ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ ನಾವು ನಡೆಸಿದ ಹೆಣ್ಣು ಭ್ರೂಣ ಹತ್ಯೆ ಎನ್ನುವುದು.
ಉತ್ತರ ಕನ್ನಡ, ಮಂಡ್ಯ-ಮೈಸೂರು, ಬೆಳಗಾವಿ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಇದಕ್ಕೆ ಕಾರಣ. ಇದು ಒಂದು ದಿನದಲ್ಲಿ ಸೃಷ್ಟಿಯಾದ ಪರಿಸ್ಥಿತಿಯಲ್ಲ. ವಂಶವನ್ನು ಬೆಳೆಸಲು ಗಂಡು ಮಕ್ಕಳೇ ಬೇಕೆಂಬ ಹಲುಬುವಿಕೆಯ ಪ್ರತಿಫಲ ಇದು. ಮಂಡ್ಯದಲ್ಲಿ ಕಳೆದ ತಿಂಗಳು ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆಗೆ ಸಂಬಂಧಿಸಿದಂತೆ ಹಲವರ ಬಂಧನ ನಡೆಯಿತು. ಈ ಖೂಳರು ಕಳೆದ ೩ ವರ್ಷದಲ್ಲಿ ೯೦೦ಕ್ಕೂ ಅಧಿಕ ಗರ್ಭಪಾತ ಮಾಡಿಸಿದ್ದರು ಮತ್ತು ಆರೋಪಿಗಳಲ್ಲಿ ಒಬ್ಬರಾದ ಡಾ. ಸತೀಶ್ ಆತ್ಮಹತ್ಯೆ ಮಾಡಿಕೊಂಡರು.
ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಮಹಿಳೆಯರಿಗೆ ಹಿಂಸೆ, ಸಾಮಾಜಿಕ ಬಹಿಷ್ಕಾರವಲ್ಲದೆ, ಸತತ ಒತ್ತಡ ಹೇರಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ಎರಡು ಆತ್ಮಹತ್ಯೆ ಪ್ರಕರಣಗಳು ನಡೆದವು. ಆಗಸ್ಟ್‌ನಲ್ಲಿ ತಾಯಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ಕೊಟ್ಟ ೨೧ ದಿನಗಳ ಬಳಿಕ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗುವಿನ ಸಮೇತ ಬಾವಿಗೆ ಜಿಗಿದಳು. ಮಕ್ಕಳು ಮೃತಪಟ್ಟ ವು; ಆದರೆ, ತಾಯಿಯನ್ನು ರಕ್ಷಿಸಲಾಯಿತು. ಕಾರಣ ಈವರೆಗೆ ಗೊತ್ತಾಗಿಲ್ಲ.
೨೦೧೬-೨೦೨೦ರ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಲಿಂಗಾನುಪಾತ ಗಮನಾರ್ಹವಾಗಿ ಕುಸಿತ ಕಂಡ ೯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ದಕ್ಷಿಣ ಭಾರತದಲ್ಲಿ ತೆಲಂಗಾಣ ಹೊರತುಪಡಿಸಿದರೆ, ರಾಜ್ಯ ಅತಿ ಕಡಿಮೆ ಲಿಂಗಾನುಪಾತ ಹೊಂದಿದೆ. ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣದ ಗರ್ಭಪಾತದಲ್ಲಿ ಬೆಳಗಾವಿ ಮೊದಲ ಸ್ಥಾನ, ಮಂಡ್ಯ ಎರಡನೆಯ ಹಾಗೂ ಬಾಗಲಕೋಟೆ ಇತ್ತೀಚೆಗೆ ಮೂರನೇ ಸ್ಥಾನಕ್ಕೆ ಸೇರ್ಪಡೆ ಆಗಿದೆ. ಪಿಡುಗು ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ಸರ್ಕಾರದ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ದತ್ತಾಂಶದ ಪ್ರಕಾರ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕ ಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ವಿಜಯಪುರ ಜಿಲ್ಲೆಗಳು ಮಾತ್ರ ಆರೋಗ್ಯಕರ ಲಿಂಗಾನುಪಾತ ಹೊಂದಿವೆ; ವಿಜಯಪುರ(ಗಂಡು-ಹೆಣ್ಣು ಅನುಪಾತ ೯೩೦-೯೨೯), ಹಾವೇರಿ ೯೩೩- ೯೫೧, ಶಿವಮೊಗ್ಗ ೯೧೪-೯೫೮, ಉಡುಪಿ ೯೫೨-೯೬೭, ಚಿಕ್ಕಮಗಳೂರು ೯೪೦-೯೫೬, ಚಾಮರಾಜನಗರ ೯೨೧-೯೭೪ ಹೊರತುಪಡಿಸಿದರೆ, ಉಳಿದೆಲ್ಲ ಜಿಲ್ಲೆಗಳಲ್ಲಿ ಲಿಂಗಾನುಪಾತ ಕಡಿಮೆ ಇದೆ. ಐದು ಜಿಲ್ಲೆಗಳು, ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಕಲಬುರಗಿ, ಬೀದರ್, ಕೆಂಪು ಪಟ್ಟಿಯಲ್ಲಿವೆ(೧,೦೦೦ ಗಂಡು ಮಕ್ಕಳಿಗೆ ೯೦೦ಕ್ಕಿಂತ ಕಡಿಮೆ ಹೆಣ್ಣುಮಕ್ಕಳು). ಮಂಡ್ಯದಲ್ಲಿ ಗಂಡು-ಹೆಣ್ಣು (೮೭೧-೮೭೭)ಎರಡರ ಸಂಖ್ಯೆಯೂ ಕಡಿಮೆ ಇದೆ.
ʻಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮೊನ್ನೆಯ ಘಟನೆಯಿಂದ ಮುನ್ನೆಲೆಗೆ ಬಂದಿದೆ ಅಷ್ಟೆ. ನಾವು ಸಣ್ಣವರಿದ್ದಾಗ ನವಜಾತ ಹೆಣ್ಣು ಶಿಶುಗಳಿಗೆ ಗಂಜಲ ಕುಡಿಸಿ, ಹತ್ಯೆ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ ಲಿಂಗಾನುಪಾತ ಕೆಳ ಮಟ್ಟಕ್ಕೆ ಕುಸಿದಿದೆ. ಒಂದು ಅಂದಾಜಿನ ಪ್ರಕಾರ, ಮಂಡ್ಯ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ೩೦-೪೦ ಅವಿವಾಹಿತ ಯುವಕರಿ ದ್ದಾರೆ. ನಮ್ಮ ಊರಿನಲ್ಲಿರುವ ೮೦ ಕುಟುಂಬಗಳಲ್ಲಿ ೪೦ ಅವಿವಾಹಿತ ಯುವಕರಿದ್ದಾರೆʼ ಎನ್ನುತ್ತಾರೆ ಉದಯಕಾಲ ದಿನಪತ್ರಿಕೆ ಸಂಪಾದಕ ಕೆ.ಎನ್.ಪುಟ್ಟಲಿಂಗಯ್ಯ.
ಪತ್ರಕರ್ತ ನಂದಕುಮಾರ್ ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ: ರಾಮನಗರ ಜಿಲ್ಲೆಯಲ್ಲಿ ೨೦೨೨ರಲ್ಲಿ ೧೨ ಭ್ರೂಣಹತ್ಯೆ ಪ್ರಕರಣಗಳು ನಡೆದಿದ್ದು, ಎಫ್‌ಐಆರ್ ಆಗಿದೆ. ಮಾಗಡಿ ಮತ್ತು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲೇ ಇಂಥ ಘಟನೆ ನಡೆದಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಪರಿಶೀಲನೆ ಮತ್ತು ಅವಲೋಕನ ಸಮಿತಿ ದಾಖಲೀಕರಣ ಕೆಲಸ ಮಾಡುತ್ತಿದೆಯೇ ಹೊರತು ಜಾಗೃತಿ ಮೂಡಿಸುತ್ತಿಲ್ಲ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಕನಿಷ್ಠ ೩೦-೪೦ ಮಂದಿ ಅವಿವಾಹಿತ ಯುವಕರು ಇದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಆದಿಚುಂಚನ ಮಠ ಏರ್ಪಡಿಸಿದ್ದ ಸಮಾವೇಶದಲ್ಲಿ ೧೦,೦೦೦ ಯುವಕರಿಗೆ ಪ್ರತಿಯಾಗಿ ೩೦೦ ಯುವತಿಯರು ಮಾತ್ರ ಪಾಲ್ಗೊಂಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಯುವಕರಿಗೆ ಮದುವೆ ಮಾಡಿಸುವ ಆಶ್ವಾಸನೆ ನೀಡಿ ದ್ದವು.
