಡಿಷಾದ ಗಡಿ ಪ್ರದೇಶದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ. ಒಡಿಷಾದ ಬಾಲಸೋರ್ ಹಾಗೂ ಭದ್ರಕ್ ಜಿಲ್ಲೆಗಳ 128 ಗ್ರಾಮಗಳಿಗೆ ಸಮುದ್ರದ ನೀರು ನುಗ್ಗಿದೆ. ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಡಿಷಾದಲ್ಲಿ 6.5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಒಡಿಷಾ ಕರಾವಳಿಯ ಬಾಲಸೋರ್‍ನ ದಕ್ಷಿಣದಿಂದ ಚಂಡಮಾರುತ 130-140 ಕಿಮೀ ವೇಗದಲ್ಲಿ ಪ್ರವೇಶಿಸಿತು. ಸಮುದ್ರದಲ್ಲಿ 4 ಮೀಟರ್‍ಗೂ ಎತ್ತರದ ಅಲೆಗಳು ಎದ್ದವು. ಆದರೆ, ತೀವ್ರತೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಇತ್ತು. ಮಧ್ಯಾನ್ಹ ಮಯೂರ್‍ಗಂಜ್ ಜಿಲ್ಲೆಯನ್ನು ಪ್ರವೇಶಿಸಿದ್ದು, ಭಾರಿ ಮಳೆಗೆ ಕಾರಣವಾಯಿತು. ಎರಡೂ ರಾಜ್ಯಗಳಲ್ಲಿ ಸಾವಿರಾರು ಭಾರಿ ಗಾತ್ರದ ಮರಗಳು ಎಲ್ಲೆಡೆ ಉರುಳಿವೆ. ಪಶ್ಚಿಮ ಬಂಗಾಳದಲ್ಲಿ ಮೂರು ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಒಡಿಷಾ ಮುಖ್ಯಮಂತ್ರಿ ನವೀನ್ ಪಟ್ಯಾಯಕ್, ಹಾನಿಗೀಡಾದ ಎಲ್ಲ ಕುಟುಂಬಗಳಿಗೆ ಒಂದು ವಾರ ಕಾಲ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ. ಎಲ್ಲ ಮುಖ್ಯ ರಸ್ತೆಗಳ ದುರಸ್ತಿಗೆ ಆದೇಶಿಸಿದ್ದು, 24 ಗಂಟೆಗಳೊಳಗೆ ವಿದ್ಯುತ್ ಸಂಚಾರ ಮರುಸ್ಥಾಪಿಸಬೇಕು ಎಂದು ಆದೇಶಿಸಿದ್ದಾರೆ.
****