ಕಾನೂನು ಹಿನ್ನೆಲೆ: ೧೯೮೮ರಲ್ಲಿ ಮಹಾರಾಷ್ಟ್ರದಲ್ಲಿ ಲಿಂಗ ಪತ್ತೆ ಪರೀಕ್ಷೆಯನ್ನು ನಿರ್ಬಂಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಇದು ದೇಶದ ಇಂಥ ಮೊದಲ ಕಾಯಿದೆ. ಗರ್ಭಪೂರ್ವ ಮತ್ತು ಗರ್ಭಾವಸ್ಥೆ ಪರಿಶೋಧನೆ ತಂತ್ರಗಳ ಕಾಯಿದೆ(ಪಿಸಿ-ಪಿಎನ್‌ಡಿಟಿ ಕಾಯಿದೆ) ೧೯೯೪ರಲ್ಲಿ ಜಾರಿಗೊಂಡಿತು. ಕಾಯಿದೆಯು ಗರ್ಭಾವಸ್ಥೆಯಲ್ಲಿ ಲಿಂಗ ಪತ್ತೆಯನ್ನು ನಿಷೇಧಿಸುತ್ತದೆ. ವಂಶವಾಹಿ ದೋಷಗಳು, ಚಯಾಪಚಯ ರೋಗಗಳು, ವರ್ಣತಂತುಗಳ ದೋಷ, ಜನ್ಮಜಾತ ರೋಗಗಳು ಮತ್ತು ಲಿಂಗಕ್ಕೆ ಸಂಬಂಧಿಸಿದ ರೋಗಗಳ ಪತ್ತೆಗೆ ಮಾತ್ರ ಸ್ಕ್ಯಾನಿಂಗ್‌ನ್ನು ಬಳಸಬಹುದು. ಆದರೆ, ಕಾಯಿದೆಯ ಅನುಷ್ಠಾನ ಸಮರ್ಪಕವಾಗಿಲ್ಲ. ಆಡಳಿತದ ನಿರ್ಲಕ್ಯ್ಯ ಮತ್ತು ಸಮಾಜದ ಪಿತೃಪ್ರಧಾನತೆ ಮನಸ್ಥಿತಿಯಿಂದಾಗಿ ಲಿಂಗಪತ್ತೆ ಪ್ರಕರಣಗಳ ದಾಖಲು ಹಾಗೂ ಶಿಕ್ಷೆ ಎರಡರ ಪ್ರಮಾಣವೂ ಕಡಿಮೆ ಯಿದೆ. ದೇಶದಾದ್ಯಂತ ೨೦೧೭ರವರೆಗೆ ೩,೯೮೬ ಪ್ರಕರಣಗಳು ದಾಖಲಾಗಿದ್ದು, ೪೪೬ ಮಂದಿಗೆ ಶಿಕ್ಷೆಯಾಗಿದೆ ಮತ್ತು ೧೩೬ ವೈದ್ಯರನ್ನು ಅಮಾನತುಗೊಳಿಸಲಾಗಿದೆ. ರಾಜ್ಯದಲ್ಲಿ ದಾಖಲಾಗಿರುವುದು ೧೦೦ ಪ್ರಕರಣ ಮಾತ್ರ; ೧೫ರಲ್ಲಿ ಶಿಕ್ಷೆ ಮತ್ತು ೨೪ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಜಿಲ್ಲಾ ಪರಿಶೀಲನೆ ಮತ್ತು ಅವಲೋಕನ ಸಮಿತಿ(ಡಿಐಎಂಸಿ)ಗಳನ್ನು ರಚಿಸಿ ದ್ದರೂ, ಇಲಾಖೆಯ ನಿರ್ಲಕ್ಷ್ಯ ಮತ್ತು ಸಮಿತಿಯ ಸದಸ್ಯರಿಗೆ ಕಾನೂನಿನ ಅರಿವು ಇಲ್ಲವಾದ್ದರಿಂದ, ಈ ಸಮಿತಿಗಳು ನಿಷ್ಪ್ರಯೋಜಕವಾಗಿವೆ.
ಗರ್ಭಿಣಿಯರು ತಾಯಿಯ ಸಮಗ್ರ ಆರೋಗ್ಯ ರಕ್ಷಣೆಗೆ ಸರ್ಕಾರ ನೀಡುವ ʻತಾಯಿʼ ಕಾರ್ಡ್‌ಗೆ ತಡವಾಗಿ ಅರ್ಜಿ ಸಲ್ಲಿಸುವುದಿದೆ. ಗರ್ಭಧಾರಣೆ ಖಾತ್ರಿಯಲ್ಲಿ ವಿಳಂಬ ಇದಕ್ಕೆ ಒಂದು ಕಾರಣ; ಆದರೆ, ಭ್ರೂಣದ ಲಿಂಗ ಪತ್ತೆ ಪರೀಕ್ಷೆ ಮಾಡಿಸಿ ಜನಿಸಲಿರುವುದು ಗಂಡು ಎಂದು ಖಾತ್ರಿಯಾದ ಬಳಿಕ ತಾಯಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರೂ ಇದ್ದಾರೆ.
ಹೆಣ್ಣುಮಕ್ಕಳ ಕಣ್ಮರೆಗೆ ಹಲವು ಕಾರಣ:
ಪಿತೃ ಪ್ರಧಾನತೆ, ವಂಶವನ್ನು ಮುಂದುವರಿಸಲು ಗಂಡುಮಕ್ಕಳು ಬೇಕು ಎಂಬ ಆಧಾರರಹಿತ ನಂಬಿಕೆ, ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬ ಭೀತಿ, ಹೆಣ್ಣುಮಕ್ಕಳಿಗೆ ಆರ್ಥಿಕ/ಸಾಮಾಜಿಕ ಅಂತಸ್ತು ಇಲ್ಲದೆ ಇರುವುದು, ಕೃಷಿಯಲ್ಲಿ ಮಹಿಳೆಯರ ಪ್ರಾಧಾನ್ಯದ ಕುಸಿತ, ಕಾನೂನಿನ ಅನುಷ್ಠಾನದಲ್ಲಿ ವೈಫಲ್ಯ, ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಭೀತಿ ಹಾಗೂ ಶಿಕ್ಷಿತ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳುತ್ತಾರೆ ಎಂಬ ಆತಂಕ ಬಾಲಕಿಯರನ್ನು ಸಾವಿನ ಉರುಳಿಗೆ ತಳ್ಳಿದೆ.
೧೯೭೦ರಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಆರಂಭವಾದ ಬಳಿಕ ೬೩ ದಶಲಕ್ಷ ಹೆಣ್ಣುಮಕ್ಕಳು ಕಡಿಮೆಯಾಗಿದ್ದಾರೆ. ಸಂಶೋಧಕರ ಪ್ರಕಾರ, ೨೦೩೦ರೊಳಗೆ ಇಂಥ ಗರ್ಭಪಾತಗಳಿಂದ ೬.೮ ಲಕ್ಷ ಹೆಣ್ಣುಮಕ್ಕಳು ಇಲ್ಲವಾಗಲಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಕೊರತೆ ಕಂಡುಬರಲಿದೆ(ಮಾಹಿತಿ-ಜನಗಣತಿ ೨೦೧೧,ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ೪ ಮತ್ತು ೫, ನಾಗರಿಕ ನೋಂದಣಿ ವ್ಯವಸ್ಥೆ). ಇದನ್ನು ಅಂಗೀಕರಿಸುವ ಪ್ಯೂ ರಿಸರ್ಚ್ ಕೇಂದ್ರದ ವರದಿ ಪ್ರಕಾರ, ಭ್ರೂಣ ಹತ್ಯೆಯಿಂದ ಹಿಂದು ಸಮುದಾಯದ ಹೆಣ್ಣು ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಕಣ್ಮರೆಯಾಗಿದ್ದಾರೆ. ಕೇಂದ್ರ ಸರ್ಕಾರದ ೫ ಮತ್ತು ೬ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ವರದಿಯನ್ನು ಆಧರಿಸಿರುವ ಈ ವರದಿಯು ೨೦೦೦-೨೦೧೯ರ ಅವಧಿಯಲ್ಲಿ ೯ ದಶಲಕ್ಷ ಹೆಣ್ಣುಮಕ್ಕಳು ಭ್ರೂಣಹತ್ಯೆಯಿಂದ ಕಣ್ಮರೆಯಾಗಿದ್ದಾರೆ. ಈ ಸಂಖ್ಯೆ ಉತ್ತರಾಖಂಡದ ಒಟ್ಟು ಜನಸಂಖ್ಯೆಗಿಂತ ಸ್ವಲ್ಪ ಕಡಿಮೆ ಎಂದು ಹೇಳಿದೆ.
ಈ ಹೆಣ್ಣು ಮಕ್ಕಳನ್ನು ʻಕಣ್ಮರೆಯಾದವರುʼ ಎನ್ನಲು ಕಾರಣವೇನೆಂದರೆ, ಒಂದು ವೇಳೆ ಜನಿಸಿದ್ದರೆ ಅವರು ಜನಸಂಖ್ಯೆಯ ಭಾಗವಾಗಿರುತ್ತಿದ್ದರು; ಗರ್ಭಪಾತದಿಂದ ಅವರು ಇಲ್ಲವಾದರು. ಹಿಂದು ೭.೮ ದಶಲಕ್ಷ, ಸಿಖ್ಖರು ೪.೪ ಲಕ್ಷ, ಮುಸ್ಲಿಮರು ೪.೪ ಲಕ್ಷ ಮತ್ತು ಕ್ರಿಶ್ಚಿಯನ್ನರ ೫೦,೦೦೦ ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ಇದರಿಂದ ಹೆಣ್ಣು-ಗಂಡು ಅನುಪಾತದಲ್ಲಿ ವ್ಯತ್ಯಯವುಂಟಾಗುತ್ತದೆ ಎಂದು ಪ್ಯೂ ಹೇಳಿದೆ. ಇದು ಲಿಂಗಾಧರಿತ ಹಿಂಸೆ, ಅಪರಾಧ ಹಾಗೂ ಮಹಿಳೆಯರ ಕಳ್ಳ ಸಾಗಣೆಗೆ ದಾರಿ ಮಾಡಿಕೊಡುತ್ತಿದೆ. ಲಿಂಗಾಧರಿತ ಗರ್ಭಪಾತಕ್ಕೆ ಸಂಬಂಧಿಸಿರುವ ಅಂಶಗಳೆಂದರೆ, ಜಾತಿ, ಶ್ರೀಮಂತಿ ಕೆ ಹಾಗೂ ಶಿಕ್ಷಣ. ಸಾಮಾನ್ಯ ವರ್ಗಕ್ಕೆ ಸೇರಿದ ಸಿಖ್ಖರಲ್ಲಿ ಲಿಂಗಾನುಪಾತ ೧೨೧:೧೦೦ ಇದ್ದರೆ, ಪರಿಶಿಷ್ಟ ವರ್ಗದ ಸಿಖ್ಖರಲ್ಲಿ ೧೦೨:೧೦೦ ಇದ್ದಿತ್ತು. ಭೂಮಿಯ ಯಜಮಾನಿಕೆ ಮತ್ತು ಐಶ್ವರ್ಯ ಇದಕ್ಕೆ ಕಾರಣ. ಜರ್ಮನಿಯ ಇನ್‌ಸ್ಟಿಟ್ಯೂಟ್ ಆಫ್ ಲೇಬರ್ ಎಕನಾಮಿಕ್ಸ್(ಐಝಡ್‌ಎ)ನ ಇಂಥದ್ದೇ ಅಧ್ಯಯನದ ಪ್ರಕಾರ, ದೇಶದಲ್ಲಿ ೧೯೯೫-೨೦೦೫ ರ ಅವಧಿಯಲ್ಲಿ ವಾರ್ಷಿಕ ೦.೪೮ ಲಕ್ಷ ಹೆಣ್ಣು ಭ್ರೂಣಹತ್ಯೆ ನಡೆದಿದೆ. ಈ ಪ್ರವೃತ್ತಿ ಶೇ.೨೦ರಷ್ಟು ಶ್ರೀಮಂತ ಕುಟುಂಬಗಳು ಹಾಗೂ ಪಿಯು ವ್ಯಾಸಂಗ ಮಾಡಿರುವ ಮಹಿಳೆಯರಲ್ಲಿ ಕಂಡುಬಂದಿತ್ತು.
ದೂರು-ಶಿಕ್ಷೆ ಕಷ್ಟಕರ:
ಅಕ್ರಮ ಗರ್ಭಪಾತ ಪ್ರಕರಣಗಳನ್ನು ಸಾಬೀತು ಪಡಿಸುವುದು ಕಷ್ಟಕರ. ಏಕೆಂದರೆ, ಸಾಕ್ಷ್ಯ ದೊರಕುವುದಿಲ್ಲ. ಲಿಂಗ ಪತ್ತೆ-ಹೆಣ್ಣು ಭ್ರೂಣ ಹತ್ಯೆ ಸುಸಜ್ಜಿತ ಆಸ್ಪತ್ರೆಗಳಲ್ಲೇ ನಡೆಯಬೇಕೆಂದಿಲ್ಲ; ಹೆದ್ದಾರಿ ಯಿಂದ ದೂರವಿರುವ ಹಳ್ಳಿಗಳಲ್ಲೂ ನಡೆಯುತ್ತದೆ. ಸ್ಥಾಪಿತ ಸ್ಕ್ಯಾನಿಂಗ್ ಕೇಂದ್ರಗಳ ಬದಲು ಮೊಬೈಲ್ ಪ್ರಯೋಗಾಲಯಗಳಲ್ಲಿ ನಡೆಯುವುದರಿಂದ, ಪತ್ತೆ ಹಚ್ಚುವುದು ಸುಲಭವಲ್ಲ. ಮಂಡ್ಯದಲ್ಲಿ ಆಲೆಮನೆ ಸಮೀಪದ ಕೊಠಡಿಯಲ್ಲಿ ಸ್ಕ್ಯಾನಿಂಗ್ ನಡೆಯುತ್ತಿತ್ತು. ಸ್ಥಳೀಯರಿಗೆ ಈ ಬಗ್ಗೆ ಗೊತ್ತಿರಬೇಕೆಂದಿಲ್ಲ. ಅಷ್ಟಲ್ಲದೆ, ಭ್ರೂಣಲಿಂಗ ಪತ್ತೆ/ಗರ್ಭಪಾತ ದಂಪತಿ ಸಮ್ಮತಿಯಿಂದ ನಡೆಯುವುದರಿಂದ, ಇದು ನಮಗೆ ಸಂಬಂಧವಿಲ್ಲದ ಸಂಗತಿ ಎಂದುಕೊಳ್ಳುವ ಸಾಧ್ಯತೆ ಇದೆ. ಮಂಡ್ಯ ಘಟನೆಯ ಆರೋಪಿಗಳಲ್ಲಿ ಒಬ್ಬ ಕೇಬಲ್ ಟಿವಿ ಆಪರೇಟರ್. ಆತನಿಗೆ ಗ್ರಾಮದ ಸಮಸ್ತರ ಮಾಹಿತಿಯಿತ್ತು. ರಾಜ್ಯ ದಲ್ಲಿ ವೈದ್ಯರು, ನಕಲಿ ವೈದ್ಯರು ಮತ್ತು ಏಜೆಂಟರ ಜಾಲವೇ ಇದೆ. ಶೇ.೧ರಷ್ಟು ವೈದ್ಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ದುರಾಸೆ ಇದಕ್ಕೆ ಕಾರಣ.
ಅಧಿವೇಶನದಲ್ಲಿ ಚರ್ಚೆ: ಬೆಳಗಾವಿ ಅಧಿವೇಶನದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲಾಗಿತ್ತು. ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್, ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯಲು ರಾಜ್ಯಮಟ್ಟದ ಕಾರ್ಯಪಡೆ ರಚಿಸಲಾಗುವುದು. ಸ್ಕ್ಯಾನಿಂಗ್ ಯಂತ್ರಗಳ ಪರವಾನಗಿ ವಾರ್ಷಿಕ ನವೀಕರಣ, ಅಲ್ಟ್ರಾ ಸೌಂಡ್ ಯಂತ್ರಗಳ ಮರುಬಳಕೆ ಗೆ ನಿಯಮ, ಸಹಾಯವಾಣಿ ೧೦೪ರ ಮರುಆರಂಭ, ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡುವವರಿಗೆ ಪ್ರೋತ್ಸಾಹಧನ ೫೦,೦೦೦ ರೂ.ನಿಂದ ೧ ಲಕ್ಷಕ್ಕೆ ಹೆಚ್ಚಳ, ೫೬ ಉಪವಿಭಾಗಗಳ ಸ್ಕ್ಯಾನಿಂಗ್ ಕೇಂದ್ರಗಳ ಮೇಲ್ವಿಚಾರಣೆಗೆ ತಂಡಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಆಗಬೇಕಿರುವುದು ಜಿಲ್ಲಾ ಪರಿಶೀಲನೆ ಮತ್ತು ಅವಲೋಕನ ಸಮಿತಿಗಳ ಪುನಶ್ಚೇತನ; ಸಮಿತಿಯ ಸದಸ್ಯರು ಮತ್ತು ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು.
ಭ್ರೂಣ ಪತ್ತೆ ಪರೀಕ್ಷೆ ಹೆಣ್ಣು ಮಗುವಿನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಲಿಂಗಾನುಪಾತದ ಸಂಯೋಜನೆಯನ್ನು ಬದಲಿಸುತ್ತದೆ; ದೂರಕಾಲದಲ್ಲಿ ಸಾಮಾಜಿಕ ಸಂಕ್ಷೋಭೆಗೆ ಕಾರಣ ವಾಗುತ್ತದೆ. ಬೇಟಿ ಬಚಾವೋ,ಬೇಟಿ ಪಡಾವೋ ಹಾಗೂ ಭಾಗ್ಯಲಕ್ಷ್ಮಿ ಮತ್ತಿತರ ಸಬಲೀಕರಣ ಕಾರ್ಯಕ್ರಮಗಳ ಬಳಿಕವೂ ಹೆಣ್ಣು ಮಕ್ಕಳು ಪೋಷಕರಿಗೆ ಹೊರೆ ಎನಿಸಿರುವುದು ದೌರ್ಭಾಗ್ಯ. ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳು ಜಾಗೃತಿ ಆಂದೋಲನಗಳನ್ನು ಹಮ್ಮಿಕೊಂಡರೆ ಒಂದಿಷ್ಟು ಜಾಗೃತಿ ಮೂಡಬಹುದು; ಅದು ಆಗುತ್ತಿಲ್ಲ.
-ಋತ